ಬೆಂಗಳೂರು: ಹಿಂದೂ ಮಹಾಸಾಗರ ಪ್ರದೇಶದ ದೇಶಗಳಿಗೆ ಕ್ಷಿಪಣಿಗಳು, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳ ಸಹಿತ ವಿವಿಧ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲು ಭಾರತ ಸಿದ್ಧವಿದೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ದಕ್ಷಿಣ ಚೀನ ಸಮುದ್ರದಲ್ಲಿ ಪ್ರಾಬಲ್ಯ ಹೆಚ್ಚಿಸಿ ಕೊಳ್ಳಲು ಚೀನ ಹರಸಾಹಸ ಪಡುತ್ತಿರುವ ಮತ್ತು ಪೂರ್ವ ಲಡಾಖ್‌ನಲ್ಲೂ ಭಾರತದೊಂದಿಗೆ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸಚಿವ ರಾಜನಾಥ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಹಿಂದೂ ಮಹಾ ಸಾಗರ ಪ್ರದೇಶ (ಇಂಡಿಯನ್ ಓಶನ್ ರೀಜನ್-ಐಒಆರ್)ದ ದೇಶಗಳ ರಕ್ಷಣ ಸಚಿವರ ಸಮ್ಮೇಳನದಲ್ಲಿ ಮಾತ ನಾಡಿದ ಅವರು, ಐಒಆರ್‌ನಲ್ಲಿರುವ ಬಹುತೇಕ ದೇಶ ಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗುತ್ತಿದ್ದು, ಹೊಸ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಪ್ರಾದೇಶಿಕ ಸಹಭಾಗಿತ್ವದಿಂದ ನಾವು ಇನ್ನಷ್ಟು ಬಲ ಪಡೆಯಲು ಸಾಧ್ಯ. ಭಾರತವಂತೂ ಹಿಂದೂ ಮಹಾಸಾಗರ ವ್ಯಾಪ್ತಿಯ ದೇಶಗಳಿಗೆ ಕ್ಷಿಪಣಿ ವ್ಯವಸ್ಥೆ, ಲಘು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್, ಬಹೂಪಯೋಗಿ ಲಘು ಸಾಗಣೆ ವಿಮಾನ, ಯುದ್ಧ ಮತ್ತು ಗಸ್ತು ನೌಕೆಗಳು, ಆರ್ಟಿಲರಿ ಗನ್ ವ್ಯವಸ್ಥೆ, ಟ್ಯಾಂಕ್‌ಗಳು, ರಾಡಾರ್‌ಗಳು, ಎಲೆಕ್ಟ್ರಾನಿಕ್ ಯುದ್ಧ ಸಾಮಗ್ರಿಗಳು ಮತ್ತಿತರ ವ್ಯವಸ್ಥೆಗಳನ್ನು ಸರಬರಾಜು ಮಾಡಲು ತಯಾರಿದೆ ಎಂದು ಹೇಳಿದ್ದಾರೆ.
ನೌಕಾ ವಲಯದಲ್ಲಿ ಶಾಂತಿ ಕಾಪಾಡೋಣ
ಐಒಆರ್ ದೇಶಗಳ ಸುಸ್ಥಿರ ಪ್ರಗತಿ ಮತ್ತು ಅಭಿವೃದ್ಧಿಗೆ ನೌಕಾ ಸಂಪನ್ಮೂಲ ಅತ್ಯಂತ ಪ್ರಮುಖ. ನಾವು ಹಿಂದೂ ಮಹಾಸಾಗರ ವ್ಯಾಪ್ತಿಯ ನೌಕಾ ಪ್ರದೇಶವು ಶಾಂತಿಯುತವಾಗಿರುವಂತೆ ಮತ್ತು ಎಲ್ಲ ದೇಶಗಳಿಗೂ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.