ಮುಂಬಯಿ: ಚೊಚ್ಚಲ ವನಿತಾ ಪ್ರೀಮಿಯರ್ ಲೀಗ್ ಪಂದ್ಯಾವಳಿ ಆರಂಭವಾಗಿ ಕೇವಲ 4 ದಿನಗಳಾಗಿವೆಯಷ್ಟೇ. ಅಷ್ಟರಲ್ಲೇ ಅಂತಿಮ ಹಂತದ ಟ್ರೆಂಡ್ ಒಂದು ಕಂಡುಬಂದಿದೆ.
ಭರ್ಜರಿ ರನ್‌ರೇಟ್‌ನೊಂದಿಗೆ ಎರಡೂ ಪಂದ್ಯಗಳನ್ನು ಗೆದ್ದಿರುವ ಆತಿಥೇಯ ಮುಂಬೈ ಇಂಡಿಯನ್ಸ್ ಹಾಟ್ ಫೇವರಿಟ್ ಆಗಿ ಗೋಚರಿಸಿದೆ. ಎರಡನ್ನೂ ಸೋತಿರುವ ಆರ್‌ಸಿಬಿ ಮತ್ತು ಗುಜರಾತ್ ಹಾದಿ ದುರ್ಗಮ ಎಂಬುದು ಸಾಬೀತಾಗಿದೆ.
ಕ್ರಿಕೆಟ್ ಲೀಗ್ ಒಂದರ ಮುಕ್ತಾಯಕ್ಕೆ ಇನ್ನೂ 3 ವಾರವಿರುವಾಗಲೇ ಇಂಥ ದೊಂದು ವಾತಾವರಣ ಸೃಷ್ಟಿಯಾಗಿ ರುವುದು ಒಳ್ಳೆಯ ಲಕ್ಷಣವೇನೂ ಅಲ್ಲ. ಇದರಿಂದ ಇಡೀ ಕೂಟದ ಆಸಕ್ತಿ ಬೇಗನೇ ಹೊರಟು ಹೋಗುವ ಸಾಧ್ಯತೆ ಇದೆ. ಇಂಥ ಸ್ಥಿತಿಯಲ್ಲೇ ಪರಾಜಿತ ತಂಡಗಳಾದ ಆರ್‌ಸಿಬಿ ಮತ್ತು ಗುಜರಾತ್ ಬುಧವಾರ ರಾತ್ರಿ ಮುಖಾಮುಖೀ ಆಗಲಿವೆ. ಇವು ಆಡಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿವೆ. ಯಾರು ಗೆಲುವಿನ ಹಳಿ ಏರುತ್ತಾರೆ, ಯಾರು ಸೋಲಿನ ಹ್ಯಾಟ್ರಿಕ್ ಸಂಕಟಕ್ಕೆ ಸಿಲುಕುತ್ತಾರೆ ಎಂಬ ನಿರೀಕ್ಷೆ ಎದುರಾಗಿದೆ. ಇಲ್ಲಿ ಮತ್ತೊಂದು ಸೋಲನುಭವಿಸುವ ತಂಡಕ್ಕೆ ಉಳಿಗಾಲ ಕಷ್ಟ ಎಂಬುದು ಈಗಿನ ಲೆಕ್ಕಾಚಾರ.
ಕಾಗದದಲ್ಲಷ್ಟೇ ಬಲಿಷ್ಠ
ಡಬ್ಲ್ಯುಪಿಎಲ್ ಹರಾಜಿನ ಚಿತ್ರಣ ಕಂಡಾಗ ಸ್ಮತಿ ಮಂಧನಾ ನೇತೃತ್ವದ ಆರ್‌ಸಿಬಿ ಹೆಚ್ಚು ಬಲಿಷ್ಠವಾಗಿ ಗೋಚರಿ ಸಿತ್ತು. ಕನ್ನಡಿಗರ ಈ ನೆಚ್ಚಿನ ತಂಡಕ್ಕೆ ವಿಶ್ವ ದರ್ಜೆಯ ಸ್ಟಾರ್ ಆಟಗಾರರ ಬಲವಿತ್ತು. ಆದರೆ ಇದು ಕಾಗದದಲ್ಲಿ ಮಾತ್ರ ಎಂಬುದು ಸಾಬೀತಾಗಿದೆ. ಮೊದಲು ಡೆಲ್ಲಿ ವಿರುದ್ಧ, ಅನಂತರ ಮುಂಬೈ ವಿರುದ್ಧ ದೊಡ್ಡ ಸೋಲನುಭವಿಸಿ ನಿರೀಕ್ಷೆಯನ್ನೆಲ್ಲ ಹುಸಿಗೊಳಿಸಿದೆ. ಯಾವ ವಿಭಾಗದಲ್ಲೂ ಮಂಧನಾ ಪಡೆ ಘಾತಕವಾಗಿ ಪರಿಣಮಿಸಿಲ್ಲ.
Related Articles
ಆರ್‌ಸಿಬಿ ಬೌಲಿಂಗ್ ಕೂಟದಲ್ಲೇ ಅತ್ಯಂತ ದುರ್ಬಲವಾಗಿ ಗೋಚರಿಸಿದೆ. 2 ಪಂದ್ಯಗಳಲ್ಲಿ ಉರುಳಿಸಿದ್ದು 3 ವಿಕೆಟ್ ಮಾತ್ರ. ಡೆಲ್ಲಿಗೆ 223 ರನ್ ಬಿಟ್ಟು ಕೊಟ್ಟಿತು. ಇಲ್ಲಿ ಕೆಡವಿದ್ದು ಎರಡೇ ವಿಕೆಟ್. ಮುಂಬೈ ಒಂದೇ ವಿಕೆಟ್ ನಷ್ಟದಲ್ಲಿ 159 ರನ್ ಪೇರಿಸಿ ಆರ್‌ಸಿಬಿ ಬೌಲಿಂಗ್ ದೌರ್ಬಲ್ಯಕ್ಕೆ ಕನ್ನಡಿ ಹಿಡಿಯಿತು.
ಜೋಶ್ ತೋರದ ತಂಡಗಳು
ಮುಂಬಯಿಯ ಟ್ರ್ಯಾಕ್‌ಗಳೆಲ್ಲ 175-180ರಷ್ಟು ರನ್ ಹರಿವನ್ನು ಒಳಗೊಂಡಿರುವುದು ಈಗಾಗಲೇ ಸಾಬೀತಾಗಿದೆ. ಮುಂಬೈ ಮತ್ತು ಡೆಲ್ಲಿ ತಂಡಗಳು ಇನ್ನೂರರ ಗಡಿ ದಾಟಿ ಮುನ್ನುಗ್ಗಿವೆ. ಆದರೆ ಆರ್‌ಸಿಬಿ ಮತ್ತು ಗುಜರಾತ್‌ಗೆ ಇನ್ನೂ ಬ್ಯಾಟಿಂಗ್ ಲಯ ಸಿಕ್ಕಿಲ್ಲ. ಎರಡೂ ತಂಡಗಳು ಟಿ20 ಜೋಶ್ ತೋರಲು, ಮುನ್ನುಗ್ಗಿ ಬಾರಿಸಲು, ದೊಡ್ಡ ಜತೆಯಾಟ ನಡೆಸಲು ವಿಫಲವಾಗಿವೆ.
ಉದ್ಘಾಟನ ಪಂದ್ಯದಲ್ಲಂತೂ ಗುಜರಾತ್ 64 ರನ್ನಿಗೆ ಉದುರಿ ವೈರಾಗ್ಯ ಹುಟ್ಟಿಸಿತು. ಅಲ್ಲಿ ಮುಂಬೈ 5ಕ್ಕೆ 207 ರನ್ ರಾಶಿ ಹಾಕಿತ್ತು. ಬಳಿಕ ಯುಪಿ ವಾರಿಯರ್ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈಚೆಲ್ಲಿತು.
ಎರಡೂ ತಂಡಗಳು ಒಡಕು ದೋಣಿಯಲ್ಲಿ ಒಟ್ಟಿಗೇ ಪಯಣಿಸುತ್ತಿವೆ. ಮುಂದಿನ ದಾರಿ ಎತ್ತ, ಏನು ಎಂಬುದು ಸದ್ಯಕ್ಕೆ ಹೊಳೆಯದ ಪರಿಸ್ಥಿತಿ!
ಇಂದಿನ ಪಂದ್ಯಕ್ಕೆ ಉಚಿತ ಪ್ರವೇಶ
ಬುಧವಾರದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ “ವನಿತಾ ಪ್ರೀಮಿಯರ್ ಲೀಗ್’ ವಿಶೇಷ ಘೋಷಣೆಯೊಂದನ್ನು ಮಾಡಿದೆ. ಅಂದಿನ ಪಂದ್ಯಕ್ಕೆ ವೀಕ್ಷಕರಿಗೆ ಉಚಿತ ಪ್ರವೇಶ ನೀಡಲು ನಿರ್ಧರಿಸಿದೆ.
ಬುಧವಾರ ಪರಾಜಿತ ತಂಡಗಳಾದ ಆರ್‌ಸಿಬಿ ಮತ್ತು ಗುಜರಾತ್ ಇಲ್ಲಿನ “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ಎದುರಾಗಲಿವೆ. ಈ ಪಂದ್ಯದ ವೇಳೆ ಕೇವಲ ಮಹಿಳೆಯರಿಗಷ್ಟೇ ಅಲ್ಲ, ಎಲ್ಲರಿಗೂ ಉಚಿತ ಪ್ರವೇಶ ನೀಡಲಾಗುವುದು.
ಮುಂಬೈ-ಆರ್‌ಸಿಬಿ ನಡುವಿನ ರವಿವಾರ ರಾತ್ರಿಯ ಮುಖಾಮುಖಿಯ ವೇಳೆ ಈ ಕುರಿತು ಪ್ರಕಟನೆ ನೀಡಲಾಗಿತ್ತು. ಇದೀಗ ಡಬ್ಲ್ಯುಪಿಎಲ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಿದೆ.