Advertisement

RCB-ಮುಂಬೈ: ಪ್ಲೇ ಆಫ್‌ಗೆ ಪೈಪೋಟಿ

11:59 PM May 08, 2023 | Team Udayavani |

ಮುಂಬಯಿ: ಈ ಋತುವಿನ ಐಪಿಎಲ್‌ ಪಂದ್ಯಗಳ ಸಂಖ್ಯೆ ಈಗಾಗಲೇ ಐವತ್ತರ ಗಡಿ ದಾಟಿದೆ. ಹೀಗಾಗಿ ಇದೊಂದು ಮಹತ್ವದ ಘಟ್ಟ. ಪ್ಲೇ ಆಫ್ ಕ್ಷಣಗಣನೆ ತೀವ್ರಗೊಂಡಿರುವ ಹಂತವಿದು. ಗುಜರಾತ್‌ ಈಗಾಗಲೇ ಮುಂದಿನ ಹಂತವನ್ನು ಖಾತ್ರಿಗೊಳಿಸಿದೆ. ಇನ್ನೊಂದು ಪಂದ್ಯ ಗೆದ್ದರೆ ಪ್ಲೇ ಆಫ್ ಅಧಿಕೃತಗೊಳ್ಳಲಿದೆ. ಚೆನ್ನೈ ಸೇಫ್ ಝೋನ್‌ನಲ್ಲಿದೆ. ಉಳಿದೆಲ್ಲ ತಂಡಗಳು ಗೆಲುವು ಹಾಗೂ ಅದೃಷ್ಟವನ್ನು ನಂಬಿ ನಿಂತಿವೆ. ಇವುಗಳಲ್ಲಿ ಆರ್‌ಸಿಬಿ ಮತ್ತು ಮುಂಬೈ ಕೂಡ ಸೇರಿವೆ.

Advertisement

ಎರಡೂ ತಂಡಗಳು ಮಂಗಳವಾರ ರಾತ್ರಿ “ವಾಂಖೇಡೆ ಸ್ಟೇಡಿಯಂ”ನಲ್ಲಿ ದ್ವಿತೀಯ ಸುತ್ತಿನ ಸ್ಪರ್ಧೆಗೆ ಇಳಿಯಲಿವೆ. ಸದ್ಯ ಒಂದೇ ದೋಣಿಯ ಪಯಣಿಗರ ಸ್ಥಿತಿ ಇತ್ತಂಡಗಳದ್ದು. ಎರಡೂ ತಂಡಗಳು 10 ಪಂದ್ಯಗಳಲ್ಲಿ ಐದನ್ನು ಗೆದ್ದು, ಐದರಲ್ಲಿ ಮುಗ್ಗರಿಸಿವೆ. ತಲಾ 10 ಅಂಕಗಳನ್ನು ಹೊಂದಿವೆ. ರನ್‌ರೇಟ್‌ನಲ್ಲಿ ಆರ್‌ಸಿಬಿ ತುಸು ಮೇಲಿದೆ. ಹೀಗಾಗಿ ಮಂಗಳವಾರದ ಮೇಲಾಟದಲ್ಲಿ ಗೆದ್ದವರು “ಸುರಕ್ಷಿತ ವಲಯ”ವನ್ನು ತಲುಪಲಿದ್ದಾರೆ ಎಂಬುದೊಂದು ಲೆಕ್ಕಾಚಾರ.

ಆರ್‌ಸಿಬಿ-ಮುಂಬೈ ನಡುವಿನ ಮೊದಲ ಸುತ್ತಿನ ಪಂದ್ಯ ಬೆಂಗಳೂರಿನಲ್ಲಿ ನಡೆದಿತ್ತು. ಇದು ಪ್ರಸಕ್ತ ಋತುವಿನಲ್ಲಿ ಇತ್ತಂಡಗಳ ನಡುವಿನ ಮೊದಲ ಪಂದ್ಯವೂ ಆಗಿತ್ತು. ವಿರಾಟ್‌ ಕೊಹ್ಲಿ-ಫಾ ಡು ಪ್ಲೆಸಿಸ್‌ ಜೋಡಿಯ 148 ರನ್‌ ಜತೆಯಾಟದ ನೆರವಿನಿಂದ ಆರ್‌ಸಿಬಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.

