ಕಾರವಾರ: ಸರ್ಕಾರದ ಸೌಲಭ್ಯಗಳನ್ನ ತಲುಪಿಸುವ ಕಾರ್ಯವನ್ನು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ವಿವಿಧ ಇಲಾಖೆ ಅಧಿ ಕಾರಿ ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ಮಾಡುವುದು ಒಳಿತು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸಂತೋಷಕುಮಾರ ಶೆಟ್ಟಿ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮಕ್ಕಳ ಗ್ರಾಮಸಭೆ ಅನುಷ್ಠಾನ ಹಾಗೂ ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ ಗ್ರಾಮ ಪಂಚಾಯತ್‌ಗಳ ಪಾತ್ರ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಕ್ಕಳನ್ನು ದೇವರು ಎಂದು ಪರಿಗಣಿಸಲಾಗುತ್ತದೆ. ಸಮಸ್ಯೆಯಿಂದ ಸರಕಾರಿ ಕಚೇರಿಗೆ ಬಂದಂತಹ ಸಂತ್ರಸ್ತ ಮಕ್ಕಳಿಗೆ ನೆರವು ನೀಡಿ. ಯಾರು ಕರ್ತವ್ಯದಲ್ಲಿ ನಿರತರಾಗಿರುತ್ತಾರೋ ಅವರೇ ನಿಜವಾದ ದೇವರ ಪೂಜೆ ಮಾಡಿದ ಹಾಗೆ ಆಗುತ್ತದೆ ಎಂದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಕಾ ಮಾತನಾಡಿ, ತರಬೇತಿಗಳು ಮಾಡುವ ಉದ್ದೇಶ ಎಂದರೆ ಪಂಚಾಯತ್‌ಗಳ ಪಾತ್ರವೇನು ಎಂದು ತಿಳಿಸುವುದಾಗಿದೆ. ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳು ಅಂದರೆ ರಸ್ತೆ ನಿರ್ಮಾಣ, ಗ್ರಾಮ ನೈರ್ಮಲ್ಯ ಅಷ್ಟೆ ಅಲ್ಲ, ಇದರಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ ಪೌಷ್ಟಿಕತೆ ಎಲ್ಲವೂ ಒಳಗೊಂಡಿರುತ್ತವೆ.
ಮಕ್ಕಳ ಹಕ್ಕು ಮತ್ತು ಕರ್ತವ್ಯ ರಕ್ಷಿಸುವುದು ಎಷ್ಟು ಮುಖ್ಯವೋ ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ತಡೆಯುವುದು ಕೂಡ ಅಷ್ಟೆ ಮುಖ್ಯ, ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಲವಾರು ಹಂತಗಳನ್ನು ತೆಗೆದುಕೊಂಡಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸಿ.ಕೆ. ಶ್ಯಾಮಲಾ ಗ್ರಾಮ ಮಟ್ಟದಿಂದಲೆ ಮಕ್ಕಳಿಗೆ ಹಕ್ಕುಗಳ ಕುರಿತು ಮಾಹಿತಿ ಹಾಗೂ ತಿಳಿವಳಿಕೆ ಮೂಡಿಸಬೇಕು ಎಂದರು.
ಕೊಪ್ಪಳ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್ ಉಪನ್ಯಾಸ ನೀಡಿದರು. ಡಿ.ಎನ್. ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕ ಸುನಿಲ್ ಗಾಂವಕರ್ ವಂದಿಸಿದರು. ಜಿಲ್ಲೆಯ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇನ್ನಿತರರು ಇದ್ದರು.