ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಸಿಐಡಿ ಅಧಿಕಾರಿಗಳ ಬಾಕಿ ವಿಚಾರಣೆಗೆ ಹಾಜರಾಗದೇ, ಕೈಗೂ ಸಿಗದೇ ಪರಾರಿಯಾಗಿದ್ದ ಆರ್.ಡಿ. ಪಾಟೀಲ ಸೋಮವಾರ ಇಲ್ಲಿನ ಐದನೇ ಹೆಚ್ಚುವರಿ ಮತ್ತು ಜಿಎಂಎಫ್ಸಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಕಳೆದ ಗುರುವಾರ ರಾತ್ರಿ ತುಮಕೂರಿನಲ್ಲಿ ದಾಖಲಾದ ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬಂಧನ ವಾರೆಂಟ್ ಹೊರಡಿಸಿದ್ದರು. ಅಲ್ಲದೆ ಮನೆಗೆ ಹೋದ ಸಂದರ್ಭದಲ್ಲಿ ಅಧಿಕಾರಿಗಳಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಈ ಕುರಿತು ಸಿಐಡಿ ಅಧಿಕಾರಿಗಳು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಮತ್ತೊಂದೆಡೆ ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ತಮ್ಮ ಎದುರು ಸೋಮವಾರ ಹಾಜರಾಗುವಂತೆ ಸಿಐಡಿ ತನಿಖಾಧಿಕಾರಿ ಪ್ರಕಾಶ್ ರಾಠೋಡ್ ಆರ್.ಡಿ. ಪಾಟೀಲಗೆ ನೋಟಿಸ್ ಕೂಡ ಜಾರಿಗೊಳಿಸಿದ್ದರು.
ಇದನ್ನೂ ಓದಿ:ಐಸಿಸಿ ವರ್ಷದ ಟಿ20 ತಂಡ ಪ್ರಕಟ: ಮೂವರು ಭಾರತೀಯರಿಗೆ ಸ್ಥಾನ
ಈ ಎಲ್ಲ ಬೆಳಗವಣಿಗೆಯ ಮಧ್ಯೆ ಅನಿವಾರ್ಯವಾಗಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಶುಕ್ರವಾರ ಅಫಜಲಪುರ ತಾಲ್ಲೂಕಿನ ಗಾಣಗಾಪುರ ಬಳಿಯ ಸಂಬಂಧಿಕರ ತೋಟದ ಮನೆಯಿಂದ ವಿಡಿಯೊ ಬಿಡುಗಡೆ ಮಾಡಿ ತಾನು ಈ ನೆಲದ ಕಾನೂನು ಗೌರವಿಸುವುದಾಗಿಯೂ, ತಾನು ಇಲ್ಲೇ ಇರುವುದಾಗಿ ಹೇಳಿಕೊಂಡಿದ್ದ ಪಾಟೀಲ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಬೆಂಗಳೂರು, ತುಮಕೂರು ಜಿಲ್ಲೆಗಳಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ತಮ್ಮ ವಶಕ್ಕೆ ನೀಡುವಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.