Advertisement

ಅರಸು ಮಾದರಿ ಅನುಸರಿಸಲು ಡಿಕೆಶಿ “ಸಿದ್ಧ’

11:14 PM Aug 24, 2020 | mahesh |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಮುಂದಿನ ವಿಧಾನಸಭೆ ಚುನಾವಣೆಗೆ ಹೊಸ ಮುಖಗಳ ಹುಡುಕಾಟ ನಡೆಸುತ್ತಿದ್ದು, ಇದಕ್ಕೆ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು “ದೇವರಾಜ ಅರಸು ಮಾದರಿ’ಯನ್ನು ಪಾಲಿಸಲು ಸಿದ್ಧರಾಗಿದ್ದಾರೆ. ಈ ಪ್ರಯೋಗಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಯಾವುದೇ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆ ಎದುರಾ ದರೂ ಅಭ್ಯರ್ಥಿಗಳು ಸಿದ್ಧರಾಗಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ರಾಜ್ಯದಲ್ಲಿ 65ರಿಂದ 70 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್‌ ನೀಡಲು ಮುಂದಾಗಿದ್ದಾರೆ. ಈ ಕುರಿತು ಜಿಲ್ಲಾಧ್ಯಕ್ಷರಿಗೆ ಸಂದೇಶ ರವಾನೆಯಾಗಿದೆ ಎಂದು ತಿಳಿದು ಬಂದಿದೆ.

Advertisement

ಖಾಲಿ ಕ್ಷೇತ್ರಗಳಿಗೆ ಆದ್ಯತೆ
ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರಸ್ತುತ 64 ಕಾಂಗ್ರೆಸ್‌ ಶಾಸಕರಿದ್ದಾರೆ. ಉಳಿದೆಡೆ ಮಾಜಿ ಶಾಸಕರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎನ್ನುವುದರ ಮಾಹಿತಿ ಪಡೆಯಲು ಡಿಕೆಶಿ ನಿರ್ಧರಿಸಿದ್ದಾರೆ. ಸೋತವರು ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಿದ್ದಾರೆ. ಜತೆಗೆ ಕಳೆದ ಚುನಾವಣೆಯಲ್ಲಿ 20 ಸಾವಿರಕ್ಕಿಂತ ಅಧಿಕ ಮತಗಳಿಂದ ಸೋತವರು ಹಾಗೂ ಸತತವಾಗಿ ಮೂರು ಚುನಾವಣೆಗಳಲ್ಲಿ ಪರಾಭವಗೊಂಡವರಿಗೂ ಟಿಕೆಟ್‌ ನೀಡದಿರಲು ಆಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.

ದೇಶದಲ್ಲಿ ಕಾಂಗ್ರೆಸ್‌ ಇಬ್ಭಾಗವಾದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ನ ಬಹುತೇಕ ಹಿರಿಯ ನಾಯಕರು ವೀರೇಂದ್ರ ಪಾಟೀಲ್‌ ನೇತೃತ್ವದ ಸಂಸ್ಥಾ ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದರು. ಆಗ ರಾಜ್ಯದಲ್ಲಿ ಇಂದಿರಾ ಕಾಂಗ್ರೆಸ್‌ನ ನೇತೃತ್ವ ವಹಿಸಿಕೊಂಡಿದ್ದ ಡಿ. ದೇವರಾಜ್‌ ಅರಸು ಅವರು ಚುನಾವಣೆಯಲ್ಲಿ ಬಹುತೇಕ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿದ್ದರು. ಅದರಲ್ಲಿ ಯಶಸ್ವಿಯಾದ ಪರಿಣಾಮ ಸುಮಾರು 50ಕ್ಕೂ ಹೆಚ್ಚು ಹೊಸಬರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ಮಾಧ್ಯಮ ಜತೆಯೂ ಕೆಲವರು ಸೇರಿಕೊಂಡಿದ್ದಾರೆ: ರಮ್ಯಾ
ಬೆಂಗಳೂರು: ಕಾಂಗ್ರೆಸ್‌ನ ಕೆಲವು ನಾಯಕರು ಬಿಜೆಪಿ ಜತೆ ಮಾತ್ರ ಸೇರಿ ಕೊಂಡದ್ದಲ್ಲ, ಅವರು ಮಾಧ್ಯಮಗಳ ಜತೆಯೂ ಸೇರಿಕೊಂಡಿದ್ದಾರೆ ಎಂದು ಮಾಜಿ ಸಂಸದೆ ರಮ್ಯಾ ಆರೋಪಿಸಿದ್ದಾರೆ.ರಾಹುಲ್‌ ಗಾಂಧಿ ಮಾಡಿರುವ ಆರೋಪಕ್ಕೆ ಪೂರಕವಾಗಿ ಇವರು ಮೇಲಿನ ಆರೋಪದ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next