ಚೆನ್ನೈ:ತಮಿಳುನಾಡಿನ ಮುದುಮಲೈ ಅರಣ್ಯದಲ್ಲಿ ಚಿತ್ರೀಕರಿಸಲಾಗಿದ್ದ ಕಿರುಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು ಈಗ ಹಳೆಯ ಸುದ್ದಿ.
ಎಲಿಫೆಂಟ್ ವಿಸ್ಪರರ್ಸ್‌ನ ನೈಜ ಹೀರೋಗಳಾದ ಬೊಮ್ಮನ್ ಮತ್ತು ಬೆಲ್ಲಿ ದಂಪತಿಯನ್ನು ಸ್ವತಃ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮ ಕಾರ್ಯಾಲಯಕ್ಕೆ ಆಹ್ವಾನಿಸಿ ಸನ್ಮಾನಿಸಿದ್ದಾರೆ. ಮಾತ್ರವಲ್ಲ ತಲಾ 1 ಲಕ್ಷ ರೂ.ಗಳ ಚೆಕ್ ಕೂಡ ನೀಡಿದ್ದಾರೆ.
ಜತೆಗೆ, ರಾಜ್ಯದ ಆನೆ ಶಿಬಿರಗಳಲ್ಲಿ ಕೆಲಸ ಮಾಡುತ್ತಿರುವ 91 ಮಂದಿಗೂ ತಲಾ 1 ಲಕ್ಷ ರೂ.ಗಳನ್ನು ನೀಡಿದ್ದಾರೆ. ಈ ಚಿತ್ರದಿಂದ ತಮಿಳುನಾಡಿನ ಅರಣ್ಯಗಳಲ್ಲಿ ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಕಟ್ಟುನಾಯಕನ್ ಬುಡಕಟ್ಟು ಜನಾಂಗಕ್ಕೆ ಸೇರಿದ ಬೊಮ್ಮನ್ ಮತ್ತು ಬೆಲ್ಲಿ ದಂಪತಿಗೆ ರಘು ಎಂಬ ಅನಾಥ ಮರಿಯಾನೆಯೊಂದಿಗೆ ಇರುವ ಒಡನಾಟದ ಕಥೆಯನ್ನು ಈ ಕಿರುಚಿತ್ರ ಹೇಳುತ್ತದೆ.
ನೃತ್ಯ ಮಾಡಿಲ್ಲವೇಕೆ?:
ಆಸ್ಕರ್ ಅಕಾಡೆಮಿ ಪ್ರಶಸ್ತಿಯ ವೇದಿಕೆಯಲ್ಲಿ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಜೂ.ಎನ್‌ಟಿಆರ್ ಮತ್ತು ರಾಮ್‌ಚರಣ್ ಹೆಜ್ಜೆ ಹಾಕಲಿಲ್ಲವೇಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಹಾಡಿಗೆ ಡಾನ್ಸ್ ಮಾಡುವಂತೆ ಮೊದಲಿಗೆ ಇಬ್ಬರು ನಟರನ್ನೂ ಕೇಳಿಕೊಳ್ಳಲಾಗಿತ್ತು. ಆದರೆ, ನೃತ್ಯದ ರಿಹರ್ಸಲ್‌ಗೆ ಸಮಯದ ಅಭಾವವಿದ್ದ ಕಾರಣ ಜೂ.ಎನ್‌ಟಿಆರ್ ಮತ್ತು ರಾಮ್‌ಚರಣ ಹಿಂದೇಟು ಹಾಕಿದ್ದರು ಎಂದು ಪ್ರೊಡ್ನೂಸರ್ ರಾಜ್‌ಕಪೂರ್ ಹೇಳಿದ್ದಾರೆ.
Related Articles
ನಾಟು -ನಾಟು ಹುಡುಕಾಟ ಶೇ.1105 ಹೆಚ್ಚಳ
ಆರ್‌ಆರ್‌ಆರ್ ಸಿನಿಮಾದ ನಾಟು-ನಾಟು ಹಾಡಿನ ಮುಡಿಗೆ ಆಸ್ಕರ್ ಗರಿ ಏರುತ್ತಿದ್ದಂತೆ ವಿಶ್ವಾದ್ಯಂತ ಹಾಡಿನ ಹುಡುಕಾಟವೂ ಹೆಚ್ಚಾಗಿತ್ತು. ಗೂಗಲ್‌ನಲ್ಲಿ ನಾಟುಗಾಗಿ ಹುಡುಕಾಟ ನಡೆಸಿದ ಪ್ರಮಾಣ ಶೇ.1,105ರಷ್ಟು ಹೆಚ್ಚಾಗಿತ್ತು ಎಂದು ವರದಿಯೊಂದು ತಿಳಿಸಿದೆ. ಜಪಾನೀಸ್ ಆನ್‌ಲೈನ್ ಕ್ಯಾಸಿನೋ ಗೈಡ್ 6ತಕರಕುಜಿ ಗೂಗಲ್ ಟ್ರೆಂಡ್ ಡೇಟಾವನ್ನು ಕಲೆಹಾಕಿದೆ. ಅದರಂತೆ, ಆಸ್ಕರ್ ಪ್ರಶಸ್ತಿ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಜಗತ್ತಿನಾದ್ಯಂತ ಗೂಗಲ್‌ನಲ್ಲಿ ಜನರು ಈ ಹಾಡಿಗಾಗಿ ಹುಟುಕಾಟ ನಡೆಸಿದ್ದಾರೆ. ಇದು ಸಾಮಾನ್ಯ ಹುಡುಕಾಟ ಪ್ರಮಾಣಕ್ಕಿಂತ 10 ಪಟ್ಟು ಹೆಚ್ಚು ಎನ್ನಲಾಗಿದೆ. ಈ ಹಾಡು ಟಿಕ್‌ಟಾಕ್‌ನಲ್ಲೂ ಭಾರೀ ಸದ್ದುಮಾಡಿದ್ದು, 52.6 ದಶಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.