ಕಲಬುರಗಿ: ಈ ಹಿಂದೆ ಸಾರಿಗೆ ನೌಕರರ ಮುಷ್ಕರದ ಸಂದರ್ಭದಲ್ಲಿ ಸೇವೆಯಿಂದ ವಜಾಗೊಂಡಿರುವ ಸಾರಿಗೆ ನೌಕರರನ್ನು ಶೀಘ್ರವೇ ಮರು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಕಲ್ಯಾಣ ಕರ್ನಾಟಕ ಸಾರಿಗೆ ವಲಯ ಗೌರವಾಧ್ಯಕ್ಷ ಶೌಕತ್ ಅಲಿ ಆಲೂರು ನೇತೃತ್ವದ ನಿಯೋಗ ಯಾದಗಿರಿಯಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಈ ವೇಳೆ ಸಾರಿಗೆ ನೌಕರರು ಮತ್ತು ಕಲ್ಯಾಣ ಕರ್ನಾಟಕ ಭಾಗದ ಸಾರಿಗೆ ಇಲಾಖೆಯ ಸಮಸ್ಯೆಗಳನ್ನು ರಾಮುಲು ಆಲಿಸಿದರು.
ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ನಾಗರಿಕರನ್ನು ಹತ್ಯೆ ಮಾಡಿದ್ದ ಉಗ್ರ ಎನ್ ಕೌಂಟರ್ ಗೆ ಬಲಿ
ಕಲ್ಯಾಣ ಕರ್ನಾಟಕ ಸಾರಿಗೆ ವಲಯದಲ್ಲಿ 70 ಕಾರ್ಮಿಕರು ವಜಾ ಆಗಿದ್ದಾರೆ. ಅಧಿಕಾರಿಗಳು ಅನಗತ್ಯವಾಗಿ 74 ಜನರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಮುಷ್ಕರ ಮತ್ತು ಲಾಕ್‌ಡೌನ್ ಅವಧಿಯಲ್ಲಿ ಗೈರು ಜಾರಿ ಮಾಡಲಾದ ಶಿಸ್ತು ಮತ್ತು ನಡತೆ ನಿಯಮ 1971ರ 22 ಮತ್ತು 23ರಡಿ ಜಾರಿ ಮಾಡಲಾದ ಆಪಾದನಾ ಪತ್ರಗಳನ್ನು ರದ್ದು ಪಡಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಮುಖಂಡರು ಮನವಿ ಮಾಡಿದರು.
ಈ ವಿಷಯ ಕುರಿತು ಮಂಡಳಿ ಸಭೆಯಲ್ಲಿ ಚರ್ಚಿಸಿದ್ದು, ಶೀಘ್ರದಲ್ಲಿಯೇ ಅಂತಿಮಗೊಳಿಸಿ ಇತ್ಯರ್ಥಗೊಳಿಸುತ್ತೇವೆ. ಜತೆಗೆ ಮುಷ್ಕರದ ಸಮಯದಲ್ಲಿ ವರ್ಗಾವಣೆಯಾದ ಸಿಬ್ಬಂದಿಯನ್ನು ಮೂಲ ಘಟಕಗಳಿಗೆ ನಿಯೋಜನೆ ಮಾಡಲು ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಕಾರ್ಮಿಕ ಮುಖಂಡರಾದ ಜಯರಾಮ ರಾಠೊಡ, ಬಸವರಾಜ ಚಾಮರಡ್ಡಿ, ಸುಭಾಷ ಆಲೂರು, ಜಗನ್ನಾಥ ಶಿವಯೋಗಿ, ಶಿವಪುತ್ರ ಪೂಜಾರಿ, ರುದ್ರಗೌಡ ಪಾಟೀಲ ಇದ್ದರು.