ಇಲ್ಲಿಂದ ಮುಂದೆ ಎರಡೂ ತಂಡಗಳು ಅಸ್ಥಿರ ಪ್ರದರ್ಶನವನ್ನೇ ನೀಡುತ್ತ ಬಂದಿವೆ. ಒಮ್ಮೆ ಗೆಲ್ಲುವುದು, ಮತ್ತೂಮ್ಮೆ ಮುಗ್ಗರಿಸುವುದು. ಇದೊಂದು ಹವ್ಯಾಸವೇ ಆಗಿದೆ. ಮುಂದೆಯೂ ಇಂಥದೇ ಆಟ ಪುನರಾತರ್ವನೆಗೊಂಡರೆ ಪ್ಲೇ ಆಫ್ ಬಾಗಿಲು ಮುಚ್ಚುವ ಎಲ್ಲ ಸಾಧ್ಯತೆ ಇದೆ. ಹೀಗಾಗಿ ಗೆಲ್ಲುತ್ತ ಹೋಗುವುದೊಂದೇ ಮಾರ್ಗ.

ಸೋಲಿನ ದರ್ಶನ
ಎರಡೂ ತಂಡಗಳಿಗೆ ಹಿಂದಿನ ಪಂದ್ಯದಲ್ಲಿ ಸೋಲಿನ ದರ್ಶನವಾಗಿದೆ. ಡು ಪ್ಲೆಸಿಸ್‌ ಪಡೆ ಡೆಲ್ಲಿಗೆ ಹೋಗಿ ಸೋತು ಬಂದರೆ, ಮುಂಬೈ ಚೆನ್ನೈ ಅಂಗಳದಲ್ಲಿ ಮುಗ್ಗರಿಸಿತ್ತು.
ಅಂತೆಯೇ “ವಾಂಖೇಡೆ” ಕೂಡ ರೋಹಿತ್‌ ಪಡೆಗೆ ಅದೃಷ್ಟವನ್ನು ಮೊಗೆದು ಕೊಟ್ಟಿಲ್ಲ. ಆಡಿದ 4 ಪಂದ್ಯಗಳಲ್ಲಿ ಎರಡನ್ನು ಸೋತಿದೆ, ಉಳಿದೆರಡನ್ನು ಗೆದ್ದಿದೆ.

Advertisement

ಮುಂಬೈ ಸಮಸ್ಯೆ ನಾಯಕ ರೋಹಿತ್‌ ಶರ್ಮ ಅವರಿಂದಲೇ ಆರಂಭವಾಗುತ್ತದೆ. ಜತೆಗೆ ಬೌಲಿಂಗ್‌ ವೈಫ‌ಲ್ಯವೂ ಸಾಥ್‌ ಕೊಟ್ಟಿದೆ. ರೋಹಿತ್‌ 10 ಪಂದ್ಯಗಳಿಂದ ಕೇವಲ 184 ರನ್‌ ಗಳಿಸಿ ಕಳಪೆ ಫಾರ್ಮ್ ಮುಂದುವರಿಸುತ್ತಿದ್ದಾರೆ. ಜತೆಗೆ ಸೊನ್ನೆಯಲ್ಲೂ ದಾಖಲೆ ಬರೆದಿದ್ದಾರೆ. ಚೆನ್ನೈ ವಿರುದ್ಧ ಆರಂಭಿಕನ ಸ್ಥಾನವನ್ನು ಬಿಟ್ಟು 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದರೂ ಪ್ರಯೋಜನವಾಗಲಿಲ್ಲ. ಸತತ 2ನೇ ಸೊನ್ನೆ, ಸತತ 4ನೇ ಸಿಂಗಲ್‌ ಡಿಜಿಟ್‌ ಸ್ಕೋರ್‌ ರೋಹಿತ್‌ ಅವರ ಬ್ಯಾಟಿಂಗ್‌ ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿದೆ. ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌, ಕ್ಯಾಮರಾನ್‌ ಗ್ರೀನ್‌, ತಿಲಕ್‌ ವರ್ಮ, ಟಿಮ್‌ ಡೇವಿಡ್‌ ಮೇಲೆ ಒತ್ತಡ ಬೀಳಲು ಇದೂ ಒಂದು ಕಾರಣ. ಪರಿಣಾಮ, ಚೆನ್ನೈ ವಿರುದ್ಧ 8 ವಿಕೆಟಿಗೆ ಬರೀ 139 ರನ್‌ ಮಾಡಿ ಶರಣಾದದ್ದು.

