Advertisement

ಶಾಂತಿ, ಸುವ್ಯವಸ್ಥೆಗಾಗಿ ಗುಂಡಿನ ಶಬ್ದಕ್ಕೂ ಸಿದ್ಧ: ಚನ್ನಣ್ಣನವರ್‌

09:54 PM Aug 20, 2019 | Lakshmi GovindaRaj |

ನೆಲಮಂಗಲ: ತಾಲೂಕಿನಲ್ಲಿ ಹೆಚ್ಚಾಗಿರುವ ಅಕ್ರಮ ಚಟುವಟಿಕೆ ನಿಯಂತ್ರಿಸಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಲಾಠಿ ಬದಲು ಗುಂಡಿನ ಶಬ್ದಕ್ಕೂ ಸಿದ್ಧ ಎಂದು ಜಿಲ್ಲೆ ಪೊಲೀಸ್‌ ಅಧೀಕ್ಷಕ ರವಿ ಡಿ. ಚನ್ನಣ್ಣನವರ್‌ ರೌಡಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ಎಂವಿಎಂ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್‌ ವತಿಯಿಂದ ಯೋಜಿಸಿದ್ದ ಸಾರ್ವಜನಿಕ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರ ಸಮಸ್ಯೆ ಆಲಿಸಿ ಮಾತನಾಡಿ ಮಾತನಾಡಿದರು.

Advertisement

ಮೇಲಧಿಕಾರಿ ಸಂರ್ಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಿ: ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ, ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ ಡಾಬಾ ಮತ್ತು ಮದ್ಯದ ಅಂಗಡಿಗಳು ಸಮಯ ಮತ್ತು ನಿಯಮಪಾಲನೆ ಮಾಡದಿರುವುದು. ವಾಹನ ಸಂಚಾರ ಸಮಸ್ಯೆ ಹಾಗೂ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಪ್ರಮುಖ ಸಮಸ್ಯೆಗಳಾಗಿ ಕಾಣುತ್ತಿದೆ. ಜಿಲ್ಲಾ ಪೊಲೀಸ್‌ ಅಕ್ರಮಗಳಿಗೆ ಸಹಕರಿಸುವುದು ಮತ್ತು ಪೋಷಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಸಮಸ್ಯೆ ಎದುರಾದರೆ ಸ್ಥಳೀಯ ಠಾಣಾಧಿಕಾರಿಗಳಿಗೆ ತಿಳಿಸಿ, ಪರಿಹಾರ ಕಂಡುಕೊಳ್ಳಬೇಕು. ಪರಿಹಾರ ದೊರೆಯದಿದ್ದರೆ ಮೇಲಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.

ಸಮಸ್ಯೆಗಳ ಸುರಿಮಳೆ: ಸಭೆಯಲ್ಲಿ ಪಟ್ಟಣಿಗರು ಸಮಸ್ಯೆಗಳ ಮಳೆಯನ್ನೇ ಸುರಿಸಿದರು. ಸುಮಾರು 35ಕ್ಕೂ ಹೆಚ್ಚು ಮಂದಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ ಎಂದು ಸಮಸ್ಯೆ ಹೇಳಿದರು. ಮುಖ್ಯರಸ್ತೆ ಅಗಲೀಕರಣದಲ್ಲಿ ನಿಯಮ ಪಾಲನೆಯಾಗಿಲ್ಲ, 120 ಅಡಿ ರಸ್ತೆ 80 ಅಡಿಗೆ ಸಂಕುಚಿಗೊಂಡಿದೆ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದು ಗೊತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿಕುಳಿತಿದ್ದಾರೆ. ವೀಲೀಂಗ್‌ ಸಮಸ್ಯೆ, ಹೆದ್ದಾರಿ ಡಾಬಾ ಮತ್ತು ಮದ್ಯದಂಗಡಿಗಳಲ್ಲಿ ಗಾಂಜಾ, ಹುಕ್ಕಾ, ಮಾದಕವಸ್ತುಗಳ ಮಾರಾಟವಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಪುಂಡರ ಹಾವಳಿ, ಜಾನುವಾರು, ಸರ ಹಾಗೂ ಮನೆ ಕಳ್ಳತನ ಪ್ರಕರಣ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ತಿಳಿಸಿದರು.

