Advertisement

ಕಾಂಗ್ರೆಸ್‌ ಶಸ್ತ್ರತ್ಯಾಗ?

06:00 AM Oct 14, 2018 | |

ಬೆಂಗಳೂರು: ಉಪಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿ ಸಿಗದ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್‌ ನಿರ್ಧರಿಸಿದೆ ಎಂದು ಹೇಳಲಾಗಿದೆ.

Advertisement

ಈಗಾಗಲೇ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಲಾಗಿರುವ ಬಿ.ಎಸ್‌.ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ವಿರುದ್ಧ ಜೆಡಿಎಸ್‌ನಿಂದ ಮಧು ಬಂಗಾರಪ್ಪ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ. 

ಸದ್ಯ ವಿದೇಶ ಪ್ರವಾಸದಲ್ಲಿರುವ ಮಧು ಬಂಗಾರಪ್ಪ ಅವರಿಗೆ ತಕ್ಷಣ ಹೊರಟು ಬರುವಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್‌ ಸಹ ಮಧು ಬಂಗಾರಪ್ಪ ಜತೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ಒಂದೊಮ್ಮೆ ಮಧು ಬಂಗಾರಪ್ಪ ಕಣಕ್ಕಿಳಿಯದಿದ್ದರೆ, ನಟ ಶಿವರಾಜ್‌ಕುಮಾರ್‌ ಒಪ್ಪಿಗೆ ನೀಡಿದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಗೀತಾ ಶಿವರಾಜ್‌ಕುಮಾರ್‌ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸ್ಪರ್ಧೆಗೆ ಮುಖಂಡರ ನಿರಾಸಕ್ತಿ
ಮೊದಲಿಗೆ ಮೂರು ಲೋಕಸಭೆ ಕ್ಷೇತ್ರಗಳ ಪೈಕಿ ಮಂಡ್ಯವನ್ನು ಜೆಡಿಎಸ್‌ಗೆ, ಬಳ್ಳಾರಿ ಹಾಗೂ ಶಿವಮೊಗ್ಗ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಲು ಒಪ್ಪಂದವಾಗಿತ್ತು. ಅದರಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಅಥವಾ ಜಿಲ್ಲಾ ಕಾಂಗ್ರೆಸ್‌ ಮುಖಂಡ ಸುಂದರೇಶ್‌ ಹೆಸರು ಪರಿಶೀಲನೆಯಲ್ಲಿತ್ತು. ವಯಸ್ಸಿನ ಕಾರಣದಿಂದ ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಸ್ಪರ್ಧೆಗೆ ನಿರಾಕರಿಸಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಮಂಜುನಾಥ್‌ ಭಂಡಾರಿ ಸ್ಪರ್ಧೆಗೆ ನಿರಾಸಕ್ತಿ ತೋರಿದ್ದರು. ಹೀಗಾಗಿ, ಬಹುತೇಕ ಕಿಮ್ಮನೆ ರತ್ನಾಕರ್‌ ಸ್ಪರ್ಧೆ ಖಚಿತ ಎಂದು ಹೇಳಲಾಗಿತ್ತು.

Advertisement

ಆದರೆ, ಕಿಮ್ಮನೆ ರತ್ನಾಕರ್‌ ಸಹ ಸ್ಪರ್ಧೆಗೆ ಹಿಂದೇಟು ಹಾಕಿದ್ದರಿಂದ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಮಧು ಬಂಗಾರಪ್ಪ ಅವರನ್ನು ಕಾಮನ್‌ ಕ್ಯಾಂಡಿಡೇಟ್‌ ಆಗಿ ಕಣಕ್ಕಿಳಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹೀಗಾಗಿ, ಆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ.

ಮಂಡ್ಯ ಜೆಡಿಎಸ್‌ ಅಭ್ಯರ್ಥಿ ಇಂದು ಫೈನಲ್‌?
ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಭಾನುವಾರದ ವೇಳೆಗೆ ಜೆಡಿಎಸ್‌ ಅಭ್ಯರ್ಥಿ ಅಂತಿಮಗೊಳ್ಳುವ ಸಾಧ್ಯತೆಯಿದೆ. ಎಲ್‌.ಆರ್‌.ಶಿವರಾಮೇಗೌಡ, ಲಕ್ಷ್ಮೀ ಅಶ್ವಿ‌ನಿಗೌಡ , ಪ್ರಭಾವತಿ ಜಯರಾಂ ಹೆಸರು ಪರಿಶೀಲನೆಯಲ್ಲಿದೆ. ಶಿವರಾಮೇಗೌಡ ಅಥವಾ ಲಕ್ಷೀ¾ ಅಶ್ವಿ‌ನಿಗೌಡ ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅಭ್ಯರ್ಥಿ ಆಯ್ಕೆ ಸಂಬಂಧ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಜಿಲ್ಲಾ ಮುಖಂಡರ ಜತೆ ಸಭೆ ನಡೆಸಿದ್ದು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಚಂದ್ರಶೇಖರ್‌ ಬಿಜೆಪಿ ಅಭ್ಯರ್ಥಿ
ರಾಮನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಪುತ್ರ ಚಂದ್ರಶೇಖರ್‌ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಚಂದ್ರಶೇಖರ್‌ ಹೆಸರು ಶಿಫಾರಸು ಮಾಡಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗಿದ್ದು ಭಾನುವಾರ ಅಧಿಕೃತ ಘೋಷಣೆ ಹೊರ ಬೀಳಲಿದೆ ಎಂದು ತಿಳಿದು ಬಂದಿದೆ.  ಈ ಕ್ಷೇತ್ರಕ್ಕೆ ಸಿ.ಪಿ.ಯೋಗೇಶ್ವರ್‌ ಹಾಗೂ ರುದ್ರೇಶ್‌ ಹೆಸರು ಕೇಳಿಬರುತ್ತಿತ್ತಾದರೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ “ಟಾಂಗ್‌’ ಲಿಂಗಪ್ಪ ಪುತ್ರನನ್ನು ಬಿಜೆಪಿಗೆ ಕರೆತಂದು ಟಿಕೆಟ್‌ ನೀಡಲಾಗಿದೆ ಎನ್ನಲಾಗಿದೆ. ಮತ್ತೂಂದು ಮೂಲದ ಪ್ರಕಾರ ಯೋಗೇಶ್ವರ್‌ ಹಾಗೂ ರುದ್ರೇಶ್‌ ಇಬ್ಬರಿಗೂ ಸ್ಪರ್ಧೆ ಮಾಡಲು ಇಷ್ಟವಿರಲಿಲ್ಲ. ಹೀಗಾಗಿ, ಚಂದ್ರಶೇಖರ್‌ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್‌ ಕೊಡಿಸಲಾಗಿದೆ ಎಂದು ಹೇಳಲಾಗಿದೆ. ಮಂಡ್ಯ ಕ್ಷೇತ್ರದಲ್ಲೂ ಕಡೇ ಗಳಿಗೆಯಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಸಿದ್ದರಾಮಯ್ಯ  ಎಂಬುವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next