Advertisement

ರಜತ್‌ ಪಾಟೀದಾರ್‌: ಆರ್‌ಸಿಬಿಯ ನ್ಯೂ ಸೂಪರ್‌ಸ್ಟಾರ್‌

10:36 PM May 26, 2022 | Team Udayavani |

ಕೋಲ್ಕತಾ: ಇನ್ನೂ ಐಪಿಎಲ್‌ ಚಾಂಪಿಯನ್‌ ಆಗದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಅದೆಷ್ಟೋ ಬಿಗ್‌ ಹಿಟ್ಟರ್‌ಗಳನ್ನು ಕಂಡಿದೆ. ಇವರಲ್ಲಿ ಬಹುತೇಕ ಮಂದಿ ವಿಶ್ವ ದರ್ಜೆಯ ಆಟಗಾರರು. ಕ್ರಿಸ್‌ ಗೇಲ್‌, ಎಬಿ ಡಿ ವಿಲಿಯರ್, ಗ್ಲೆನ್‌ ಮ್ಯಾಕ್ಸ್‌ವೆಲ್‌, ವಿರಾಟ್‌ ಕೊಹ್ಲಿ… ಹೀಗೆ ಪಟ್ಟಿ ಬೆಳೆಯುತ್ತದೆ. ಈ ಸಾಲಿಗೆ ನೂತನ ಸೇರ್ಪಡೆಯೇ ರಜತ್‌ ಪಾಟೀದಾರ್‌.

Advertisement

ಲಕ್ನೋ ಎದುರಿನ ಎಲಿಮಿನೇಟರ್‌ ಪಂದ್ಯದಲ್ಲಿ ನಾಯಕ ಫಾ ಡು ಪ್ಲೆಸಿಸ್‌ ಅವರನ್ನು ಶೂನ್ಯಕ್ಕೆ ಕಳೆದುಕೊಂಡು ಆಘಾತಕ್ಕೆ ಸಿಲುಕಿದ ಆರ್‌ಸಿಬಿಯನ್ನು ಹೋರಾಟಕ್ಕೆ ಅಣಿಗೊಳಿಸಿದವರೇ ರಜತ್‌ ಪಾಟೀದಾರ್‌. ಆರಂಭದಿಂದಲೇ ಸಿಡಿಯಲಾರಂಭಿಸಿದ ಅವರು ಹೆಚ್ಚೆಂದರೆ 30-40 ರನ್‌ ಬಾರಿಸಿ ಹೋಗಬಹುದು ಎಂದು ಭಾವಿಸಲಾಗಿತ್ತು. ಆದರೆ ಪಾಟೀದಾರ್‌ ಬೌಂಡರಿ -ಸಿಕ್ಸರ್‌ಗಳ ಪಟಾಕಿ ಸಿಡಿಯುತ್ತ ಹೋದರು. ನೂರರ ಮೊತ್ತವನ್ನೂ ಮೀರಿ ನಿಂತರು. ಆರ್‌ಸಿಬಿ ಇನ್ನಿಂಗ್ಸ್‌ ಮುಗಿಯುವಾಗ ಅವರು 112 ರನ್‌ ಮಾಡಿ ಅಜೇಯರಾಗಿದ್ದರು! ಎದುರಿಸಿದ್ದು 54 ಎಸೆತ; ಬಾರಿಸಿದ್ದು 7 ಸಿಕ್ಸರ್‌ ಹಾಗೂ 12 ಫೋರ್‌. ಇವರ ಸಾಹಸದಿಂದ ಇನ್ನೂರರ ಗಡಿ ದಾಟಿದ ಆರ್‌ಸಿಬಿ, 14 ರನ್‌ ಜಯದೊಂದಿಗೆ ಎಲಿಮಿನೇಟರ್‌ ಗಡಿಯನ್ನೂ ದಾಟುವಂತಾಯಿತು.