ಸೌಲಭ್ಯ ಕಲ್ಪಿಸಿ: ಪೊಲೀಸ್‌ ಅಧೀಕ್ಷಕರು ಉಪವಿಭಾಗ ವ್ಯಾಪ್ತಿಯ ತಮ್ಮ ಸಿಬ್ಬಂದಿಗೆ ಸೂಕ್ತ ಅನುಕೂಲ ಕಲ್ಪಿಸಿಕೊಡಿ, ನಿರ್ಮಾಣಹಂತದ ವಸತಿ ಗೃಹಗಳನ್ನು ಶೀಘ್ರವಾಗಿ ಉದ್ಘಾಟಿಸಿ, ಕ್ವಾರ್ಟಸ್‌ ಆಸುಪಾಸಿನಲ್ಲಿರುವ ಸಮಸ್ಯೆ ಬಗೆಹರಿಸಿ, ತಾಲೂಕಿನ ಪೊಲೀಸ್‌ ಇಲಾಖೆ ಡಿವೈಎಸ್‌ಪಿ ಕಚೇರಿ ಮತ್ತು ಸಂಚಾರಿ ಪೊಲೀಸ್‌ ಠಾಣೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಬೇಕೆಂದು ಸಾರ್ವಜನಿಕರು ರವಿ ಚನ್ನಣ್ಣನವರ್‌ಗೆ ಕಿವಿಮಾತು ಹೇಳಿದರು.

ಪರಿಹಾರ: ಜಿಟಿಜಿಟಿ ಮಳೆಯಲ್ಲಿಯೇ ನಿರ್ಮಾಣಗೊಳ್ಳುತ್ತಿರುವ ಪೊಲೀಸ್‌ ವಸತಿ ಗೃಹ ಸಮುಚ್ಚಯಕ್ಕೆ ಭೇಟಿ ನೀಡಿ, ಸಿಬ್ಬಂದಿಗೆ ವಸತಿ ನಿಲಯ ಹಸ್ತಾಂತರಿಸಲಾಗುತ್ತದೆ. ಸಿಬ್ಬಂದಿ ನಿರ್ಭಯದಿಂದ ಮತ್ತು ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಬೇಕು. ಅವರಿಗೆ ಸೂಕ್ತ ಬೆಂಬಲ ಮತ್ತು ಅನುಕೂಲ ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

Advertisement

ಡಿವೈಎಸ್‌ಪಿ ಪಾಂಡುರಂಗ, ವೃತ್ತ ನಿರೀಕ್ಷಕ ಅನಿಲ್‌ಕುಮಾರ್‌, ಸಂಚಾರಿ ಠಾಣೆ ನಿರೀಕ್ಷಕ ಗೋವಿಂದ ರಾಜು, ಮಾದನಾಯಕನ ಹಳ್ಳಿ ಠಾಣೆ ನಿರೀಕ್ಷಕ ಸತ್ಯನಾರಾಯಣ, ತಮ್ಮ ವ್ಯಾಪ್ತಿಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿ ಕಾನೂನು ಸುವ್ಯವಸ್ಥೆ ಭರವಸೆ ನೀಡಿದರು. ಎಸ್‌ಐಗಳಾದ ಡಿ.ಆರ್‌. ಮಂಜುನಾಥ್‌, ಕುಮಾರಸ್ವಾಮಿ, ಶಂಕರ್‌ನಾಯಕ್‌, ಮಂಜೇಗೌಡ, ಕೃಷ್ಣಕುಮಾರ್‌, ವಸಂತ್‌ಕುಮಾರ್‌ ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next