Advertisement

ಅಭಿವೃದ್ಧಿ ಕಾರ್ಯದ ಮುಕ್ತ ಚರ್ಚೆಗೆ ಸಿದ್ಧ: ವಿಷ್ಣುನಾಥನ್‌

10:00 AM Sep 26, 2017 | Team Udayavani |

ಮಂಗಳೂರು: ರಾಜ್ಯದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಆಡಳಿತದ ಸಂದರ್ಭದಲ್ಲಿ ಮಾಡಿರುವ ಹತ್ತಾರು ಅಭಿವೃದ್ಧಿ ಕಾರ್ಯ ಚಟುವಟಿಕೆ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಲು ಕಾಂಗ್ರೆಸ್‌ ಯಾವತ್ತಿಗೂ ಸಿದ್ಧವಿದೆ. ಕಾಂಗ್ರೆಸ್‌ ನಡೆಸಿದ ಅಭಿವೃದ್ಧಿ ದಾಖಲೆಯನ್ನು ಸಮಗ್ರವಾಗಿ ಜನರ ಮುಂದಿಡಲು ನಾವು ಯಾವುದೇ ಕ್ಷಣ ಹಾಗೂ ಯಾವುದೇ ಸ್ಥಳದಲ್ಲಿ ತಯಾರಿ ದ್ದೇವೆ. ಇದನ್ನು ಆಹ್ವಾನ ಎಂದು ಬಿಜೆಪಿ ಯವರು ತಿಳಿದುಕೊಳ್ಳಲಿ ಎಂದು ಎಐಸಿಸಿ ಕಾರ್ಯದರ್ಶಿ ಪಿ.ಸಿ. ವಿಷ್ಣುನಾಥನ್‌ ಹೇಳಿದರು. 

Advertisement

ಮಂಗಳೂರು ದಕ್ಷಿಣ ಕಾಂಗ್ರೆಸ್‌ ಹಾಗೂ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಸೋಮವಾರ ಮಂಗಳೂರು ಪುರಭವನದಲ್ಲಿ ಆಯೋಜಿಸಲಾದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಮಾದರಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ನರೇಂದ್ರ ಮೋದಿಯವರು ಏನೋ ಮಾಡು ತ್ತಾರೆ ಎಂದು ಜನ ಭಾವಿಸಿದ್ದರು; ಆದರೆ ಏನೂ ಮಾಡಿಲ್ಲ ಎಂಬುದು ಈಗ ಎಲ್ಲರ ಅರಿವಿಗೆ ಬಂದಿದೆ. ದೇಶದಲ್ಲಿ ಅಸಹಿಷ್ಣುತೆ, ಭಯದ ವಾತಾವರಣ ನೆಲೆಗೊಳ್ಳುವಂತಾಗಿದೆ. ಅತೀ ಹೆಚ್ಚು ಬಂಡವಾಳ ಹೂಡಿಕೆಯಲ್ಲಿ, ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕವೇ ನಂ. 1 ಆಗಿದೆ. ಹೀಗಾಗಿ ದೇಶಕ್ಕೆ ಕರ್ನಾಟಕದ ಅಭಿವೃದ್ಧಿಯೇ ಮಾದರಿ ಎಂಬುದು ಸ್ಪಷ್ಟವಾಗುತ್ತದೆ ಎಂದರು. 

“ನಮೋ’ = ನಂಬಿಕೆಗೆ ಮೋಸ ಮಾಡಿದವರು: ರೈ
ಸಚಿವ ಬಿ. ರಮಾನಾಥ ರೈ ಮಾತನಾಡಿ, “ಕಾಂಗ್ರೆಸ್‌ ಆಡಳಿತದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯ ಆಗಬೇಕು. ಇತರರು ನಮ್ಮ ಬಗ್ಗೆ ಏನೇ ಅಂದರೂ ನಾವು ಗಮನಹರಿಸದೆ ಅಭಿವೃದ್ಧಿಯ ವಿವರವನ್ನು ಜನರಿಗೆ ತಿಳಿಸಬೇಕು ಎಂದರು, ಪ್ರಸ್ತುತ ನಮೋ ಎಂದು ಹೇಳುವವರು ಕೆಲವರಿದ್ದಾರೆ. ನಮೋ ಬ್ರಿಗೇಡ್‌ ಹುಟ್ಟಿಕೊಂಡಿದೆ. ನಿಜಕ್ಕೂ ನಮೋ ಅಂದರೆ ನಂಬಿಕೆಗೆ ಮೋಸ ಮಾಡಿದವರು ಎಂಬ  ಅರ್ಥ’ ಎಂದರು.

