Advertisement

ಹಸರಂಗ ಮಾರಕ; RCBಗೆ ಭರ್ಜರಿ ಗೆಲುವು, ಬ್ಯಾಟಿಂಗ್‌ ನಲ್ಲಿ ಮಿಂಚಿದ ಡುಪ್ಲೆಸಿಕ್ಸ್‌

02:07 PM May 09, 2022 | Team Udayavani |

ಮುಂಬೈ: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವು ರವಿವಾರದ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು 67 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. ಬ್ಯಾಟಿಂಗ್‌ನಲ್ಲಿ ನಾಯಕ ಪ್ಲೆಸಿಸ್‌, ರಜತ್‌ ಪಾಟಿದಾರ್‌, ಮಾಕ್ಸ್‌ವೆಲ್‌, ದಿನೇಶ್‌ ಕಾರ್ತಿಕ್‌ ಮಿಂಚಿದರೆ ಬೌಲಿಂಗ್‌ನಲ್ಲಿ ವನಿಂದು ಹಸರಂಗ ಮತ್ತು ಹ್ಯಾಝೆಲ್‌ವುಡ್‌ ಗಮನಾರ್ಹ ನಿರ್ವಹಣೆ ತೋರಿ ತಂಡದ ಬೃಹತ್‌ ಅಂತರದ ಗೆಲುವಿಗೆ ಕಾರಣರಾದರು.

Advertisement

ಈ ಗೆಲುವಿನಿಂದ ಆರ್‌ಸಿಬಿ ತಾನಾಡಿದ 12 ಪಂದ್ಯಗಳಿಂದ ಏಳರಲ್ಲಿ ಜಯ ಗಳಿಸಿ 14 ಅಂಕಗಳೊಂದಿಗೆ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಸೋಲನ್ನು ಕಂಡ ಹೈದರಾಬಾದ್‌ ತಂಡದ ಪ್ಲೇ ಆಫ್ಗೆ ತೇರ್ಗಡೆಯಾಗುವ ಸಾಧ್ಯತೆ ಸ್ವಲ್ಪಮಟ್ಟಿಗೆ ಕಠಿಣವಾಗಿದೆ.

ಆರ್‌ಸಿಬಿಯಂತೆ ಹೈದರಾಬಾದ್‌ ತಂಡವು ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ವಿಕೆಟನ್ನು ಕಳೆದುಕೊಂಡಿತ್ತು. ನಾಯಕ ಕೇನ್‌ ವಿಲಿಯಮ್ಸನ್‌ ರನೌಟಾದರು. ಆದೇ ಓವರಿನ ಐದನೇ ಎಸೆತದಲ್ಲಿ ಮ್ಯಾಕ್ಸ್‌ವೆಲ್‌ ಆರಂಭಿಕ ಅಭಿಷೇಕ್‌ ಶರ್ಮ ಅವರ ವಿಕೆಟನ್ನು ಹಾರಿಸಿದರು. ಅವರಿಬ್ಬರು ಶೂನ್ಯಕ್ಕೆ ಔಟಾಗಿದ್ದರಿಂದ ಹೈದರಾಬಾದ್‌ ಸಂಕಷ್ಟಕ್ಕೆ ಬಿತ್ತು.

ರಾಹುಲ್‌ ತ್ರಿಪಾಠಿ ಮತ್ತು ಐಡೆನ್‌ ಮಾರ್ಕ್‌ರಮ್‌ ನಿಧಾನಗತಿಯಲ್ಲಿ ಆಡಿ ತಂಡವನ್ನು ಸಂಕಷ್ಟದಿಂದ ಮೇಲಕ್ಕೆತ್ತುವ ಪ್ರಯತ್ನ ನಡೆಸಿದರು. ಮೂರನೇ ವಿಕೆಟಿಗೆ 50 ರನ್‌ ಪೇರಿಸಿದರು. ಈ ಹಂತದಲ್ಲಿ ಮಾರ್ಕ್‌ರಮ್‌ ಭಾರೀ ಎಸೆತಕ್ಕೆ ಮುಂದಾಗಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದರು. ಬಿಗ್‌ ಹಿಟ್ಟರ್‌ ನಿಕೋಲಾಸ್‌ ಪೂರಣ್‌ ಇಲ್ಲಿ ಮಿಂಚಲಿಲ್ಲ. ಇನ್ನುಳಿದ ಆಟಗಾರರು ಕುಸಿದ ಕಾರಣ ತಂಡ 19.2 ಓವರ್‌ಗಳಲ್ಲಿ 125 ರನ್ನಿಗೆ ಆಲೌಟಾಯಿತು. ಏಕಾಂಗಿ ಹೋರಾಟ ನೀಡಿದ ತ್ರಿಪಾಠಿ 37 ಎಸೆತಗಳಿಂದ 58 ರನ್‌ ಹೊಡೆದರು. ತ್ರಿಪಾಠಿ ಔಟಾದ ಬೆನ್ನಿಗೆ ತಂಡ ಇನ್ನೂ ಮೂರು ವಿಕೆಟ್‌ ಕಳೆದುಕೊಂಡು ಶೋಚನೀಯ ಸ್ಥಿತಿಗೆ ತಲುಪಿತು.

