Advertisement

ಜಿಲ್ಲೆಯ ಪ್ರಥಮ ಇ ಟಾಯ್ಲೆಟ್‌ ನಗರದಲ್ಲಿ  ಉದ್ಘಾಟನೆಗೆ ಸಿದ್ಧ

02:45 AM Jul 10, 2017 | Team Udayavani |

ಮಹಾನಗರ: ಜಿಲ್ಲೆಯಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಪರಿಚಯಿಸಲಾಗುತ್ತಿರುವ “ಇ- ಟಾಯ್ಲೆಟ್‌ ವ್ಯವಸ್ಥೆ ಜು. 11ರಂದು ಉದ್ಘಾಟನೆಗೆ ಸಜ್ಜಾಗಿದೆ.

Advertisement

ನಗರದ ಮೂರು ಪ್ರಮುಖ ಸ್ಥಳಗಳಲ್ಲಿ 5 ಇ- ಟಾಯ್ಲೆಟ್‌ ನಿರ್ಮಿಸಲಾಗಿದೆ. ಅಡಿಪಾಯ ಹಾಕಿ, ಸ್ಟೈನ್‌ಲೆಸ್‌ ಸ್ಟೀಲ್‌ ನಿಂದ ನಿರ್ಮಾಣಗೊಂಡ ಸಿದ್ಧ ಪೆಟ್ಟಿಗೆ ಯನ್ನು ಜೋಡಿಸಿಡಲಾಗಿದೆ. ಅದಕ್ಕೆ ವಿದ್ಯುತ್‌ ಮತ್ತು ನೀರಿನ ಸಂಪರ್ಕವನ್ನು ಕಲ್ಪಿಸಿದ್ದು, ಯುಜಿಡಿ ಸಂಪರ್ಕ ಕೊನೆಯ ಹಂತದಲ್ಲಿದೆ. 

ಲಾಲ್‌ಬಾಗ್‌ ಬಸ್‌ ನಿಲ್ದಾಣದ ಸಮೀಪ ಎರಡು (ಪುರುಷರು- ಮಹಿಳೆಯರಿಗೆ), ಕದ್ರಿ ಪಾರ್ಕ್‌ ಬಳಿ ಎರಡು, ಹಂಪನಕಟ್ಟೆಯಲ್ಲಿ ಒಂದು ಇ- ಟಾಯ್ಲೆಟ್‌ ನಿರ್ಮಿಸಲಾಗುತ್ತಿದೆ. ಕೇರಳ, ಬೆಂಗಳೂರು, ಮೈಸೂರು ಸಹಿತ ಹಲವೆಡೆ ಈಗಾಗಲೇ ಜಾರಿಯಲ್ಲಿದೆ.

ನಾಣ್ಯ ಹಾಕಿ, ಟಾಯ್ಲೆಟ್‌ ಪ್ರವೇಶಿಸಿ..!
ಒಂದು ಶೌಚಗೃಹದ ಅಂದಾಜು ವೆಚ್ಚ 6.25 ಲಕ್ಷ  ರೂ. ಗಳಾಗಿದೆ.  ಶೌಚಗೃಹವನ್ನು ಪಿಎಸ್‌ಆರ್‌ ಫ‌‌ಂಡ್‌ನ‌ಲ್ಲಿ ಎಚ್‌ಪಿಸಿಎಲ್‌ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾಗಿದೆ.

ಇದು ಪೋರ್ಟಬಲ್‌ ಟಾಯ್ಲೆಟ್‌ ಆಗಿದ್ದು ಬೇರೆಡೆ ಸ್ಥಳಾಂತರಿಸುವುದೂ ಸುಲಭ. 
ತಾಂತ್ರಿಕ ವ್ಯವಸ್ಥೆಗಳು ಜಿಪಿಎಸ್‌ ಸಂಪರ್ಕ ಹೊಂದಿದೆ. ಒಂದು ವೇಳೆ ಏನಾದರೂ ತೊಂದರೆಯಾದರೆ, ಕೂಡಲೇ ಕಂಪನಿಯ ಕೇಂದ್ರ ಕಚೇರಿಗೆ ಸೂಚನೆ ರವಾನೆಯಾಗುತ್ತದೆ. ತತ್‌ ಕ್ಷಣವೇ ಎಂಜಿನಿಯರ್‌ಗಳು ಬಂದು ದುರಸ್ತಿ ಮಾಡುವರು.

