ಬೆಂಗಳೂರು: ಉಪ ಚುನಾವಣೆಯಲ್ಲಿ ಬಿಜೆಪಿ ಆರು ಸ್ಥಾನಗಳನ್ನು ಗೆಲ್ಲದಿದ್ದರೆ ಸರಕಾರ ತನ್ನಿಂತಾನೇ ಬಿದ್ದು ಹೋಗುತ್ತದೆ. ಆಗ ಬೇರೆ ಸರಕಾರ ರಚನೆ ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಇದ್ದು ಉಪ ಚುನಾವಣೆಯಲ್ಲಿ ಜನತೆ ಬದಲಾವಣೆ ಬಯಸಿದ್ದು ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗೆದ್ದಾಗ ಬಿಜೆಪಿಗೆ ಬಹುಮತ ಬರುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮದೇ ಆದ ಹೇಳಿಕೆ ನೀಡುತ್ತಿದ್ದಾರೆ. ಡಿ.9 ರ ಅನಂತರ ಎಲ್ಲವೂ ಸ್ಪಷ್ಟಗೊಳ್ಳಲಿದೆ. ಮಧ್ಯಾಂತರ ಚುನಾವಣೆ ದೂರದ ಮಾತು ಎಂದರು.
ವೈಯಕ್ತಿಕವಾಗಿ ನಾನು ಯಾವುದೇ ನಾಯಕರ ಬಗ್ಗೆ ಎಂದೂ ಮಾತನಾಡಿಲ್ಲ. ಪಕ್ಷದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಆಂತರಿಕ ವಿದ್ಯಮಾನಗಳ ಬಗ್ಗೆಯಷ್ಟೇ ಹೇಳಿದ್ದೆ. ನಾನು ಯಾವಾಗಲೂ ಪಕ್ಷ ವಹಿಸುವ ಕೆಲಸ ಮಾಡುವವನು ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹಿರಿಯ ನಾಯಕರು ಬರುತ್ತಿಲ್ಲ ಎಂಬ ಬಗ್ಗೆ ಪ್ರತಿಕ್ರಿಯಿಸಿ ಅದೆಲ್ಲಾ ಸುಳ್ಳು. ಯಾರ್ಯಾರಿಗೆ ಯಾವ್ಯಾವ ಕ್ಷೇತ್ರದ ಹೊಣೆಗಾರಿಕೆ ಕೊಟ್ಟಿದ್ದೇವೆಯೋ ಅವರು ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರವಾಹ ಮತ್ತು ಬರ ನಿರ್ವಹಣೆಗೆ ಕೇಂದ್ರ ಸರಕಾರ ಅನುದಾನ ಕೊಟ್ಟಿಲ್ಲ. ಕರ್ನಾಟಕದಿಂದ ವಾರ್ಷಿಕ ಒಂದು ಲ. ಕೋ. ರೂ. ತೆರಿಗೆ ಮೂಲಕ ಆದಾಯ ಕೇಂದ್ರ ಸರಕಾರಕ್ಕೆ ಹೋಗುತ್ತದೆ. ನಾವು ನಮ್ಮ ಪಾಲು ಕೇಳಿದರೆ ಅವರು ತಮ್ಮ ಕೈಯಿಂದ ಕೊಟ್ಟಂತೆ ಆಡುತ್ತಿದ್ದಾರೆ. ರಾಜ್ಯದಿಂದ 25 ಸಂಸದರನ್ನು ಗೆಲ್ಲಿಸಿ ಕಳುಹಿಸಿರುವುದು ದಂಡ ಎಂದು ರಾಮಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.