Advertisement

Congress: ಸಮರ್ಥನೆಗೆ ಸಿದ್ಧಆಗಿ: ಸಿಎಂ ಸಿದ್ದರಾಮಯ್ಯ ಸೂಚನೆ

11:49 PM Nov 18, 2024 | Team Udayavani |

ಬೆಂಗಳೂರು: ವಕ್ಫ್ ಮಂಡಳಿ ನೋಟಿಸ್‌ ವಿಷಯವಾಗಿ ವಿಪಕ್ಷ ಬಿಜೆಪಿಯು “ನಮ್ಮ ಭೂಮಿ ನಮ್ಮ ಹಕ್ಕು’ ಅಭಿಯಾನ ಕೈಗೊಂಡು ಅಧಿವೇಶನದಲ್ಲೂ ಪ್ರತಿಭಟನೆಗೆ ಸಜ್ಜಾಗುತ್ತಿದ್ದರೆ, ಪ್ರತಿಯಾಗಿ ಸಮರ್ಥನೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

Advertisement

ಅಲ್ಲದೆ ಗ್ಯಾರಂಟಿ ಆರೋಪಕ್ಕೆ ತಕ್ಕ ಉತ್ತರ ನೀಡಬೇಕು, ಎಲ್ಲ ಆರೋಪಗಳಿಗೂ ಸೂಕ್ತ ತಿರುಗೇಟು ನೀಡಬೇಕೆಂದು ಹೇಳಿದ್ದಾರೆ.
ಸೋಮವಾರ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ ಅವರು, ವಕ್ಫ್ ಮಂಡಳಿ ನೋಟಿಸ್‌ ವಿಷಯವನ್ನು ವಿಪಕ್ಷಗಳು ವಿವಾದ ಮಾಡಲು ಹೊರಟಿವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಸೂಕ್ತ ಸಮರ್ಥನೆಗಳೊಂದಿಗೆ ವಿಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಬೇಕು ಎಂದಿದ್ದಾರೆ.

ಪ್ರಮುಖವಾಗಿ ಬಿಜೆಪಿ ಸರಕಾರದ ಅವಧಿಯಲ್ಲೂ ರೈತರ ಪಹಣಿಗಳಲ್ಲಿ ವಕ್ಫ್ ಎಂದು ನಮೂದಾಗಿದೆ, ರೈತರಿಗೆ ನೋಟಿಸ್‌ ಹೋಗಿದೆ. ಅವರ ಅವಧಿಯಲ್ಲಿ ನಡೆದಿರುವ ಘಟನೆಗಳನ್ನು ನೆನಪು ಮಾಡಿಕೊಡಬೇಕು. ಸರಿಯಾದ ಮಾಹಿತಿಯನ್ನು ಜನರಿಗೆ ಒದಗಿಸುವಂತಾಗಬೇಕು ಎಂದು ಸೂಚಿಸಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ ವಕ್ಫ್ ಮಂಡಳಿಯಿಂದ ನೀಡಿದ್ದ ನೋಟಿಸ್‌ಗಳನ್ನು ಹಿಂಪಡೆಯಲು ಈಗಾಗಲೇ ಸೂಚಿಸಲಾಗಿದೆ. ರೈತರ ಯಾವುದೇ ಜಮೀನನ್ನೂ ವಕ್ಫ್ ಮಂಡಳಿಗೆ ನೀಡುವುದಿಲ್ಲ. ಕಂದಾಯ ಇಲಾಖೆಯ ಕಾಗದ-ಪತ್ರಗಳಲ್ಲಿ ಏನಿದೆ ಎಂಬುದನ್ನು ಇನ್ನೊಮ್ಮೆ ಪರಿಶೀಲಿಸಿ, ತಹಸೀಲ್ದಾರ್‌ಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ಎಂದು ಸಚಿವರಿಗೆ ಸಲಹೆ ನೀಡಿದ್ದಾರೆ.
ಬಿಜೆಪಿಯವರು ಇದೇ ವಿಷಯ ಇಟ್ಟುಕೊಂಡು ಅಭಿಯಾನ ನಡೆಸಲು ಮುಂದಾಗಿದ್ದಾರೆ. ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲೂ ಈ ವಿಷಯ ಚರ್ಚಿಸಲಿದ್ದಾರೆ. ಉತ್ತರ ಕೊಡುವಲ್ಲಿ ಸರಕಾರ ವಿಫ‌ಲವಾಯಿತು ಎನ್ನುವಂತಾಗಬಾರದು. ಈ ವಿಷಯವಾಗಿ ಕೃಷ್ಣ ಬೈರೇಗೌಡ ಸಹಿತ ಕೆಲವು ಸಚಿವರು ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ್ದೀರಿ. ಅದನ್ನು ಇಲ್ಲಿಗೆ ನಿಲ್ಲಿಸಬಾರದು. ವಿಪಕ್ಷಗಳು ಸರಕಾರದ ವಿರುದ್ಧ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಮುನ್ನ ಸತ್ಯಾಂಶವನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು. ಬಿಜೆಪಿ ಅವಧಿಯಲ್ಲಿ ಆಗಿರುವ ಆದೇಶ, ಸುತ್ತೋಲೆಗಳನ್ನು ಜನರ ಗಮನಕ್ಕೆ ತನ್ನಿ ಎಂದು ಸಂಪುಟ ಸಹೋದ್ಯೋಗಿಗಳಿಗೆ ಮಾರ್ಗದರ್ಶನ ನೀಡಿದರು.

