Advertisement

ಉತ್ತರದ ಅಭಿವೃದ್ಧಿಗೆ ಯಾವ ತ್ಯಾಗಕ್ಕೂ ಸಿದ್ಧ

12:36 PM Mar 31, 2022 | Team Udayavani |

ಬೀಳಗಿ: ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡುವ ಪರಂಪರೆ ಮುಂದುವರಿದಿದೆ. ಇದರಿಂದ ಪ್ರಾದೇಶಿಕ ಅಸಮಾನತೆ ತೀವ್ರವಾಗಿದ್ದು, ಸರ್ಕಾರದ ನಿರ್ಲಕ್ಷ್ಯ ಹೀಗೆಯೇ ಮುಂದುವರಿದರೆ ಈ ಭಾಗದ ಜನರು ಅಭಿವೃದ್ಧಿಯಿಂದ ವಂಚಿತರಾಗುತ್ತಾರೆ. ಹೀಗಾಗಿ ಜನರಿಗಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಎಸ್‌.ಆರ್‌. ಪಾಟೀಲ ಹೇಳಿದರು.

Advertisement

ಬಾಡಗಂಡಿ ಬಾಪೂಜಿ ಅಂತಾರಾಷ್ಟ್ರೀಯ ಶಾಲೆ ಅವರಣದಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯಿಂದ ಹಮ್ಮಿಕೊಂಡಿದ್ದ ಕೃಷ್ಣಾ-ಮಹದಾಯಿ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದ ಪ್ರತಿಯೊಂದು ಜಿಲ್ಲೆ, ಗ್ರಾಮಗಳಿಗೆ ಸಮಗ್ರ ಮೂಲಭೂತ ಸೌಕರ್ಯ, ನೌಕರಿ, ಉದ್ಯೋಗ ಸೇರಿದಂತೆ ಹಲವಾರು ವಿಷಯಗಳಲ್ಲಿ ತಾರತಮ್ಯವಾಗುತ್ತಿದೆ. ಈ ಭಾಗದಲ್ಲಿ ಸುಮಾರು 10 ನದಿಗಳು ಬೃಹದಾಕಾರವಾಗಿ ಹರಿದಿವೆ. ಅವುಗಳ ನೀರು ಸದ್ಬಳಕೆ ಮಾಡಿಕೊಳ್ಳುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ವಿಷಾದಿಸಿದರು.

ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ ಸಿಕ್ಕಿರುವ ಅನುದಾನ, ಸಮರ್ಪಕ ಬಳಕೆ, ಅನುಷ್ಠಾನ ಎಲ್ಲವೂ ಬದ್ಧತೆಯಿಂದ ನಡೆದರೆ, ಈ ಭಾಗದಲ್ಲಿ ಅಭಿವೃದ್ಧಿ ಸಾಧ್ಯವಿದೆ. ಈ ಕುರಿತು ಅಧಿಕಾರಕ್ಕೆ ಬಂದ ಪ್ರತಿಯೊಂದು ಸರ್ಕಾರಕ್ಕೂ ತಿಳಿಸುವ ಕೆಲಸ ಮಾಡಿದರೂ, ಸರ್ಕಾರಗಳು ಕ್ಯಾರೆ ಎಂದಿಲ್ಲ ಎಂದು ಟೀಕಿಸಿದರು.

ಕೃಷ್ಣಾ ಮತ್ತು ಮಹದಾಯಿ ಸೇರಿದಂತೆ ನವಲಿ ಸಮತೋಲನ ಜಲಾಶಯಗಳ ನೀರು ಸದ್ಬಳಕೆಗಾಗಿ ಟ್ರ್ಯಾಕ್ಟರ್‌ ಯಾತ್ರೆ ನಡೆಸಿ, ಸರ್ಕಾರಕ್ಕೆ ಮತ್ತೂಮ್ಮೆ ಮನವರಿಕೆ ಮಾಡುವ ಪ್ರಯತ್ನ ನಮ್ಮದಾಗಿದೆ. ಕೃಷ್ಣಾ ಯೋಜನೆಯ 3ನೇ ಹಂತ ಜಾರಿಯಾದರೆ 130 ಟಿಎಂಸಿ ನೀರು ಸಂಗ್ರಹಣೆಯೊಂದಿಗೆ ಉತ್ತರ ಕರ್ನಾಟಕದ 7 ಜಿಲ್ಲೆಗಳ 14.6 ಲಕ್ಷ ಎಕರೆ ಭೂಮಿ ನೀರಾವರಿಯಾಗಲಿದೆ. ಮಹದಾಯಿ ನದಿ ಮಲಪ್ರಭಾ ನದಿಗೆ ಜೋಡಣೆ ಮಾಡಿದರೆ 4 ಜಿಲ್ಲೆಗಳಿಗೆ ಸುಮಾರು 7.56 ಟಿಎಂಸಿ ನೀರು ಕುಡಿಯಲು ದೊರೆಯುತ್ತದೆ. ನವಲಿ ಸಮತೋಲನ ಜಲಾಶಯದಲ್ಲಿ ತುಂಗಭದ್ರ ನದಿಗೆ ಡ್ಯಾಂ ನಿರ್ಮಿಸಿ 31 ಟಿಎಂಸಿ ನೀರು ಸಂಗ್ರಹಿಸಬಹುದು. ಹೀಗೆ ಹಲವಾರು ನೀರಾವರಿ ಯೋಜನೆಗಳು ಜಾರಿಯಾಗಲಿವೆ. ಇದಕ್ಕಾಗಿ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಜೊತೆಗೆ ಹಲವಾರು ಉದ್ಯೋಗಗಳು ಸ್ಥಾಪನೆಯೂ ಆಗಬೇಕು ಎಂದು ಒತ್ತಾಯಿಸಿದರು.

