Advertisement
ಚಾಂಪಿಯನ್ ಭಾರತ ಹೊರತುಪಡಿಸಿ ಈ ಪಂದ್ಯಾವಳಿಯಲ್ಲಿ ಕಾಣಿಸಿಕೊಳ್ಳುವ ಇತರ ತಂಡ ಗಳೆಂದರೆ ಆತಿಥೇಯ ಇಂಗ್ಲೆಂಡ್, ವಿಶ್ವ ಚಾಂಪಿಯನ್ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ನ್ಯೂಜಿ ಲ್ಯಾಂಡ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ. ಆದರೆ ಒಂದು ಕಾಲದ ಘಟಾನುಘಟಿ ತಂಡ, ಮೊದಲೆರಡು ಏಕದಿನ ವಿಶ್ವಕಪ್ ಎತ್ತಿ ಹಿಡಿದು ಮೆರೆದಾಡಿದ ವೆಸ್ಟ್ ಇಂಡೀಸ್ ಈ ಪಂದ್ಯಾವಳಿಯಲ್ಲಿ ಸ್ಥಾನ ಸಂಪಾದಿಸದೇ ಇರುವು ದೊಡ್ಡ ಕೊರತೆ.
Related Articles
ಇದು ಕಠಿನ ಮಾದರಿಯ ಲೀಗ್ ಸ್ಪರ್ಧೆಗಳನ್ನು ಹೊಂದಿರುವುದರಿಂದ ಆರಂಭದಲ್ಲೇ ಗೆಲುವಿನ ಖಾತೆ ತೆರೆಯಬೇಕಾದುದು ಅನಿವಾರ್ಯ. ಸ್ವಲ್ಪ ಎಡವಿದರೂ ತಂಡ ಬಹಳ ಬೇಗ ಕೂಟದಿಂದ ನಿರ್ಗಮಿಸುವ ಅಪಾಯವಿದೆ. ಹೀಗಾಗಿ ಪ್ರತಿಯೊಂದು ತಂಡಕ್ಕೂ ಮೊದಲ ಪಂದ್ಯದಲ್ಲೇ ಗೆಲುವು ಅನಿವಾರ್ಯ ಎಂಬ ಸ್ಥಿತಿ ಇದ್ದು, ಆಗಷ್ಟೇ ಇವುಗಳು “ಸೇಫ್ ಝೋನ್’ನಲ್ಲಿರುತ್ತವೆ. ಮೊದಲ ಪಂದ್ಯದಲ್ಲೇ ಸೋಲನುಭವಿಸಿದರೆ ಆ ತಂಡಕ್ಕೆ ಉಳಿದೆರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡ ಎದುರಾಗುತ್ತದೆ. ಹೀಗಾಗಿ ನೆಚ್ಚಿನ ತಂಡ, ಬಲಾಡ್ಯ ತಂಡ ಎಂಬುದಕ್ಕಿಂತ ಮಿಗಿಲಾದ ಲೆಕ್ಕಾಚಾರವಿಲ್ಲಿ ಕೆಲಸ ಮಾಡುತ್ತದೆ. ಅಕಸ್ಮಾತ್ ಆರಂಭಿಕ ಪಂದ್ಯದಲ್ಲೇ ಬಾಂಗ್ಲಾದೇಶವೇನಾದರೂ ಇಂಗ್ಲೆಂಡಿಗೆ ನೀರು ಕುಡಿಸಿದರೆ ಆಗ ಇಡೀ ಪಂದ್ಯಾವಳಿಯ ಚಿತ್ರಣವೇ ಬದಲಾಗಬಹುದು!