ಗ್ಯಾರಂಟಿ ಆರೋಪಕ್ಕೆ ತಕ್ಕ ಉತ್ತರ ನೀಡಿ
ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿಲ್ಲ ಎಂದು ಮಹಾರಾಷ್ಟ್ರ ಸರಕಾರ ನೀಡಿರುವ ಜಾಹೀರಾತಿಗೆ ಸೂಕ್ತ ಪ್ರತ್ಯುತ್ತರ ನೀಡಲೇಬೇಕೆಂಬ ಸಮಾಲೋಚನೆ ನಡೆದಿದೆ. ನಾವೂ ಈಗಾಗಲೇ ಅದಕ್ಕೆ ಪ್ರತಿಯಾಗಿ ಜಾಹೀರಾತು ನೀಡಿ, ಅಲ್ಲಿನ ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದ್ದೇವೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಮ್ಮ ಸಚಿವರು ಹೇಳುವ ಮೂಲಕ ಮಹಾರಾಷ್ಟ್ರ ಚುನಾವಣೆ ಮಾತ್ರವಲ್ಲದೆ, ದೇಶಾದ್ಯಂತ ಬಿಜೆಪಿ ಸುಳ್ಳು ಹೇಳುತ್ತಿದೆ ಎಂಬುದನ್ನು ತಿಳಿಸುವಂತಾಗಬೇಕು ಎಂದರು.

Advertisement

ಅಪಪ್ರಚಾರ ಸಹಿಸಬೇಡಿ
ಗ್ಯಾರಂಟಿ ಯೋಜನೆಗಳು ನಮ್ಮ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಾಗಿವೆ. ನಮ್ಮನ್ನು ನೋಡಿಕೊಂಡು ಬೇರೆ ರಾಜ್ಯಗಳಲ್ಲಿ ಬಿಜೆಪಿ ಕೂಡ ಗ್ಯಾರಂಟಿಗಳನ್ನು ಘೋಷಿಸಿದೆ. ಇದನ್ನು ಜನರಿಗೆ ಅರ್ಥ ಮಾಡಿಸಬೇಕು. ಗ್ಯಾರಂಟಿ ಯೋಜನೆಗಳ ವಿರುದ್ಧದ ಅಪಪ್ರಚಾರವನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎನ್ನಲಾಗಿದೆ.

ಏನೇನು ಸೂಚನೆ?
– ವಕ್ಫ್ ನೋಟಿಸ್‌ ವಿರುದ್ಧ ಬಿಜೆಪಿ ಅಭಿಯಾನಕ್ಕೆ ತಿರುಗೇಟು ನೀಡಿ
– ಸಮರ್ಥನೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸಚಿವರಿಗೆ ಸಿಎಂ ತಾಕೀತು
– ಗ್ಯಾರಂಟಿ ಜಾರಿಯಾಗಿಲ್ಲ ಎಂಬ ಆರೋಪಕ್ಕೆ ತಕ್ಕ ಉತ್ತರ ನೀಡಲು ಸೂಚನೆ
– ಬಿಜೆಪಿ ಸರಕಾರದ ಅವಧಿಯ ವಕ್ಫ್ ನೋಟಿಸ್‌ ಬಗ್ಗೆ ಉಲ್ಲೇಖೀಸಲು ತಾಕೀತು
– ವಕ್ಫ್ ಜಾಗದ ಗೊಂದಲ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಚಿವರಿಗೆ ಸಲಹೆ
– ಬಿಜೆಪಿ ಅವಧಿಯ ಆದೇಶ, ಸುತ್ತೋಲೆಗಳನ್ನೂ ಜನರ ಗಮನಕ್ಕೆ ತರಲು ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next