Advertisement

ರಿಯಲ್‌ ಎಸ್ಟೇಟ್‌ ಕಾಯ್ದೆ ಜಾರಿ ವಿಳಂಬಕ್ಕೆ ಒತ್ತಡ?

12:18 PM Apr 18, 2017 | |

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯಂತೆ ರಾಜ್ಯ ಸರ್ಕಾರ ಏ.30ರೊಳಗೆ ಕಾಯ್ದೆ ಜಾರಿಗೊಳಿಸುವ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸಬೇಕಿದೆ.

Advertisement

ಕಾಯ್ದೆ ಜಾರಿಯನ್ನು ಸ್ವಾಗತಿಸಿರುವ ಪ್ರತಿಷ್ಠಿತ ಬಿಲ್ಡರ್‌ಗಳು, ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಕೆಲ ಆಕ್ಷೇಪಣೆಗಳೊಂದಿಗೆ ತಕ್ಷಣ ನಿಯಮಾವಳಿಗಳನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಬೇಕು ಎಂಬ ಆಶಯ ವ್ಯಕ್ತಪಡಿಸಿವೆ. ಕಾಯ್ದೆ ಜಾರಿಯಾದರೆ ಪಾರದರ್ಶಕವಾಗಿ ವ್ಯವಹಾರ ನಡೆಸುವವರು ಹಾಗೂ ಸಾರ್ವಜನಿಕರು ಸಹ ನ್ಯಾಯಯುತ ಬೆಲೆಯಲ್ಲಿ ಸಕಾಲದಲ್ಲಿ ಫ್ಲ್ಯಾಟ್‌, ಮನೆಗಳನ್ನು ಕೊಳ್ಳಲು ಅನುಕೂಲವಾಗಲಿದೆ ಎಂಬ ಭಾವನೆಯೂ ವ್ಯಕ್ತವಾಗಿದೆ.

ಆದರೆ ರಿಯಲ್‌ ಎಸ್ಟೇಟ್‌, ಡೆವಲಪರ್‌ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಕೆಲ ಪ್ರಭಾವಿ ರಾಜಕಾರಣಿಗಳು ಕೇಂದ್ರದ ಕಾಯ್ದೆ ಪ್ರಕಾರ ಬಿಗಿ ನಿಯಮಾವಳಿ ರೂಪಿಸದೆ ಸಡಿಲಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದಾಗಿ ನವೆಂಬರ್‌ನಲ್ಲಿ ಕರಡು ನಿಯಮಾವಳಿಗಳನ್ನು ಪ್ರಕಟಿಸಿ ಆಕ್ಷೇಪಣೆ ಸ್ವೀಕಾರ ಪ್ರಕ್ರಿಯೆ ಮುಗಿದಿದ್ದರೂ ಅಂತಿಮ ಅಧಿಸೂಚನೆ ಹೊರಡಿಸದೆ ವಿಳಂಬ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

ವಸತಿ ನಿರ್ಮಾಣ ಕಾರ್ಯಗಳಲ್ಲಿ ಯಾರು ಬೇಕಾದರೂ ತೊಡಗಿಸಿಕೊಳ್ಳಬಹುದಾಗಿದ್ದು, ತಮಗೆ ತೋಚಿದಂತೆ ವ್ಯವಹಾರ ನಡೆಸುತ್ತಿದ್ದಾರೆ. ಇದೀಗ ನಿಯಮಾವಳಿ ರೂಪಿಸಿ ಎಲ್ಲರಿಗೂ ಅನ್ವಯಿಸುವಂತೆ ಕಾಯ್ದೆ ರೂಪಿಸುತ್ತಿರುವುದು ಉತ್ತಮವಾಗಿದೆ ಎಂದು “ಕ್ರೆಡಾಯ್‌’ ಪ್ರಧಾನ ಕಾರ್ಯದರ್ಶಿ ಸುರೇಶ್‌ ಹರಿ ತಿಳಿಸಿದ್ದಾರೆ.