Advertisement
ವೆಸ್ಟ್ ಇಂಡೀಸ್‌ನಲ್ಲಿ ನಡೆದ 2007ರ ಏಕದಿನ ವಿಶ್ವಕಪ್ ಪಂದ್ಯಾವಳಿಯಷ್ಟೇ ಕಠಿನವಾದ ಮಾದರಿ ಯನ್ನು ಈ ಚಾಂಪಿಯನ್ಸ್ ಟ್ರೋಫಿ ಹೊಂದಿದೆ. ಅಲ್ಲಿ ಕ್ರಮವಾಗಿ ಬಾಂಗ್ಲಾದೇಶ ಹಾಗೂ ಅಯರ್‌ಲ್ಯಾಂಡ್ ಕೈಯಲ್ಲಿ ಲೀಗ್‌ನಲ್ಲಿ ಸೋಲನುಭವಿಸಿದ ಭಾರತ ಮತ್ತು ಪಾಕಿಸ್ಥಾನದ ಕತೆ ಏನಾಗಿತ್ತು ಎಂಬುದನ್ನೊಮ್ಮೆ ನೆನಪಿಸಿಕೊಳ್ಳಿ!
ಇಂಗ್ಲೆಂಡ್, ಆಸ್ಟ್ರೇಲಿಯ ಬಲಿಷ್ಠಈ ಪಂದ್ಯಾವಳಿಯಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ವರ್ಲ್ಡ್ ಚಾಂಪಿಯನ್ ಆಸ್ಟ್ರೇಲಿಯ ಹೆಚ್ಚು ಬಲಾಡ್ಯ ಹಾಗೂ ಅಪಾಯಕಾರಿ ತಂಡಗಳಾಗಿ ಹೊರ ಹೊಮ್ಮುವ ಸಾಧ್ಯತೆಯೊಂದು ಕಂಡುಬರುತ್ತದೆ. ಇವೆರಡೂ “ಎ’ ವಿಭಾಗದಲ್ಲಿವೆ. ಮಾರ್ಗನ್ ನಾಯಕತ್ವದ ಇಂಗ್ಲೆಂಡ್ “ಫಿಫ್ಟಿ ಓವರ್ ಸ್ಪೆಷಲಿಸ್ಟ್’ ಆಟಗಾರರ ದೊಡ್ಡ ಪಡೆಯನ್ನೇ ಹೊಂದಿದ್ದು, ತವರಿನ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡು ಮುನ್ನುಗ್ಗುವ ಉಮೇದಿನಲ್ಲಿದೆ. ಸ್ಟೀವ್ ಸ್ಮಿತ್ ಮುಂದಾಳತ್ವದ ಆಸ್ಟ್ರೇಲಿಯ ವಾರ್ನರ್, ಫಿಂಚ್, ಸ್ಟಾರ್ಕ್, ಪ್ಯಾಟಿನ್ಸನ್, ಕಮಿನ್ಸ್ ಅವರಂಥ ಸ್ಟಾರ್ ಆಟಗಾರರನ್ನು ಹೊಂದಿದೆ. ಆಲ್‌ರೌಂಡರ್ ಮೊಸಸ್ ಹೆನ್ರಿಕ್ಸ್ “ಎಕ್ಸ್ ಫ್ಯಾಕ್ಟರ್’ ಆಗುವ ಸಾಧ್ಯತೆ ಇದೆ.ಇದೇ ಗುಂಪಿನಲ್ಲಿರುವ ನ್ಯೂಜಿಲ್ಯಾಂಡನ್ನು ಕಡೆಗಣಿಸುವಂತಿಲ್ಲ. “ಬ್ಲ್ಯಾಕ್ ಕ್ಯಾಪ್ಸ್’ ಪಡೆ ಈ ಕೂಟದ ಡಾರ್ಕ್ ಹಾರ್ಸ್’ ಕೂಡ ಹೌದು! ಅಗ್ರಸ್ಥಾನಿ ದ. ಆಫ್ರಿಕಾ ಕತೆ ಏನು?