ಈ ಅಮೋಘ ಸಾಧನೆಯ ಬಳಿಕ ಮಾತಾಡಿದ ರಜತ್‌ ಪಾಟೀದಾರ್‌, ತಾನು ಯಾವುದೇ ಒತ್ತಡಕ್ಕೊಳಗಾಗಲಿಲ್ಲ ಎಂದರು. “2021ರ ಐಪಿಎಲ್‌ ಬಳಿಕ ನಾನು ಬಹಳ ಬ್ಯುಸಿ ಆಗಿದ್ದೆ. 2022ರ ಹರಾಜಿನ ವೇಳೆ ನಾನು ಆಯ್ಕೆಯಾಗಲಿಲ್ಲ. ಆದರೆ ಇದೆಲ್ಲ ನನ್ನ ಕೈಯಲ್ಲಿಲ್ಲ. ಈ ಬ್ಯಾಟಿಂಗ್‌ ವೇಳೆ ಯಾವುದೇ ಒತ್ತಡಕ್ಕೆ ಸಿಲುಕಲಿಲ್ಲ. ಕೇವಲ ಚೆಂಡಿನ ಮೇಲೆ ಹೆಚ್ಚಿನ ಫೋಕಸ್‌ ಮಾಡಿದ ಪರಿಣಾಮ ಇಂಥದೊಂದು ಪ್ರದರ್ಶನ ಸಾಧ್ಯವಾಯಿತು. ಕೃಣಾಲ್‌ ಪಾಂಡ್ಯ ಪವರ್‌ ಪ್ಲೇ ಅವಧಿಯ ಕೊನೆಯ ಓವರ್‌ ಎಸೆಯುವ ವೇಳೆ ನನ್ನ ಉದ್ದೇಶ ಸ್ಪಷ್ಟವಾಗಿತ್ತು. ಇದನ್ನು ಪಂದ್ಯದುದ್ದಕ್ಕೂ ಮುಂದುವರಿಸಿದೆ’ ಎಂದರು.

ಸಿಸೋಡಿಯಾ ಬದಲು…

ಪಾಟೀದಾರ್‌ 2021ರಲ್ಲಿ ಆರ್‌ಸಿಬಿ ಪರ ಆಡಿದರೂ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಕ್ಲಿಕ್‌ ಆಗಲೂ ಇಲ್ಲ. 4 ಪಂದ್ಯಗಳಿಂದ 71 ರನ್‌ ಹೊಡೆದಿದ್ದರು. 2022ರ ಮೆಗಾ ಹರಾಜಿನ ವೇಳೆ ಅವರು ಯಾರಿಗೂ ಬೇಡವಾಗಿದ್ದರು. ಕೊನೆಗೆ ಲವ್‌ನೀತ್‌ ಸಿಸೋಡಿಯಾ ಗಾಯಾಳಾಗಿ ಹೊರಬಿದ್ದ ಪರಿಣಾಮ ರಜತ್‌ ಪಾಟೀದಾರ್‌ ಅವರನ್ನು ಆರ್‌ಸಿಬಿ ಖರೀದಿಸಿತ್ತು. ನೀಡಿದ ಮೊತ್ತ ಕೇವಲ 20 ಲಕ್ಷ ರೂ. ಎಲಿಮಿನೇಟರ್‌ ಪಂದ್ಯದ ಶತಕದ ಮೂಲಕ ಐಪಿಎಲ್‌ ಹೀರೋ ಆಗಿ ಮೂಡಿಬಂದಿದ್ದಾರೆ.

Advertisement

ಈ ವರ್ಷ ಆರ್‌ಸಿಬಿ ಪರ 7 ಪಂದ್ಯಗಳಲ್ಲಿ ಕಾಣಿಸಿಕೊಂಡ ಪಾಟೀದಾರ್‌ಗೆ 6 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸುವ ಅವಕಾಶ ಸಿಕ್ಕಿದೆ. ಒಂದು ಅರ್ಧ ಶತಕ, ಹಾಗೂ ಲಕ್ನೋ ಎದುರಿನ ಶತಕ ಸೇರಿದಂತೆ 275 ರನ್‌ ಬಾರಿಸಿದ್ದಾರೆ.