ಶಾಸಕ ಅಭಯಚಂದ್ರ ಜೈನ್‌, ವಿಧಾನ ಪರಿಷತ್‌ ಮುಖ್ಯಸಚೇತಕ ಐವನ್‌ ಡಿ’ಸೋಜಾ, ಕಾಂಗ್ರೆಸ್‌ ಪ್ರಮುಖರಾದ ಸಲಿಂ ಅಹಮ್ಮದ್‌, ವಿಟ್ಟು ಚಂಗಪ್ಪ, ಅರುಣ್‌ ಮಾಚಯ್ಯ, ಪಿ.ವಿ. ಮೋಹನ್‌, ಸುರೇಶ್‌ ಬಳ್ಳಾಲ್‌, ಮಮತಾ ಡಿ.ಎಸ್‌. ಗಟ್ಟಿ, ರಜನೀಶ್‌, ಶಶಿಧರ ಹೆಗ್ಡೆ, ಮಹಮ್ಮದ್‌ ಮೋನು, ಮಿಥುನ್‌ ರೈ, ಕಳ್ಳಿಗೆ ತಾರಾನಾಥ ಶೆಟ್ಟಿ, ನವೀನ್‌ ಡಿ’ಸೋಜಾ, ಶಶಿರಾಜ್‌ ಅಂಬಟ್‌, ಬಿ.ಎಚ್‌. ಖಾದರ್‌, ಇಬ್ರಾಹಿಂ ಕೋಡಿಜಾಲ್‌, ಶಾಲೆಟ್‌ ಪಿಂಟೋ, ಅಪ್ಪಿ, ಮನೋಹರ ಶೆಟ್ಟಿ, ಎ.ಸಿ. ವಿನಯ್‌ರಾಜ್‌, ಪ್ರತಿಭಾ ಕುಳಾç ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  ಶಾಸಕ ಜೆ.ಆರ್‌. ಲೋಬೋ ಸ್ವಾಗತಿಸಿದರು. ರೋಹಿತ್‌ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

ಸಿದ್ದರಾಮಯ್ಯ V/s ಮೋದಿ
ಮನೆ ಮನೆಗೆ ಕಾಂಗ್ರೆಸ್‌ ಸಾಧನೆಗಳನ್ನು ಬಿತ್ತರಿಸುವ ನೆಲೆಯಲ್ಲಿ ಬ್ಲಾಕ್‌ ಹಾಗೂ ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರು ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಹಲವು ಭಾಗ್ಯಗಳನ್ನು ನೀಡುವ ಮೂಲಕ ಸಿದ್ದರಾಮಯ್ಯ ಆಡಳಿತ ಜನಪರವಾಗಿ ಕಾರ್ಯನಿರ್ವಹಿಸಿದೆ. ಪ್ರಣಾಳಿಕೆಯಲ್ಲಿ ತಿಳಿಸಿದ 165 ಭರವಸೆಗಳ ಪೈಕಿ 155ನ್ನು ಪೂರೈಸುವ ಮೂಲಕ ನುಡಿದಂತೆ ನಮ್ಮ ಸರಕಾರ ನಡೆದಿದೆ. ಹೀಗಾಗಿ ನುಡಿದಂತೆ ನಡೆದ ಸಿದ್ದರಾಮಯ್ಯ ಅವರು ಉತ್ತಮರಾಗಿದ್ದಾರೆ. ಆದರೆ ಕಪ್ಪು ಹಣ ವಾಪಸ್‌ ತರುತ್ತೇವೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ನೀಡುತ್ತೇವೆ ಎಂದು ಹಣವೂ ನೀಡದೆ ಈಗ ಪೆಟ್ರೋಲ್‌ ಬೆಲೆ ಏರಿಕೆ, ಉದ್ಯೋಗವನ್ನು ಸೃಷ್ಟಿಸದ ನರೇಂದ್ರ ಮೋದಿಯವರು ಹೇಳಿದಂತೆ ನಡೆಯಲಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಆಡಿಯೂ ಮಾಡದವ ಅಧಮ ಎಂಬ ಮಾತು ಚಾಲ್ತಿಯಲ್ಲಿದೆ ವಿಷ್ಣುನಾಥನ್‌ ಎಂದರು.

Advertisement

ಮೋದಿಯಿಂದ ಅಭಿವೃದ್ಧಿಯ ಟಯರ್‌ ಪಂಚರ್‌ !
ದಿನೇಶ್‌ ಗುಂಡೂರಾವ್‌ ಮಾತನಾಡಿ, ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಕಾಲದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಸಾಧನೆಯ ಗೆರೆಯನ್ನು ಕಂಡಿತ್ತು. ಆದರೆ ಮೋದಿ ಬಂದ ತತ್‌ಕ್ಷಣ ರಾತೋರಾತ್ರಿ ಹಣ ಅಪಮೌಲ್ಯಗೊಳಿಸಿ, ವೇಗವಾಗಿ ಓಡುತ್ತಿದ್ದ ವಾಹನದ ಟಯರ್‌ ಪಂಚರ್‌ ಮಾಡಿದ್ದಾರೆ. ಹಣ ಅಪನಗದೀಕರಣ ಮಾಡುವಾಗಲೇ ಮನಮೋಹನ್‌ ಸಿಂಗ್‌ ಅವರು ಸಂಸತ್‌ನಲ್ಲಿ ಮಾತನಾಡಿ, ಈ ಕಾರಣದಿಂದ ಶೇ. 2ರಷ್ಟು ಜಿಡಿಪಿ ದರ ಕುಗ್ಗಲಿದೆ ಎಂಬ ಸೂಚನೆಯನ್ನು ನೀಡಿದ್ದರು. ಪ್ರಸ್ತುತ ಅವರು ಹೇಳಿದಂತೆಯೇ ಆಗಿದೆ. ಅರುಣ್‌ ಜೇಟ್ಲಿ ಅವರಿಗೆ ಈಗ ಏನು ಮಾಡಬೇಕು ಎಂದು ತೋಚದೆ ಪರದಾಡುತ್ತಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಬಿಜೆಪಿಯವರಿಗೆ ಯಡಿಯೂರಪ್ಪ ಅವರು ಇದ್ದರೂ ಕಷ್ಟ ಇಲ್ಲದಿದ್ದರೂ ಕಷ್ಟ ಎಂಬ ಪರಿಸ್ಥಿತಿಯಾಗಿದೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next