“ಬಿ’ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ಥಾನ, ಶ್ರೀಲಂಕಾ ನಡುವೆ ತೀವ್ರ ಪೈಪೋಟಿ ಇದೆ. ಎಬಿಡಿ ನೇತೃತ್ವದ ದಕ್ಷಿಣ ಆಫ್ರಿಕಾ ನಂ.1 ಏಕದಿನ ತಂಡವೆಂಬ ಹೆಗ್ಗಳಿಕೆಯೊಂದಿಗೆ ಕೂಟದಲ್ಲಿ ಪಾಲ್ಗೊಳ್ಳುತ್ತಿದೆ. ಐಸಿಸಿ ಟೂರ್ನಿಗಳಲ್ಲಿ ಚೋಕರ್ ಹಣೆಪಟ್ಟಿ ಅಂಟಿಸಿಕೊಂಡರೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಹರಿಣಗಳ ಪಡೆ ಈ ಅಪವಾದ ಹೊತ್ತಿಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕು. ಏಕೆಂದರೆ 1988ರ ಪ್ರಥಮ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದೇ ದಕ್ಷಿಣ ಆಫ್ರಿಕಾ! ಭಾರತ, ಪಾಕಿಸ್ಥಾನವನ್ನು ಹೊರತುಪಡಿಸಿದರೆ ಏಶ್ಯದ ಮತ್ತೂಂದು ತಂಡವಾದ ಶ್ರೀಲಂಕಾ ಇದೇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆದರೆ ಈಗಿನ ಬಲಾಬಲದ ಲೆಕ್ಕಾಚಾರದಲ್ಲಿ ಶ್ರೀಲಂಕಾ ಬಹಳ ಹಿಂದುಳಿದಿದೆ. ಜತೆಗೆ ಬಾಂಗ್ಲಾದೇಶ ಕೂಡ. ಬೌಲರ್‌ಗಳೇ, ಹುಷಾರ್…!
ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಬ್ಯಾಟ್ಸ್‌ಮನ್‌ಗಳ ಪಾಲಿನ ಸ್ವರ್ಗವಾಗಲಿದೆ ಎಂಬುದೊಂದು ಲೆಕ್ಕಾಚಾರ. ಇದಕ್ಕೆ ಈವರೆಗೆ ನಡೆದ ಅಭ್ಯಾಸ ಪಂದ್ಯಗಳೇ ಸಾಕ್ಷಿ. ಇಂಗ್ಲೆಂಡ್ ಪಿಚ್‌ಗಳಲ್ಲಿ ಎಷ್ಟೂ ರನ್ ಪೇರಿಸಬಹುದು, ಎಷ್ಟೂ ರನ್ನನ್ನು ಯಶಸ್ವಿಯಾಗಿ ಚೇಸ್ ಮಾಡಬಹುದೆಂಬುದು ಸಾಬೀತಾಗಿದೆ. ಹೀಗಾಗಿ ಬೌಲರ್‌ಗಳು ಹುಷಾರಾಗಿರಬೇಕಾದುದು ಹೆಚ್ಚು ಅಗತ್ಯ! ಭಾರತಕ್ಕಿದೆಯೇ ಅವಕಾಶ?
ಹಾಲಿ ಚಾಂಪಿಯನ್ ಎಂಬುದು ಭಾರತದ ಪಾಲಿನ ಹೆಗ್ಗಳಿಕೆ. 2013ರಲ್ಲಿ ಇಂಗ್ಲೆಂಡಿನಲ್ಲೇ ನಡೆದ ಪಂದ್ಯಾವಳಿಯಲ್ಲಿ ಭಾರತ ಇಂಗ್ಲೆಂಡನ್ನೇ ಮಣಿಸಿ ಪ್ರಶಸ್ತಿ ಗೆದ್ದಿತ್ತು. ಆದರೆ ಮಳೆಯಿಂದಾಗಿ ಅಂದಿನ ಪಂದ್ಯವನ್ನು 50ರಿಂದ 20 ಓವರ್‌ಗಳಿಗೆ ಇಳಿಸಲಾಗಿತ್ತು. ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಸಾರಥಿಯಾಗಿದ್ದರು. ಅಂದಿನ ಧೋನಿ ತಂಡದ ಸಾಧನೆಯನ್ನು ಈ ಬಾರಿ ಕೊಹ್ಲಿ ಪಡೆ ಪುನರಾವರ್ತಿಸಿ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡೀತೇ ಎಂಬುದು ಭಾರತದ ಕ್ರಿಕೆಟ್ ಅಭಿಮಾನಿಗಳ ಕುತೂಹಲ. ಅಂದಿನ ಚಾಂಪಿಯನ್ ತಂಡದ 9 ಆಟಗಾರರು ಈ ಸಲವೂ ಇರುವುದು ಭಾರತದ ಪಾಲಿನ ಹೆಗ್ಗಳಿಕೆ. ಆದರೆ ಕೋಚ್ ಅನಿಲ್ ಕುಂಬ್ಳೆ ಹಾಗೂ ತಂಡದ ಆಟಗಾರರ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸಂಗತಿ ಇದೇ ಸಂದರ್ಭದಲ್ಲಿ ಹೊಗೆಯಾಡಿರುವುದು ಟೀಮ್ ಇಂಡಿಯಾಕ್ಕೆ ಎದುರಾಗಿರುವ ಕಂಟಕ. ಹೀಗಿರುವಾಗ ಭಾರತ ಇದನ್ನೆಲ್ಲ ಮೀರಿ ನಿಂತು ಹೋರಾಟ ಸಂಘಟಿಸಬೇಕಾದುದು ಅನಿವಾರ್ಯ. ಸಾಮರ್ಥ್ಯದ ವಿಚಾರದಲ್ಲಿ ಭಾರತಕ್ಕೆ ಸಂಪೂರ್ಣ ಮತವಿದೆ. ಇಂಗ್ಲೆಂಡಿನ ಸೀಮ್ ಹಾಗೂ ಸ್ವಿಂಗ್ ಟ್ರ್ಯಾಕ್‌ಗಳಿಗೆ ಹೇಳಿ ಮಾಡಿಸಿದಂತಿರುವ ಬೌಲರ್‌ಗಳೇ ಭಾರತದ ಆಧಾರಸ್ತಂಭವಾಗಿದ್ದಾರೆ. ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಉಮೇಶ್ ಯಾದವ್ ಈ ಪಂದ್ಯಾವಳಿಯಲ್ಲಿ ಕ್ಲಿಕ್ ಆಗುವ ಎಲ್ಲ ಸಾಧ್ಯತೆ ಇದೆ. ಎರಡೂ ಅಭ್ಯಾಸ ಪಂದ್ಯಗಳಲ್ಲಿ ಭಾರತದ ಬೌಲಿಂಗ್ ಮಿಂಚಿರುವುದು ಈ ಮಾತಿಗೆ ಹೆಚ್ಚಿನ ಪುಷ್ಟಿ ಕೊಡುತ್ತದೆ.ಟೀಮ್ ಇಂಡಿಯಾ ಬ್ಯಾಟಿಂಗ್ ಕೂಡ ಬಲಿಷ್ಠವಾಗಿದೆ. ಆದರೆ ಬಹಳ ಸಮಯದ ಬಳಿಕ ಆರಂಭಿಕನಾಗಿ ಇಳಿಯುವ ರೋಹಿತ್ ಶರ್ಮ ಮಿಂಚುವುದು ಮುಖ್ಯ. ಧವನ್, ಯುವರಾಜ್, ಧೋನಿ, ಕೊಹ್ಲಿ, ಜಾಧವ್, ಕರ್ತಿಕ್ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಯಾವುದಕ್ಕೂ ಭಾರತ ರವಿವಾರದ ಮೊದಲ ಹರ್ಡಲ್ಸ್ ದಾಟುವುದು ಮುಖ್ಯ. ಇದು ಪಾಕಿಸ್ಥಾನದ ರೂಪದಲ್ಲಿ ಎದುರಾಗಲಿದೆ. ಇಲ್ಲಿ ಗೆದ್ದರೆ ಕೊಹ್ಲಿ ಪಡೆಗೆ ಸೆಮಿಫೈನಲ್ ಹೆಚ್ಚು ದೂರವೇನಲ್ಲ. ಅಕಸ್ಮಾತ್ ಸೋತರೆ ಮುಂದಿನ ಹಾದಿ ದುರ್ಗಮಗೊಳ್ಳುವುದು ಖಚಿತ. ಏಕೆಂದರೆ, ವಿಶ್ವಕಪ್‌ನಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಅಜೇಯವಾಗಿರಬಹುದು, ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಲ್ಲ!