Advertisement

ನವಲಿ ಜಲಾಶಯಕ್ಕೆ ಮರು ಜೀವ!

11:31 AM Sep 01, 2019 | Suhan S |

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿನ ಹೂಳೆತ್ತುವ ಬದಲು ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡುವ ಪ್ರಸ್ತಾವನೆಯು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಈಗ ಮತ್ತೆ ಬಿಜೆಪಿ ಶಾಸಕರು ತುಂಗಭದ್ರಾ ಬೋರ್ಡ್‌ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದರಿಂದ ಯೋಜನೆಯು ಮತ್ತೆ ಜೀವ ಪಡೆದುಕೊಂಡಿದೆ.

Advertisement

ತುಂಗಭದ್ರಾ ಜಲಾಶಯ ಒಟ್ಟು 133 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಆದರೆ 1960ರಿಂದ ಇವರೆಗೂ ಡ್ಯಾಂ ಒಡಲಾಳದಲ್ಲಿ ಸಂಗ್ರಹವಾಗಿರುವ 30 ಟಿಎಂಸಿ ಅಡಿಗೂ ಅಧಿಕ ಹೂಳನ್ನು ತೆಗೆಯಲಾಗಿಲ್ಲ. ಹೂಳಿನಿಂದಾಗಿ ಡ್ಯಾಂನ ನೀರು ಸಂಗ್ರಹಣಾ ಸಾಮರ್ಥ್ಯ 100 ಟಿಎಂಸಿ ಅಡಿಗೆ ಬಂದು ತಲುಪಿದೆ. ಇದನ್ನು ತೆಗೆಸಿ, ಇಲ್ಲವೇ ಪರ್ಯಾಯ ಸಮನಾಂತರ ಜಲಾಶಯ ನಿರ್ಮಿಸಿ ಎನ್ನುವ ಕೂಗು ಈ ಭಾಗದ ಲಕ್ಷಾಂತರ ರೈತರಿಂದ ಸರ್ಕಾರದ ಮಟ್ಟದಲ್ಲಿ ಒತ್ತಾಯ ಮಾಡುತ್ತಲೇ ಇದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಶಿವರಾಜ ತಂಗಡಗಿ ಅವರು ನವಲಿ ಜಲಾಶಯ ನಿರ್ಮಾಣದ ಸಾಧ್ಯತೆಗಳ ಕುರಿತು ಒಂದು ಸರ್ವೇ ನಡೆಸಿದ್ದರು. ಸರ್ವೇಯು ಸರ್ಕಾರದಲ್ಲಿ ಹಾಗೆ ಬಿದ್ದಿದೆ. ಅದನ್ನು ಕೈಗೆತ್ತಿಕೊಂಡಿಲ್ಲ. ಅಲ್ಲದೇ, ಬೋರ್ಡ್‌ ಹಂತದಲ್ಲಿಯೂ ತಂಗಡಗಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ಭಾಗದ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಯೋಜನೆ ಬಗ್ಗೆ ಯಾರೂ ಕೇಳುವವರೇ ಇಲ್ಲದಂತಾಗಿತ್ತು. ಇದರಿಂದ ಬೇಸತ್ತ ರೈತರೇ ಕಳೆದ ಕೆಲ ವರ್ಷಗಳಿಂದ ಸ್ವಂತ ಹೂಳು ತೆಗೆದು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ನೀರಾವರಿ ವಿಷಯವನ್ನಿಟ್ಟು ಅಧಿಕಾರದ ಗದ್ದುಗೆ ಹಿಡಿದಿರುವ ಈ ಭಾಗದ ಶಾಸಕ, ಸಂಸದರಿಗೆ ನವಲಿ ಜಲಾಶಯವನ್ನು ನಿರ್ಮಿಸುವುದು ಸವಾಲಿನ ಕೆಲಸವಾಗಿದೆ. ಮತದಾರ ಸೇರಿದಂತೆ ಲಕ್ಷಾಂತರ ರೈತರಿಗೆ ಬಹಿರಂಗ ವಾಗ್ಧಾನ ಮಾಡಿದ್ದಾರೆ. ನವಲಿ ಜಲಾಶಯ ನಿರ್ಮಿಸುವು ಶಪಥ ಮಾಡಿದ್ದಾರೆ. ಆದರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಅಗತ್ಯವಾಗಿದೆ.