Advertisement

ನಿರ್ವಹಣೆ ಹೇಗೆ?
ಆಧುನಿಕ ತಂತ್ರಜ್ಞಾನದ ಶೌಚಗೃಹ ವ್ಯವಸ್ಥೆ ಇದು. ನಾಣ್ಯವನ್ನು ಶೌಚಗೃಹದ ಎದುರಿನ ನಿಗದಿತ ಸ್ಥಳದಲ್ಲಿ ಹಾಕಿದ ಕೂಡಲೇ ಬಾಗಿಲು ತೆರೆದುಕೊಳ್ಳುತ್ತದೆ. ನಕಲಿ ನಾಣ್ಯ ಬಳಸಿದರೆ ಬಾಗಿಲು ತೆರೆಯದು. 

ನಾಣ್ಯಗಳ ಅಸಲಿತನವನ್ನು ಪತ್ತೆ ಹಚ್ಚುವ ತಂತ್ರಜ್ಞಾನ (ಸೆನ್ಸರ್‌) ಇದರಲ್ಲಿ ಅಳವಡಿಸಲಾಗಿದೆ. ಲೈಟ್‌, ಫ್ಯಾನ್‌ ವ್ಯವಸ್ಥೆಯೂ ಸ್ವಯಂ ಚಾಲಿತ. ಬಳಕೆಯ ಅನಂತರ ಸ್ವಯಂ ಚಾಲಿತವಾಗಿ ನೀರು ಹರಿಯುತ್ತದೆ. ಹೊರಗೆ ಕೈ ತೊಳೆಯುವ ವ್ಯವಸ್ಥೆಯೂ ಇರಲಿದೆ. 

ಶೌಚಗೃಹದ ಮೇಲೆ 250ರಿಂದ 300 ಲೀಟರ್‌ ಸಾಮರ್ಥ್ಯದ  ಟ್ಯಾಂಕ್‌ ಅಳವಡಿಸಲಾಗಿದೆ. 3 ನಿಮಿಷ ಬಳಸಿದರೆ 1.5 ಲೀಟರ್‌ ನೀರು ಬಳಕೆಯಾಗುತ್ತದೆ. 3  ನಿಮಿಷಕ್ಕಿಂತ ಹೆಚ್ಚು ಉಪಯೋಗಿಸಿದರೆ 4.5 ಲೀಟರ್‌ ಹರಿಯುತ್ತದೆ. ಪ್ರತಿ 10 ಮಂದಿ ಬಳಸಿದ ಬಳಿಕ ಶೌಚಗೃಹ ಸ್ವಯಂ ಚಾಲಿತವಾಗಿ ಕ್ಲೀನ್‌ ಆಗುವ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ.

ಹೈಟೆಕ್‌ ರೂಪ; ಜನಸಾಮಾನ್ಯರಿಗೆ ಕಷ್ಟ..!
ಹೈಟೆಕ್‌ ಮಾದರಿಯಲ್ಲಿ ಶೌಚಾಲಯ ನಿರ್ಮಾಣವಾದರೂ, ಜನಸಾಮಾನ್ಯರಿಗೆ ಇದರ ಬಳಕೆ ತುಸು ಕಷ್ಟವಾಗಲಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ನಾಣ್ಯ ಹಾಕಿ, ಅದರ ಬಳಕೆಯ ಬಗ್ಗೆ ತಿಳಿವಳಿಕೆ ಇಲ್ಲದಿದ್ದರೆ ಈ ಯೋಜನೆಯೇ ಗೊಂದಲಕ್ಕೆ ಕಾರಣವಾಗಬಹುದು ಎಂಬ ಆತಂಕವೂ ಇದೆ.

– ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next