ಕ್ರೆಡಾಯ್‌ನಿಂದ ಹಲವು ಆಕ್ಷೇಪಣೆ: ಕಾಯ್ದೆ ಜಾರಿ ಸಂಬಂಧ ಪ್ರಕಟಿಸಿದ ಕರಡು ನಿಯಮಾವಳಿಗೆ ಕೆಲ ಆಕ್ಷೇಪಣೆ ಸಲ್ಲಿಸಲಾಗಿತ್ತು. ಮುಖ್ಯವಾಗಿ ಯೋಜನೆಯ ಪ್ರಗತಿ ಪ್ರಮಾಣಕ್ಕೆ ಅನುಗುಣವಾಗಿ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಳ್ಳಲು ಮೂರು ಏಜೆನ್ಸಿಗಳ ಅನುಮತಿ ಪಡೆಯಬೇಕೆಂಬ ಕೇಂದ್ರದ ನಿಯಮದ ಬದಲಿಗೆ ಒಂದು ನಿರ್ದಿಷ್ಟ ಸಂಸ್ಥೆಯ ಅನುಮತಿ ಪಡೆಯುವ ವ್ಯವಸ್ಥೆ ಜಾರಿಗೆ ತರಬೇಕು.

Advertisement

ಕಾಯ್ದೆ ಜಾರಿಯಾದ ನಂತರ ಆರಂಭವಾಗುವ ಯೋಜನೆಗಳಿಗೆ ನಿಯಮಾವಳಿ ಅನ್ವಯವಾಗುವಂತಿರಬೇಕು. ನಿರ್ದಿಷ್ಟ ವಿಸ್ತೀರ್ಣಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ನಿರ್ಮಾಣವಾಗುವ ಮಾರಾಟದ ವಸತಿ ಸಮುಚ್ಚಯಗಳಿಗಷ್ಟೇ ಕಾಯ್ದೆ ಅನ್ವಯಿಸುವ ಬದಲು, ಮಾರಾಟಕ್ಕಾಗಿ ನಿರ್ಮಾಣವಾಗುವ ಎಲ್ಲ ವಸತಿ ಯೋಜನೆಗಳಿಗೂ ಅನ್ವಯಿಸಬೇಕು ಎಂಬ ಆಕ್ಷೇಪಣೆಯನ್ನೂ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಕೆಲ ಪ್ರಭಾವಿ ಜನಪ್ರತಿನಿಧಿಗಳೊಂದಿಗೆ ವ್ಯವಹಾರ ನಡೆಸುತ್ತಿರುವ ಡೆವಲಪರ್‌ಗಳು, ರಿಯಲ್‌ ಎಸ್ಟೇಟ್‌ ಸಂಸ್ಥೆಯವರು ಮೇ 1ರಿಂದ ಆರಂಭವಾಗುವ ವಸತಿ ಯೋಜನೆಗಳಿಗಷ್ಟೇ ಕಾಯ್ದೆಯ ನಿಯಮವಳಿ ಅನ್ವಯಿಸಬೇಕೆ ಹೊರತು ಹಾಲಿ ಯೋಜನೆಗಳಿಗೆ ಜಾರಿಗೊಳಿಸಬಾರದು. ಹಾಗೆಯೇ ಹಾಲಿ ವಸತಿ ಯೋಜನೆಯಡಿ ಹಣ ಪಾವತಿಸಿದವರಿಗೆ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಲು ಕಾಲಾವಕಾಶ ನೀಡಬೇಕು. ಆ ಮೂಲಕ ದಂಡ ವಿಧಿಸುವ ಪ್ರಕ್ರಿಯೆ ಕೈಬಿಡಬೇಕು. ಬಿಗಿ ನಿಯಮಾವಳಿ ರೂಪಿಸದೆ ಸಡಿಲಗೊಳಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಅಂತಿಮ ಹಂತದ ಪ್ರಕ್ರಿಯೆ ಬಾಕಿ
ಕೇಂದ್ರ ಸರ್ಕಾರದ ಸೂಚನೆಯಂತೆ ಮೇ 1ರೊಳಗೆ ಕಾಯ್ದೆ ಜಾರಿಗೊಳಿಸಲು ಅಂತಿಮ ಹಂತದ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದೆ. ಕರಡು ನಿಯಮಾವಳಿ ಸಂಬಂಧ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮವಾಗಿ ಸಚಿವ ಸಂಪುಟದ ಒಪ್ಪಿಗೆ ಪಡೆದು ಅಂತಿಮ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ವಿಧಿಸಿರುವ ನಿಯಮಾವಳಿಗಳನ್ನು ಸಡಿಲಗೊಳಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ. ಹಾಗಾಗಿ ನಿಯಮಾವಳಿ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next