ಹಾಗಾಗಿ ಈ ಭಾಗದ ಶಾಸಕರು, ಸಂಸದರು ತುಂಗಭದ್ರಾ ನೀರಾವರಿ ಮಂಡಳಿಗೆ ಮತ್ತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ತುಂಗಭದ್ರಾ ಡ್ಯಾಂ ಅಂತಾರಾಜ್ಯಕ್ಕೆ ಸಂಬಂಧಪಟ್ಟಿದ್ದರಿಂದ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಒಪ್ಪಿಗೆ ಅವಶ್ಯವಾಗಿದೆ. ಬೋರ್ಡ್‌ನಲ್ಲಿ ಪ್ರಸ್ತಾವನೆಗೆ ಅನುಮತಿ ಸಿಕ್ಕರೆ ಮಾತ್ರ ಕರ್ನಾಟಕ ಸರ್ಕಾರವು ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಿದೆ. ಇಲ್ಲದಿದ್ದರೆ ಏಷ್ಟೆಲ್ಲ ಪ್ರಯತ್ನ ಮಾಡಿದರೂ ನೀರಿನಲ್ಲಿ ಹೋಮ ಮಾಡಿದಂತಾಗಲಿದೆ. ಇತ್ತೀಚೆಗೆ ಪ್ರಸ್ತಾವನೆಯನ್ನು ಬೋರ್ಡ್‌ಗೆ ಸಲ್ಲಿಕೆ ಮಾಡಲಾಗಿದ್ದು, ಬೋರ್ಡ್‌ನಲ್ಲಿ ಮೊದಲು ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕೆಲವು ವರ್ಷಗಳಿಂದ ಕಡಿಮೆಯಾಗುತ್ತಿದೆ. ನೀರಾವರಿ ಕ್ಷೇತ್ರ ಸೇರಿದಂತೆ ನೀರು ಹರಿದು ಬರುವ ಪ್ರಮಾಣದ ಸಮಗ್ರ ವಿಶ್ಲೇಷಣಾ ವರದಿ ಸಲ್ಲಿಕೆ ಮಾಡಿದರೆ ಅದರ ಆಧಾರದ ಮೇಲೆ ನವಲಿ ಜಲಾಶಯ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಅಧಿಕಾರಿಗಳ ವಲಯದಿಂದ ತಿಳಿದು ಬಂದಿದೆ.

ಈ ಯೋಜನೆಯಿಂದ ತುಂಗಭದ್ರಾ ಡ್ಯಾಂನಿಂದ ಹೆಚ್ಚುವರಿಯಾಗಿ ಹರಿದು ಹೋಗುವ 30 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಿ ಗಂಗಾವತಿ, ಕನಕಗಿರಿ, ಮಸ್ಕಿ, ರಾಯಚೂರು ಕೊನೆ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಇದರ ಉದ್ದೇಶವಾಗಿದೆ. 20 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ. ಇನ್ನೂ ಯೋಜನೆಗೆ ಕಾಲುವೆ ಸೇರಿದಂತೆ ಎಲ್ಲ ಕಾಮಗಾರಿಗೆ 8-10 ಸಾವಿರ ಕೋಟಿ ರೂ. ಅನುದಾನದ ಅವಶ್ಯಕತೆಯಿದೆ. ಆದರೆ, ಆಂಧ್ರ-ಕರ್ನಾಟಕದ ಪಾಲುದಾರಿಕೆ ಇರುವುದರಿಂದ ಬೋರ್ಡ್‌ ಹಂತದಲ್ಲಿ ಒಪ್ಪಂದವಾದರೆ ಮಾತ್ರ ಮುಂದಿನ ಪ್ರಕ್ರಿಯೆ ನಡೆಯಲು ಸಾಧ್ಯವಿದೆ.