ಡೆತ್‌ ಓವರ್‌ ಬೌಲಿಂಗ್‌ ವೈಫ‌ಲ್ಯ ಮುಂಬೈ ತಂಡದ ಮತ್ತೂಂದು ದೊಡ್ಡ ಸಮಸ್ಯೆ. ವಾಂಖೇಡೆಯ ಪ್ಲ್ರಾಟ್‌ ಟ್ರ್ಯಾಕ್‌ ಮೇಲೆ ಈಗಾಗಲೇ 2 ಸಲ ಸ್ಕೋರ್‌ ಇನ್ನೂರರ ಗಡಿ ದಾಟಿದೆ. ಮೊದಲು ಬೌಲಿಂಗ್‌ ಮಾಡಿದ ವೇಳೆ ಸತತ 4 ಸಲ ಎದುರಾಳಿಗೆ ಇನ್ನೂರಕ್ಕೂ ಅಧಿಕ ರನ್‌ ಬಿಟ್ಟುಕೊಟ್ಟಿದೆ.

ತ್ರಿವಳಿ ಬ್ಯಾಟರ್
ಇನ್ನೊಂದೆಡೆ ಆರ್‌ಸಿಬಿ ತನ್ನ “ತ್ರಿವಳಿ ಬ್ಯಾಟರ್‌”ಗಳ ಸಾಧನೆಯನ್ನು ಅವಲಂಬಿಸಿದೆ. ವಿರಾಟ್‌ ಕೊಹ್ಲಿ, ಫಾ ಡು ಪ್ಲೆಸಿಸ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ ವೆಲ್‌ ಮುಂಬೈಯ ಸಾಮಾನ್ಯ ಬೌಲಿಂಗ್‌ ಆಕ್ರಮಣವನ್ನು ಮೆಟ್ಟಿ ನಿಲ್ಲಬೇಕಿದೆ. ಡೆಲ್ಲಿ ವಿರುದ್ಧ ಆರ್‌ಸಿಬಿ ಬ್ಯಾಟಿಂಗ್‌ ಲೈನ್‌ಅಪ್‌ಗೆ “4ನೇ ಬ್ಯಾಟರ್‌”ನ ಸೇರ್ಪಡೆಯಾಗಿದೆ. ಇವರೇ ಮಹಿಪಾಲ್‌ ಲೊನ್ರೋರ್‌. ಅರ್ಧ ಶತಕ ಬಾರಿಸಿ ಮಧ್ಯಮ ಕ್ರಮಾಂಕಕ್ಕೆ ಭರವಸೆ ತುಂಬಿದ್ದಾರೆ. ಒಂದು ವೇಳೆ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದರೆ ಆರ್‌ಸಿಬಿ ಬೃಹತ್‌ ಮೊತ್ತ ದಾಖಲಿಸಿ ಮುಂಬೈಗೆ ಸವಾಲೊಡ್ಡಬೇಕಿದೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 181 ರನ್‌ ಗಳಿಸಿಯೂ ಇದನ್ನು ಉಳಿಸಿಕೊಳ್ಳಲು ಬೆಂಗಳೂರು ಬೌಲರ್‌ಗಳಿಂದ ಸಾಧ್ಯವಾಗಿರಲಿಲ್ಲ. ವಾರ್ನರ್‌ ಪಡೆ ಇನ್ನೂ 3.2 ಓವರ್‌ ಬಾಕಿ ಇರುವಾಗಲೇ ಮೂರೇ ವಿಕೆಟಿಗೆ ಈ ಮೊತ್ತವನ್ನು ಮೀರಿ ನಿಂತಿತ್ತು. ಆರ್‌ಸಿಬಿಯ ಯಾವ ಬೌಲರ್‌ ಕೂಡ ಘಾತಕವಾಗಿ ಪರಿಣಮಿಸಿರಲಿಲ್ಲ. ಇದು ಮುಂಬೈಗೂ ಲಾಭವಾಗಿ ಪರಿಣಮಿಸದಂತೆ ನೋಡಿಕೊಳ್ಳಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next