ಯಾರು ಈ ಪಾಟೀದಾರ್‌? :

ಪಾಟೀದಾರ್‌ ಎಂಬುದು ಗುಜರಾತ್‌ನ ಶ್ರೀಮಂತ ಜನಾಂಗ. ಲ್ಯಾಂಡ್‌ ಲಾರ್ಡ್ಸ್‌.  ರಜತ್‌ ಮನೋಹರ್‌ ಪಾಟೀದಾರ್‌ ಕುಟುಂಬದ ಮೂಲವೂ ಗುಜರಾತ್‌. ಆದರೆ ರಜತ್‌ ಜನಿಸಿದ್ದು ಮಧ್ಯಪ್ರದೇಶದ ಇಂದೋರ್‌ನಲ್ಲಿ. 28 ವರ್ಷ. (1993, ಜೂನ್‌ 1). ಅಗ್ರ ಕ್ರಮಾಂಕದ ಬಲಗೈ ಬ್ಯಾಟರ್‌, ಆಫ್ಬ್ರೇಕ್‌ ಬೌಲರ್‌.

39 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈಗಾಗಲೇ ಎರಡೂವರೆ ಸಾವಿರ ರನ್‌ ಬಾರಿಸಿದ್ದಾರೆ. 43 ಲಿಸ್ಟ್‌ ಎ ಪಂದ್ಯಗಳಲ್ಲೂ ಆಡಿದ್ದಾರೆ. ಇತ್ತೀಚೆಗೆ ಟಿ20 ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್‌ ಪೂರ್ತಿಗೊಳಿಸಿದ್ದಾರೆ. ಸರಾಸರಿ 34.42. ಸ್ಟ್ರೈಕ್‌ರೇಟ್‌ 142.53.

ಮದುವೆ  ಪೋಸ್ಟ್‌ಪೋನ್‌! :

ರಜತ್‌ ಪಾಟೀದಾರ್‌ ಅವರ ಶತಕ ಸಾಹಸದಿಂದ ಅವರ ಕುಟುಂಬದಲ್ಲಿ ಭಾರೀ ಸಂಭ್ರಮ ಮೂಡಿದೆ. ಈ ಸಂದರ್ಭದಲ್ಲಿ ಅವರ ತಂದೆ ಮನೋಹರ್‌ ಪಾಟೀದಾರ್‌ ಒಂದು ಸ್ವಾರಸ್ಯಕರ ಸಂಗತಿಯನ್ನು ತಿಳಿಸಿದ್ದಾರೆ. “ಫೆಬ್ರವರಿಯಲ್ಲಿ ನಡೆದ ಹರಾಜಿನಲ್ಲಿ ರಜತ್‌ ಅನ್‌ಸೋಲ್ಡ್‌ ಆದಾಗ ಅವನಿಗೆ ಮದುವೆ ನಿಶ್ಚಯ ಮಾಡಿದೆವು. ರತಲಾಮ್‌ ಜಿಲ್ಲೆಯ ಹುಡುಗಿಯೊಂದಿಗೆ ಮೇ 9ರಂದು ಈ ವಿವಾಹ ನಡೆಯಬೇಕಿತ್ತು. ಈ ಸೀಸನ್‌ನಲ್ಲಿ ಸಿಕ್ಕಾಪಟ್ಟೆ ಸಮಾ ರಂಭ ಇದ್ದುದರಿಂದ ಬಹಳ ಬೇಗ ಇಂದೋರ್‌ನಲ್ಲಿ ಹಾಲ್‌ ಒಂದನ್ನೂ ಕಾದಿರಿಸಲಾಗಿತ್ತು. ಆದರೆ ಅವನು ಮತ್ತೆ ಆರ್‌ಸಿಬಿ ತಂಡ ಸೇರಿಕೊಂಡಿದ್ದರಿಂದ ಮದುವೆಯನ್ನು ಮುಂದೂಡಿದೆವು. ಇದೀಗ ರಣಜಿ ಪಂದ್ಯಾವಳಿ ಬಳಿಕ ಜುಲೈಯಲ್ಲಿ ಮದುವೆ ನಡೆಸು ವವರಿದ್ದೇವೆ’ ಎಂದಿದ್ದಾರೆ ರಜತ್‌ ಅವರ ತಂದೆ.