Advertisement

ಕೇಂದ್ರದ ಮಧ್ಯ ಪ್ರವೇಶ ಅವಶ್ಯ: ತುಂಗಭದ್ರಾ ಡ್ಯಾಂ ನಿರ್ಮಿಸಿ ಆರು ದಶಕ ಕಳೆದರೂ ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿ ಭಾಗ್ಯವೇ ಕಂಡಿಲ್ಲ. ಈ ಭಾಗ ಮಳೆಯಾಶ್ರಿತ ಪ್ರದೇಶವಾಗಿದೆ. ಬರಕ್ಕೆ ಪದೇ ಪದೆ ತುತ್ತಾಗುತ್ತಿದೆ. ಇಲ್ಲಿನ ಶಾಸಕ ಹಾಗೂ ಸಂಸದರು ರಾಜ್ಯ ಸರ್ಕಾರದ ಮೂಲಕ ಕೇಂದ್ರದ ಮಟ್ಟದಲ್ಲಿ ಒತ್ತಡ ತಂದರೆ ಮಾತ್ರ ಯೋಜನೆ ಕಾರ್ಯಾರಂಭವಾಗಲಿದೆ ಎನ್ನುವುದು ಜಲ ತಜ್ಞರ ಅಭಿಪ್ರಾಯ. ಇಲ್ಲವಾದಲ್ಲಿ ಯೋಜನೆ ಕಾರ್ಯಗತಗೊಳ್ಳುವುದು ತುಂಬ ಕಷ್ಟದ ಕೆಲಸ ಎನ್ನುವ ಮಾತು ವ್ಯಕ್ತವಾಗಿದೆ.

ನವಲಿ ಜಲಾಶಯ ನಿರ್ಮಾಣಕ್ಕೆ ನಾನೇ ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಸರ್ವೇ ಮಾಡಿಸಿದ್ದೆ. ಬೋರ್ಡ್‌ ಹಂತದಲ್ಲೂ ಚರ್ಚೆ ನಡೆಸಿದ್ದೇವು. ಈ ಜಲಾಶಯ ನಿರ್ಮಾಣವಾದರೆ ಗಂಗಾವತಿ, ಕನಕಗಿರಿ, ಮಸ್ಕಿ, ರಾಯಚೂರು ಭಾಗದ ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಇಲ್ಲಿ ಒಂದೇ ಜಲಾಶಯವಲ್ಲ. ಜಲಾಶಯಗಳು ನಿರ್ಮಾಣವಾಗಬೇಕು. ಅಂದರೆ ಕೊನೆಯ ಭಾಗದ ರೈತರಿಗೆ ಅನುಕೂಲವಾಗಲಿದೆ. ಬಿಜೆಪಿ ಶಾಸಕರು ಏನು ಮಾಡುತ್ತಿದ್ದಾರೆ ಎಂದು ನಾವು ಕಾದು ನೋಡುತ್ತಿದ್ದೇವೆ.•ಶಿವರಾಜ ತಂಗಡಗಿ, ಮಾಜಿ ಸಚಿವ

ಬೋರ್ಡ್‌ನಲ್ಲಿ ನವಲಿ ಜಲಾಶಯ ನಿರ್ಮಾಣದ ವಿಷಯ ಚರ್ಚೆಯಾಗಿದೆ. ಈ ಯೋಜನೆಗೆ ಆಂಧ್ರ- ತೆಲಂಗಾಣ ಸರ್ಕಾರದ ವಿರೋಧವಿಲ್ಲ. ಆದರೆ ತುಂಗಭದ್ರಾ ಡ್ಯಾಂಗೆ ಹರಿದು ಬರುವ ನೀರಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಅದರ ಸಮಗ್ರ ವಿಶ್ಲೇಷಣಾ ವರದಿ, ನೀರಾವರಿ ಕ್ಷೇತ್ರದ ವರದಿ ಆಧರಿಸಿ ಮುಂದೆ ಚರ್ಚೆ ನಡೆಸುವ ಕುರಿತು ಹೇಳಿದೆ. •ರಂಗಾರಡ್ಡಿ ತುಂಗಭದ್ರಾ ಬೋರ್ಡ್‌ ಚೇರಮನ್‌

ನವಲಿ ಜಲಾಶಯ ನಿರ್ಮಾಣ ಮಾಡುವ ಕುರಿತು ಜನತೆಗೆ ಭರವಸೆ ನೀಡಿದ್ದೇವೆ. ಅದರಂತೆ ಬೋರ್ಡ್‌ನಲ್ಲಿ ಚರ್ಚೆ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಬೋರ್ಡ್‌ ಹಂತದಲ್ಲಿ ಒಪ್ಪಿಗೆ ಸಿಗಬೇಕು. ಮುಂದೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ನಮ್ಮೆಲ್ಲರ ಶಾಸಕರ ನಿಯೋಗ ತೆರಳಿ ಒತ್ತಾಯ ಮಾಡಲಿದ್ದೇವೆ.•ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕ.

 

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next