Advertisement

ಜಲ್ಲಿ ಮಿಶ್ರಣ ಘಟಕ: ಜಿಲ್ಲಾಧಿಕಾರಿಗಳಿಗೆ ದೂರು

01:25 AM Dec 19, 2018 | Karthik A |

ಉಪ್ಪುಂದ: ನಾವುಂದ ಗ್ರಾಮದ ಅರೆಹೊಳೆ ಕುದ್ರುಕೋಡು ಎಂಬಲ್ಲಿನ ಹೆದ್ದಾರಿ ಕಾಮಗಾರಿ ಗುತ್ತಿಗೆ ಸಂಸ್ಥೆಯ ಜಲ್ಲಿ – ಟಾರು ಮಿಶ್ರಣ ಘಟಕದ ವಿರುದ್ಧ ಅಲ್ಲಿನ ನಿವಾಸಿಗಳ ನಿಯೋಗ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ದೂರು ಸಲ್ಲಿಸಿತು. ನಾಲ್ಕು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಈ ಘಟಕದಲ್ಲಿ ಬೃಹತ್‌ ಯಂತ್ರದ ಮೂಲಕ ಕಲ್ಲನ್ನು ಒಡೆದು ಜಲ್ಲಿ ಮತ್ತು ಜಲ್ಲಿ ಹುಡಿ ತಯಾರಿಸಲಾಗುತ್ತಿದೆ. ಜಲ್ಲಿ-ಟಾರು ಹಾಗೂ ಜಲ್ಲಿ-ಹುಡಿ ಮಿಶ್ರಣ ತಯಾರಿಸಿ, ಸಾಗಿಸಲಾಗುತ್ತದೆ. ಈ ಕಾರ್ಯಾಚರಣೆಯಿಂದ ಪರಿಸರದ ನಿವಾಸಿಗಳಿಗೆ ಹಲವು ತೊಂದರೆಗಳಾಗುತ್ತಿವೆ. ಯಂತ್ರದ ಸದ್ದಿನಿಂದ ಶಬ್ದ ಮಾಲಿನ್ಯ, ಜಲ್ಲಿ-ಟಾರು ಮತ್ತು ಜಲ್ಲಿ-ಹುಡಿ ಸಂಗ್ರಹದಿಂದ ಪರಿಸರ ಮಾಲಿನ್ಯ ಆಗುತ್ತಿದೆ. ಅಲ್ಲಿಂದ ಗಾಳಿಯಲ್ಲಿ ಹಾರಿ ಬರುವ ಹುಡಿ ಸೇವನೆಯಿಂದ ಹಲವರ ಆರೋಗ್ಯ ಕೆಟ್ಟಿದೆ. ಹುಡಿ ಸಸ್ಯಗಳ ಮೇಲೆ ಸಂಗ್ರಹವಾಗಿ ಕೃಷಿ ನಾಶವಾಗಿದೆ. 

Advertisement

ನೀರಿನೊಂದಿಗೆ ಬೆರೆತು, ಜಮೀನಿನ ಮೇಲೆ ಹರಡಿ ಭೂಮಿ ಬರಡಾಗುತ್ತಿದೆ. ಸಾರ್ವಜನಿಕರ ಆಗ್ರಹದ ಫಲವಾಗಿ ಗ್ರಾ.ಪಂ. ಘಟಕಕ್ಕೆ ಹಿಂದೆ ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ಹಿಂತೆಗೆದುಕೊಂಡಿದೆ. ವಿದ್ಯುತ್‌ ಸಂಪರ್ಕ ಕಡಿತಗೊಳಿಸುವಂತೆ ಮೆಸ್ಕಾಂಗೆ ಪತ್ರ ಬರೆದಿದೆ. ಜನರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದಲ್ಲದೆ ಎರಡು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಯಾವುದೂ ಫಲ ನೀಡಿಲ್ಲ ಎಂದು ನಿಯೋಗದ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ದೂರು ಸ್ವೀಕರಿಸಿದ ಅವರು ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎಂದು ನಿಯೋಗದ ಜತೆ ತೆರಳಿದ್ದ ಅಶೋಕಕುಮಾರ ಶೆಟ್ಟಿ ಮತ್ತು ನಾಗೇಂದ್ರ ದೇವಾಡಿಗ ತಿಳಿಸಿದ್ದಾರೆ.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಎನ್‌. ನರಸಿಂಹ ದೇವಾಡಿಗ, ಉಪಾಧ್ಯಕ್ಷೆ ಜಯಂತಿ ಮೊಗವೀರ, ಸದಸ್ಯರಾದ ಪ್ರಕಾಶ ದೇವಾಡಿಗ, ಜಯಂತಿ ಶೆಟ್ಟಿ, ಲಕ್ಷ್ಮೀ ದೇವಾಡಿಗ, ಗಣೇಶ ಪೂಜಾರಿ, ರಾಮ ಖಾರ್ವಿ, ಪ್ರೇಮಾ ಗಾಣಿಗ ಸೇರಿದಂತೆ 50ಕ್ಕೂ ಹೆಚ್ಚು ಮಹಿಳೆಯರು, ಪುರುಷರು ನಿಯೋಗದಲ್ಲಿ ಉಪಸ್ಥಿತರಿದ್ದರು.  ಈ ಸಂದರ್ಭ ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್‌ ಅವರನ್ನು ಭೇಟಿಯಾದ ಜನರು ದೂರಿನ ಪ್ರತಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next