ಒಂದು ಪಂದ್ಯ,  10 ಲಕ್ಷ ರೂ. ಬಹುಮಾನ :

ರಜತ್‌ ಪಾಟೀದಾರ್‌ ಅವರನ್ನು ಆರ್‌ಸಿವಿ ಬದಲಿ ಆಟಗಾರನಾಗಿ ಖರೀದಿಸಿದ್ದು ಕೇವಲ 20 ಲಕ್ಷ ರೂ.ಗೆ. ಆದರೆ ಅವರು ಎಲಿಮಿನೇಟರ್‌ ಶತಕ ಸಾಧನೆಯೊಂದರಿಂದಲೇ ಬರೋಬ್ಬರಿ 10 ಲಕ್ಷ ರೂ. ಬಹುಮಾನವನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ.

ಪಂದ್ಯಶ್ರೇಷ್ಠ ಗೌರವಕ್ಕೆ 5 ಲಕ್ಷ ರೂ., ಮೋಸ್ಟ್‌ ವ್ಯಾಲ್ಯುಯೇಬಲ್‌ ಪ್ಲೇಯರ್‌ಗೆ ಒಂದು ಲಕ್ಷ ರೂ., ಕ್ರ್ಯಾಕಿಂಗ್‌ ಸಿಕ್ಸ್‌ಗೆ ಒಂದು ಲಕ್ಷ ರೂ., ರೂಪೇ ಆನ್‌ ದಿ ಗೋ ಫೋರ್ಸ್‌ಗೆ ಒಂದು ಲಕ್ಷ ರೂ. ಡ್ರೀಮ್‌ ಇಲೆವೆನ್‌ ಗೇಮ್‌ ಚೇಂಜರ್‌ಗೆ ಒಂದು ಲಕ್ಷ ರೂ., ಸೂಪರ್‌ ಸ್ಟ್ರೈಕ್‌ ಆಫ್ ದಿ ಬಾಲ್‌ಗೆ ಒಂದು ಲಕ್ಷ ರೂ…. ಹೀಗೆ ಸಾಗುತ್ತದೆ ಲಕ್ಷಗಳ ಪಟ್ಟಿ!

“ನನ್ನ ಪಾಲಿಗೆ ಇಂದು ವಿಶೇಷ ದಿನ. ರಜತ್‌ ಪಾಟೀದಾರ್‌ ಶತಕ ಅತ್ಯ ಮೋಘವಾದುದು. ನನಗೆ ವಿಪ ರೀತ ಸಂತಸವಾಗಿದೆ. ನಾನು ಚಂದ್ರನ ಮೇಲಿದ್ದೇನೆ. ತಂಡ ಒತ್ತಡಕ್ಕೆ ಸಿಲುಕಿದ ಸಂದರ್ಭಗಳಲ್ಲೆಲ್ಲ ಅವರು ನೆರವಿಗೆ ನಿಂತು ಪರಿಸ್ಥಿತಿಯನ್ನು ಸರಿದೂಗಿ ಸಿದ್ದಾರೆ’.- ಫಾ ಡು ಪ್ಲೆಸಿಸ್‌

Advertisement

Udayavani is now on Telegram. Click here to join our channel and stay updated with the latest news.

Next