Advertisement
ಮಣ್ಣಿನಿಂದ ಮಾಡಿದ ಎತ್ತುಗಳ ಜೋಡಿಗೆ ಪೂಜೆ ಮಾಡುವುದು ಈ ಹಬ್ಬದ ವಿಶೇಷವಾಗಿದೆ. ರೈತರು ತಮ್ಮ ಆಪ್ತಮಿತ್ರ ಎತ್ತಿನ ಜೋಡಿಗೆ ವಿಶೇಷ ಪೂಜೆ ಮಾಡಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುತ್ತಾರೆ. ಉತ್ತರ ಕರ್ನಾಟಕ ರೈತರ ಪಾಲಿಗೆ ಮಣ್ಣೆತ್ತಿನ ಅಮಾವಾಸ್ಯೆ ಎಂದರೆ ಎಲ್ಲಿಲ್ಲದ ಹಿಗ್ಗು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಎಲ್ಲ ವರ್ಗದ ಜನರು ಪಾಲ್ಗೊಂಡು ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.
Related Articles
Advertisement
ಮಣ್ಣಿನಿಂದ ತಯಾರಿಸಲಾದ ಜೋಡೆತ್ತುಗಳ ಮೂರ್ತಿಯನ್ನು ಮನೆಯ ದೇವರ ಜಗಲಿಯ ಮೇಲೆ ಪ್ರತಿಷ್ಠಾಪನೆ ಮಾಡಿ, ಪೂಜಿಸಿ ಪ್ರಾರ್ಥಿಸುತ್ತಾರೆ. ಇನ್ನು ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳೆಲ್ಲರೂ ಸೇರಿ ಚಿಕ್ಕದೊಂದು ಬುಟ್ಟಿಯಲ್ಲಿ ಮಣ್ಣಿನ ಎತ್ತುಗಳನ್ನು ಹಿಡಿದುಕೊಂಡು ಗ್ರಾಮದಲ್ಲಿನ ಮನೆ ಮನೆಗೆ ಹೋಗಿ ಆರತಿ ಮಾಡಿಸಿಕೊಳ್ಳುವ ಸಂಪ್ರದಾಯೂ ಇದೆ. ಅಲ್ಲದೇ ಈ ಸಂದರ್ಭದಲ್ಲಿ ಮಹಿಳೆಯರು ಜೋಡೆತ್ತಿಗೆ ಆರತಿ ಮಾಡಿ ದವಸ, ಧಾನ್ಯಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಇಂದಿಗೂ ಕೆಲ ಗ್ರಾಮೀಣ ಪ್ರದೇಶದಲ್ಲಿದೆ.
ಒಟ್ಟಾರೆ ರೈತರ ಹಬ್ಬ ಎನಿಸಿದ ಮಣ್ಣೆತ್ತಿನ ಅಮವಾಸೆ ಹಬ್ಬದಾಚರಣೆಗೆ ರೈತ ಕುಟುಂಬಗಳು ಸಜ್ಜಾಗಿದ್ದು, ರೈತರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಮುಂಗಾರುಪೂರ್ವದಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಜೂನ್ ತಿಂಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಂದಿಲ್ಲ. ಕೆಲವು ರೈತರು ಬಿತ್ತಿದ ಬೀಜಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದರೆ, ಇನ್ನು ಕೆಲವರು ಬಿತ್ತನೆಗಾಗಿ ಮೋಡಗಳತ್ತ ಮುಖ ಮಾಡಿದ್ದಾರೆ. ಈ ನಡುವೆಯೂ ಪ್ರತಿವರ್ಷದಂತೆ ರೈತರ ಮೊದಲ ಹಬ್ಬವಾದ ಮಣ್ಣೆತ್ತಿನ ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದೆ. –ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