ಬೆಂಗಳೂರು: ಎರಡು ವರ್ಷಗಳ ಹಿಂದೆ ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದಿದ್ದ ಕಡಬಗೆರೆ ಶ್ರೀನಿವಾಸ್ ಮೇಲೆ ಗುಂಡು ಹಾರಿಸಿ, ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಮರು ಜೀವ ಬಂದಿದೆ. ಕಡಬಗೆರೆ ಶ್ರೀನಿವಾಸ್ ಮನವಿ ಮೇರೆಗೆ ಪ್ರಕರಣದ ತನಿಖೆ ಆರಂಭಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು, ಯಲಹಂಕದ ಬಾಬು ಹಾಗೂ ಸತೀಶ್ ಎಂಬುವವರನ್ನು ಸಿಸಿಬಿ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.
2017ರ ಫೆಬ್ರವರಿ 3ರಂದು ಯಲಹಂಕದ ಕೋಗಿಲು ಕ್ರಾಸ್ ಬಳಿ ಕಡಬಗೆರೆ ಶ್ರೀನಿವಾಸ್ ಮೇಲೆ ನಾಲ್ಕೈದು ಮಂದಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಈ ವೇಳೆ ಶ್ರೀನಿವಾಸ್ ಹೊಟ್ಟೆ ಮತ್ತು ಭುಭುಜಕ್ಕೆ ಗುಂಡುಗಳು ತಗುಲಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು, 10ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದರು. ಕೆಲ ರೌಡಿಶೀಟರ್‌ಗಳನ್ನು ವಶಕ್ಕೆ ಪಡೆದು ಹೇಳಿಕೆ ದಾಖಲಿಸಿಕೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಎರಡು ವರ್ಷ ಕಳೆದರೂ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ಸಿಸಿಬಿ ಪೊಲೀಸರು ತನಿಖೆ ನಡೆಸಬೇಕು ಎಂದು ಶ್ರೀನಿವಾಸ್ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಅನುಮತಿ ಪಡೆದು ತನಿಖೆ ಆರಂಭಿಸಲಾಗಿದೆ.
ಅಲ್ಲದೆ, ಈ ಹಿಂದೆ ಪ್ರಕರಣದ ತನಿಖೆ ನಡೆಸಿದ ಎಲ್ಲ ಅಧಿಕಾರಿಗಳನ್ನು ಕರೆಸಿಕೊಂಡು ಮಾಹಿತಿ ಪಡೆದುಕೊಳ್ಳಲಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಬುಧವಾರ ಶ್ರೀನಿವಾಸ್ ಅವರ ಮನೆ ಬಳಿ ಹೋಗಿ ಘಟನಾ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಸ್ಥಳ ಮಹಜರು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪುನರ್ ಪರಿಶೀಲನೆ ನಡೆಸಲಾಗಿದೆ. ಕೆಲವರನ್ನು ಕರೆಸಿ ವಿಚಾರಣೆ ನಡೆಸಿದ್ದು, ಇದುವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಹೇಳಿದರು.