ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಗೊಂಡು ಸುಮಾರು 16 ವರ್ಷಗಳು ಕಳೆದಿದ್ದು, ಇದೀಗ ಮಹಾಯೋಜನೆಯನ್ನು ಇನ್ನಷ್ಟು ವಿಸ್ತೃತವಾಗಿಸಲು ಪ್ರಾಧಿಕಾರ ತನ್ನ ವ್ಯಾಪ್ತಿಯ ಗ್ರಾಮಗಳಿಂದ ಆಕ್ಷೇಪ, ಸಲಹೆ ಸೂಚನೆ ಸಲ್ಲಿಸುವಂತೆ ಮನವಿ ಮಾಡಿದೆ. ಮಹಾಯೋಜನೆಯ ರೂಪು ರೇಷೆಗಳೇನು ಎನ್ನುವ ಮಾಹಿತಿ ನೀಡದೇ ಆಕ್ಷೇಪ ಆಹ್ವಾನಿಸುವ ಮೂಲಕ ಪ್ರಾಧಿಕಾರದ ವ್ಯಾಪ್ತಿಯ ಜನರನ್ನು ಶೋಷಣೆ ಮಾಡಲಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ. ಈಗಾಗಲೇ ಪ್ರಾಧಿಕಾರ ರಚನೆಯಾದಾಗಿನಿಂದ ಆನೆಗೊಂದಿ ಭಾಗದ 15 ಹಳ್ಳಿಗಳಲ್ಲಿ ಸರಿಯಾದ ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿಲ್ಲ. ಶೌಚಾಲಯ, ಕುಡಿಯುವ ನೀರಿನ ಕಾಮಗಾರಿಗಳಿಗೂ ಪ್ರಾಧಿಕಾರದ ಅಧಿಕಾರಿಗಳು ಆಕ್ಷೇಪವೆತ್ತುವ ಮೂಲಕ ಜನತೆಗೆ ತೊಂದರೆ ಕೊಡುತ್ತಿದ್ದಾರೆ. ನಿಯಮಗಳ ಹೆಸರಿನಲ್ಲಿ ವಸತಿ ಮನೆಗಳು ಸೇರಿ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂಬ ದೂರು ಕೇಳಿಬರುತ್ತಿವೆ.
ಹಂಪಿ ವಿಶ್ವ ಪಾರಂಪರಿಕ ಪಟ್ಟಿ ಸೇರಿರುವುದರಿಂದ ಇಲ್ಲಿಯ ಶಿಲಾಶಾಸನ ಸ್ಮಾರಕಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ಇದಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯ ಮತ್ತು ಪ್ರವಾಸಿ ತಾಣಗಳ ಮೇಲುಸ್ತುವಾರಿಯನ್ನು ಪ್ರಾಧಿಕಾರ ಪುರಾತತ್ವ ಇಲಾಖೆ ನಿರ್ದೇಶನದಂತೆ ಮಾಡುತ್ತಿದೆ. ಹಂಪಿ ಭಾಗದ 14 ಹಳ್ಳಿಗಳು, ಆನೆಗೊಂದಿ ಭಾಗದ 15 ಹಳ್ಳಿಗಳು ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ಪ್ರಾಧಿಕಾರದ ಅನುಮತಿ ಇಲ್ಲದೇ ಯಾವುದೇ ಕಾಮಗಾರಿಗಳನ್ನು ಗ್ರಾಪಂ ಅಥವಾ ಯಾವುದೇ ಇಲಾಖೆಗಳು, ಖಾಸಗಿ ವ್ಯಕ್ತಿಗಳು ಮಾಡುವಂತಿಲ್ಲ ಎಂಬ ನಿಯಮವಿದೆ. ಈ ನಿಯಮಗಳನ್ನು ಆನೆಗೊಂದಿ ಭಾಗದ 15 ಹಳ್ಳಿಗಳಲ್ಲಿ ಸಣ್ಣಪುಟ್ಟ ಹೋಟೆಲ್, ರೆಸ್ಟೋರೆಂಟ್ ಆರಂಭಿಸಿದರೆ ಜೆಸಿಬಿ ಸಮೇತ ಆಗಮಿಸುವ ಪ್ರಾಧಿಕಾರದ ಅಧಿಕಾರಿಗಳು ಹಂಪಿ, ಕಮಲಾಪುರ ಸುತ್ತಲು ಸ್ಟಾರ್ ಹೋಟೆಲ್‌ಗಳು ತಲೆ ಎತ್ತಿವೆ. ಇದರ ಕುರಿತು ಪ್ರಾಧಿಕಾರದ ಅಧಿಕಾರಿಗಳು ಆಕ್ಷೇಪವೆತ್ತಲ್ಲ ಎನ್ನುವ ಆರೋಪವಿದೆ.