Advertisement

ನರಗುಂದದಿಂದ ಸಂಕಲ್ಪ ಯಾತ್ರೆ: ಏ.13ರಿಂದ 6 ದಿನಗಳ ಕಾಲ ನರಗುಂದದಿಂದ ಯಾತ್ರೆ ಆರಂಭಿಸಲಾಗುವುದು. ಈ ಯಾತ್ರೆ ಪಕ್ಷಾತೀತ, ಜಾತ್ಯತೀತ, ಧರ್ಮಾತೀತವಾಗಿ ನಡೆಯಲಿದ್ದು ಎಲ್ಲರೂ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಎಲ್ಲರೂ ಪûಾತೀತವಾಗಿ ಬದ್ಧರಾಗಬೇಕು. ಏಳು ಜಿಲ್ಲೆಯಲ್ಲಿರುವ ಹಾಲಿ ಮತ್ತು ಮಾಜಿ ಶಾಸಕ, ಸಂಸದರು ಒಂದಾಗಿ ಪûಾತೀತವಾಗಿ ಹೋರಾಟ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೃಷ್ಣಾ ಮಹದಾಯಿ ಸೇರಿದಂತೆ ಹಲವಾರು ವಿಷಯ ಸಮರ್ಪಕವಾಗಿ ಎಲ್ಲರಿಗೂ ತಿಳಿಯುವಂತೆ ಮಾಡುವ ಕೆಲಸ ಮಾಡಬೇಕಿದೆ ಎಂದರು.

ಮಾಜಿ ಶಾಸಕ ಜೆ.ಟಿ. ಪಾಟೀಲ ಕೃಷ್ಣಾ ಮೆಲ್ದಂಡೆ ಯೋಜನೆ 3ನೇ ಹಂತಕ್ಕೆ ಶೀಘ್ರಗತಿಯಲ್ಲಿ ಕೆಲಸ ಆರಂಭವಾಗಬೇಕು. ಹೋರಾಟ ಕೇಲವೇ ದಿನಗಳಿಗೆ ಸೀಮಿತವಾಗಬಾರದು. ನ್ಯಾಯ ಸಿಗುವವರಿಗೂ ಮಾಡಬೇಕು. ಈ ನಿಟ್ಟಿನಲ್ಲಿ ಸ್ವಾಭಿಮಾನ ವೇದಿಕೆಯವರು ಮಾಡುತ್ತಿರುವ ಹೋರಾಟಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ಇರುತ್ತೇವೆ ಎಂದು ಹೇಳಿದರು.

ಈ ವೇಳೆ ಮಾಜಿ ಸಂಸದರಾದ ಆರ್‌.ಎಸ್‌. ಪಾಟೀಲ, ಅಜಯಕುಮಾರ ಸರನಾಯಕ, ಮಾಜಿ ಸಚಿವ ಎಚ್‌.ವೈ. ಮೇಟಿ, ಮಾಜಿ ಶಾಸಕ ಎಸ್‌.ಜಿ. ನಂಜಯ್ಯನಮಠ, ಪ್ರಮುಖರಾದ ಅಶೋಕ ನಾಗಲೋಟಿ, ಶಿವಾನಂದ ನಿಗಂನೂರ, ಬಸವರಾಜ ಖೋತ, ಎಂ.ಎನ್‌. ಪಾಟೀಲ, ಪ್ರಕಾಶ ಅಂತರಗೊಂಡ, ಸಂತೋಷ ಬಗಲಿದೇಸಾಯಿ, ಎಸ್‌.ಟಿ. ಪಾಟೀಲ, ಅನವೀರಯ್ಯ ಪ್ಯಾಟಿಮಠ, ಪುರಾಣಿಕ, ಮಹಾದೇವ ಹಾದಿಮನಿ, ಶ್ರೀಶೈಲ ಅಂಟೀನ್‌, ರಸೂಲ ಮುಜಾವರ, ಸತ್ಯಪ್ಪ ಮೆಲ್ನಾಡ ಇತರರಿದ್ದರು.

 

ಏ.13ರಿಂದ 6 ದಿನಗಳ ಕಾಲ ಉತ್ತರ ಕರ್ನಾಟಕ ಎಲ್ಲ ರೈತರು, ಸಂತ್ರಸ್ತರು, ಮುಖಂಡರು ಸೇರಿ ಸುಮಾರು 75 ಟ್ರ್ಯಾಕ್ಟರ್‌ಗಳಲ್ಲಿ ನರಗುಂದದಿಂದ ಯಾತ್ರೆ ಆರಂಭಿಸಲಾಗುವುದು. ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಲ್ಲಿ ಸಂಚರಿಸುವ ಈ ಯಾತ್ರೆ ಏ.18 ರಂದು ಬೀಳಗಿ ತಲುಪಿ ಬೃಹತ್‌ ಸಮಾವೇಶ ಮಾಡಿ ಸರ್ಕಾರಗಳಿಗೆ ಮನವರಿಕೆ ಮಾಡೋಣ.

-ಎಸ್‌.ಆರ್‌. ಪಾಟೀಲ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next