ಬೆಂಗಳೂರು: ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದ ವಿಕೆಸಿ ಬಿಲ್ಡಿರ್ಸ್ ಮತ್ತು ಕನ್‌ಸ್ಟ್ರಕ್ಷನ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಪ್ರಕಾಶ್ ಚೌರಾಸಿಯಾ (47) ಸೋಮವಾರ ಮಧ್ಯಾಹ್ನ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಚ್‌ಎಎಲ್ ಬಳಿಯ ಚಿನ್ನಪ್ಪನಹಳ್ಳಿಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಮ್ಮ ಮನೆಯ ಸ್ನಾನದ ಗೃಹದಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ವಿಜಯ್ ಪ್ರಕಾಶ್ ಚೌರಾಸಿಯಾ ಪತ್ನಿ ಆರ್ಥಿಕ ಸಂಕಷ್ಟದಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿರುವುದಾಗಿ ಎಚ್‌ಎಎಲ್ ಪೊಲೀಸರು ಹೇಳಿದರು.
ಉತ್ತರ ಪ್ರದೇಶ ಮೂಲದ ಚೌರಾಸಿಯಾ ಕಳೆದ ಕೆಲ ವರ್ಷಗಳಿಂದ ನಗರದಲ್ಲಿ ವಿಕೆಸಿ ಬಿಲ್ಡರ್ಸ್ ಮತ್ತು ಕನ್‌ಸ್ಟ್ರಕ್ಷನ್ ಪ್ರೈ ಲಿ. ನಡೆಸುತ್ತಿದ್ದರು. ಇತ್ತೀಚೆಗೆ ತಮ್ಮ ವ್ಯವಹಾರದಲ್ಲಿ 50 ಕೋಟಿಗೂ ಅಧಿಕ ನಷ್ಟ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರವನ್ನು ವಿಜಯ್ ತಮ್ಮ ತಂದೆ ಹಾಗೂ ಪತ್ನಿ ಬಳಿ ಹೇಳಿಕೊಂಡಿದ್ದರು. ಈ ವೇಳೆ ಕುಟುಂಬ ಸದಸ್ಯರು ಸಂತೈಸಿದ್ದರು. ಆದರೆ, ಇತ್ತೀಚೆಗೆ ಸಾಲಗಾರರ ಒತ್ತಡ ಹೆಚ್ಚಾಗಿತ್ತು.
ಇದರಿಂದ ಮಾನಸಿಕ ಖನ್ನತೆಗೊಳಗಾಗಿದ್ದ ವಿಜಯ್ ಪ್ರಕಾಶ್ ಸೋಮವಾರ ಮಧ್ಯಾಹ್ನ ಮನೆಯ ಸ್ನಾನದ ಗೃಹದಲ್ಲಿ ಪರವಾನಿಗೆ ಹೊಂದಿರುವ ಪಿಸ್ತೂಲ್‌ನಿಂದ ಒಂದು ಸುತ್ತು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿದ ಕುಟುಂಬ ಸದಸ್ಯರು ಕೂಡಲೇ ಸ್ನಾನ ಗೃಹದ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಜಯ್‌ರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ವಿಜಯ್ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದರು.
ವಿಜಯ್ ಸಹೋದರರು ಕಳೆದ ಜನವರಿಯಲ್ಲಿ ಪಶ್ಚಿಮ ಬಂಗಾಳ ಮೂಲದ ವಂದನಾ ಎಂಬಾಕೆಯಿಂದ ಮಾರತ್‌ಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಕೊಡುವುದಾಗಿ ಹೇಳಿ 65 ಲಕ್ಷ ರೂ. ಪಡೆದಿದ್ದರು. ಆದರೆ, ಫ್ಲ್ಯಾಟ್ ಕೊಟ್ಟಿರಲಿಲ್ಲ. ಈ ಸಂಬಂಧ ಸೆ.4ರಂದು ವಂದನಾ, ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ದೂರು ನೀಡಿದ್ದರು. ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಡಿಸಿಪಿ ಅಬ್ದುಲ್ ಅಹದ್ ಕೇವಲ 24 ಗಂಟೆಯೊಳಗೆ ವಿಜಯ್ ಸಹೋದರರನ್ನು ಕರೆಸಿ ಎಚ್ಚರಿಕೆ ನೀಡಿ ಮಹಿಳೆಗೆ ಸೇರಬೇಕಿದ್ದ ಫ್ಲ್ಯಾಟ್ ಕೊಡಿಸಿದ್ದರು.