ಸ್ಮಾರಕಗಳ ಸಂರಕ್ಷಣೆ ಹೆಸರಿನಲ್ಲಿ ಪ್ರಾಧಿಕಾರ ಆನೆಗೊಂದಿ ಸುತ್ತಲಿನ ಹಳ್ಳಿಗಳಲ್ಲಿ ಮಾಸ್ಟರ್ ಪ್ಲಾನ್ ತಯಾರಿಸಿದ್ದು, ಇಡೀ ಗ್ರಾಮಗಳನ್ನೇ ಸ್ಥಳಾಂತರಿಸುವ ಯೋಜನೆ ರೂಪಿಸಿದೆ. ಸ್ಥಳೀಯರು ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಕೇಳದೇ ಈ ಯೋಜನೆ ಜಾರಿ ಮಾಡುವ ಆತುರದಲ್ಲಿ ಜನರ ಬದುಕನ್ನು ಕಸಿಯುವ ಹುನ್ನಾರು ನಡೆಸಿದೆ ಎನ್ನಲಾಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಆನೆಗೊಂದಿ ಭಾಗದ ಜನರ ಪರವಾಗಿ ಸರಕಾರದ ಮಟ್ಟದಲ್ಲಿ ಆಕ್ಷೇಪವೆತ್ತುತ್ತಿಲ್ಲ. ಇದರಿಂದಾಗಿ ಹಲವು ವರ್ಷಗಳಿಂದ ಬದುಕು ಕಟ್ಟಿಕೊಂಡ ಜನರು ಆತಂಕಕ್ಕಿಡಾಗಿದ್ದಾರೆ.
ಆನೆಗೊಂದಿ ಭಾಗದಲ್ಲಿರುವ ಐತಿಹಾಸಿಕ ತಾಣ ವೀಕ್ಷಣೆಗೆ ಪ್ರತಿದಿನ ಸಾವಿರಾರು ದೇಶ, ವಿದೇಶಿಗರು ಆಗಮಿಸುತ್ತಾರೆ. ಇವರಿಗೆ ಊಟ, ವಸತಿ ಮತ್ತು ಮೂಲ ಸೌಕರ್ಯ ಒದಗಿಸಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಬಿಡುತ್ತಿಲ್ಲ. ನಿಯಮಗಳ ಉಲ್ಲಂಘನೆ ಹೆಸರಿನಲ್ಲಿ ಸ್ಥಳೀಯರ ಬದುಕನ್ನು ಅಧಿಕಾರಿಗಳು ಕಸಿದುಕೊಳ್ಳುವ ಹುನ್ನಾರು ನಡೆಸಿದ್ದಾರೆ. ಸ್ಮಾರಕಗಳ ಸಂರಕ್ಷಣೆ ಹೆಸರಿನಲ್ಲಿ ಆನೆಗೊಂದಿ ಸುತ್ತಲಿನ ಗ್ರಾಮಗಳನ್ನು ಸ್ಥಳಾಂತರ ಮಾಡುವ ಹುನ್ನಾರ ನಡೆದಿದ್ದು, ಇದರ ಹಿಂದೆ ಖಾಸಗಿ ಹೋಟೆಲ್ ಲಾಬಿ ಕೆಲಸ ಮಾಡುತ್ತಿದೆ. ಸ್ಮಾರಕಗಳನ್ನು ಹೊರತುಪಡಿಸಿ ಉಳಿದ ಮನೆಗಳನ್ನು ಅಲ್ಲೆ ಬಿಟ್ಟು ಜನವಸತಿ ಉಳಿಸಬೇಕು. ಇಲ್ಲದಿದ್ದರೆ ಹಾಳು ಹಂಪಿಯಂತೆ ಆನೆಗೊಂದಿ ಸುತ್ತಲಿನ ಗ್ರಾಮಗಳು ಸಹ ಜನವಸತಿ ಇಲ್ಲದೇ ಹಾಳು ಗ್ರಾಮಗಳಾಗುವುದರಿಂದ ಈ ಭಾಗ ಪ್ರಗತಿ ಹೊಂದುವುದಿಲ್ಲ. ಸರಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಮಹಾಯೋಜನೆಯಲ್ಲಿ ಕೆಲ ತಿದ್ದುಪಡಿ ಮಾಡಬೇಕು. ಅಧಿಕಾರಿಗಳು ಮನ ಬಂದಂತೆ ಯೋಜನೆ ರೂಪಿಸಿದ್ದಾರೆ. ಜನಪ್ರತಿನಿಧಿಗಳು ಸ್ಥಳೀಯ ಜನರ ರಕ್ಷಣೆ ಮಾಡಬೇಕಿದೆ.
. ಅಂಜಿನಪ್ಪ ಅಂಬಿಗೇರ, ಆನೆಗೊಂದಿ ಗ್ರಾಮಸ್ಥರು
ಕೆ.ನಿಂಗಜ್ಜ