ಮಾರಕ ದಾಳಿ ಸಂಘಟಿಸಿದ ವನಿಂದು ಹಸರಂಗ ತನ್ನ 4 ಓವರ್‌ಗಳ ದಾಳಿಯಲ್ಲಿ ಒಂದು ಮೇಡನ್‌ ಸಹಿತ 18 ರನ್ನಿಗೆ 5 ವಿಕೆಟ್‌ ಕಿತ್ತು ಗಮನ ಸೆಳೆದರು. ಜೋಶ್‌ ಹ್ಯಾಝೆಲ್‌ವುಡ್‌ ಕೇವಲ 17 ರನ್‌ ನೀಡಿ 2 ವಿಕೆಟ್‌ ಪಡೆದರು.


ಅನುಭವಿ ವಿರಾಟ ಕೊಹ್ಲಿ ಮತ್ತೆ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದರು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಅವರು ಸುಚಿತ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ ಫಾ ಡು ಪ್ಲೆಸಿಸ್‌ ಮತ್ತು ರಜತ್‌ ಪಾಟಿದಾರ್‌ ಅವರ ಶತಕದ ಜತೆಯಾಟದಿಂದಾಗಿ ಆರ್‌ಸಿಬಿ ಚೇತರಿಸಿಕೊಂಡಿತು. ಹೈದರಾಬಾದ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರಿಬ್ಬರು ಆಕರ್ಷಕವಾಗಿ ಆಡಿ ರಂಜಿಸಿದರು.

ಪ್ಲೆಸಿಸ್‌ ಮತ್ತು ಪಾಟಿದಾರ್‌ 73 ಎಸೆತ ಎದುರಿಸಿ ಎರಡನೇ ವಿಕೆಟಿಗೆ 105 ರನ್‌ ಪೇರಿಸಿದರು. ಈ ಹಂತದಲ್ಲಿ 48 ರನ್‌ ಗಳಿಸಿದ ಪಾಟಿದಾರ್‌ ಮತ್ತೆ ಸುಚಿತ್‌ಗೆ ಬಲಿಯಾದರು. ಪಾಟಿದಾರ್‌ 38 ಎಸೆತ ಎದುರಿಸಿದ್ದು 4 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದರು. ಪ್ಲೆಸಿಸ್‌ ಆಬಳಿಕ ಮ್ಯಾಕ್ಸ್‌ವೆಲ್‌ ಜತೆ ಇನ್ನೊಂದು ಉತ್ತಮ ಜತೆಯಾಟ ನಡೆಸಿದರು. ಮೂರನೇ ವಿಕೆಟಿಗೆ ಅವರಿಬ್ಬರು 54 ರನ್‌ ಪೇರಿಸಿದರು. ಮ್ಯಾಕ್ಸ್‌ವೆಲ್‌ 24 ಎಸೆತಗಳಿಂದ 33 ರನ್‌ ಹೊಡೆದರು.

ಕೊನೆ ಹಂತದಲ್ಲಿ ಪ್ಲೆಸಿಸ್‌ ಮತ್ತು ದಿನೇಶ್‌ ಕಾರ್ತಿಕ್‌ ಸ್ಫೋಟಕವಾಗಿ ಆಡಿದ್ದರಿಂದ ತಂಡದ ಮೊತ್ತ 190ರ ಗಡಿ ದಾಟುವಂತಾಯಿತು. ಫಾರೂಕಿ ಎಸೆದ ಅಂತಿಮ ಓವರಿನಲ್ಲಿ ಮೂರು ಸಿಕ್ಸರ್‌ ಮತ್ತು ಒಂದು ಬೌಂಡರಿ ಬಾರಿಸಿದ್ದ ದಿನೇಶ್‌ ಕಾರ್ತಿಕ್‌ ಕೇವಲ 8 ಎಸೆತಗಳಿಂದ 1 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ 30 ರನ್‌ ಗಳಿಸಿದರು.

ಇನ್ನಿಂಗ್ಸ್‌ ಪೂರ್ತಿ ಆಡಿದ ನಾಯಕ ಪ್ಲೆಸಿಸ್‌ ಒಟ್ಟಾರೆ 50 ಎಸೆತ ಎದುರಿಸಿ 73 ರನ್‌ ಗಳಿಸಿ ಅಜೇಯರಾಗಿ ಉಳಿದರು. 8 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು. ಇದು ಅವರ ಮೂರನೇ ಅರ್ಧಶತಕವಾಗಿದೆ.

ಸ್ಕೋರುಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು – 20 ಓವರ್‌, 192/3 (ಡುಪ್ಲೆಸಿಸ್‌ 73, ರಜತ್‌ ಪಾಟಿದಾರ್‌ 48, ಜಗದೀಶ್‌ ಸುಚಿತ್‌ 30/2)
ಸನ್‌ರೈಸರ್ ಹೈದರಾಬಾದ್‌  - 125/10 19.2 ಓವ ರ್‌.  (ರಾಹುಲ್‌ ತ್ರಿಪಾಠಿ 58, ಮಾರ್ಕ್‌ರಮ್‌ 21. ಹಸ ರಂಗ 18/5)
ಪಂದ್ಯಶ್ರೇಷ್ಠ: ವನಿಂದು ಹಸರಂಗ

Advertisement

Udayavani is now on Telegram. Click here to join our channel and stay updated with the latest news.

Next