ಬೆಂಗಳೂರು: 17ನೇ ಸೀಸನ್ ನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಅಭಿಯಾನ ಅಂತ್ಯವಾಗಿದೆ. ನಾಲ್ಕನೇ ಸ್ಥಾನಿಯಾಗಿ ಪ್ಲೇ ಆಫ್ ತಲುಪಿದ ಆರ್ ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಹೊರಬಿದ್ದಿದೆ.
ಪಂದ್ಯದ ಬಳಿಕ ಮಾತನಾಡಿದ ಕೋಚ್ ಆ್ಯಂಡಿ ಫ್ಲವರ್, ಮುಂದಿನ ಸೀಸನ್ ನಲ್ಲಿ ಬೌಲರ್ ಗಳ ಬದಲಾವಣೆ ಕುರಿತು ಸುಳಿವು ನೀಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿ20 ಪಂದ್ಯಗಳನ್ನು ಗೆಲ್ಲಲು ಕೇವಲ ವೇಗವು ಎಂದಿಗೂ ಸಾಕಾಗುವುದಿಲ್ಲ, ಅಲ್ಲಿ ವಿಭಿನ್ನ ಕೌಶಲ್ಯಗಳನ್ನು ಹೊಂದಿರುವ ಬೌಲರ್ ಗಳು ಬೇಕಾಗುತ್ತದೆ ಎಂದು ಫ್ಲವರ್ ಹೇಳಿದ್ದಾರೆ.
ಈ ಬಾರಿ ಆರ್ ಸಿಬಿ ತವರಿನ ಹೆಚ್ಚಿನ ಪಂದ್ಯಗಳಲ್ಲಿ ಸೋಲನುಭವಿಸಿದೆ. ಮೊಹಮ್ಮದ್ ಸಿರಾಜ್ (ER 9.18), ಲಾಕಿ ಫರ್ಗುಸನ್ (ER 10.62), ಯಶ್ ದಯಾಲ್ (ER 9.14), ರೀಸ್ ಟಾಪ್ಲೆ (ER 11.200, ಕರ್ಣ್ ಶರ್ಮಾ (ER 10.58) ಅವರು ಪರಿಣಾಮಕಾರಿಯಾಗಲಿಲ್ಲ.
“ನಿಮಗೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಸ್ಸಂಶಯವಾಗಿ ಹೆಚ್ಚು ನುರಿತ ಬೌಲರ್‌ಗಳು ಬೇಕು. ಅಲ್ಲಿ ಕೇವಲ ವೇಗವು ಸಾಕಾಗುವುದಿಲ್ಲ. ನಿಮಗೆ ಕೌಶಲ್ಯಪೂರ್ಣ, ಬುದ್ಧಿವಂತ ಬೌಲರ್ ಗಳು ಮತ್ತು ಚಿನ್ನಸ್ವಾಮಿಯಲ್ಲಿ ನಿಜವಾಗಿಯೂ ನಿರ್ದಿಷ್ಟ ಯೋಜನೆಗಳಿಗೆ ಬೌಲಿಂಗ್ ಮಾಡುವವರು ಬೇಕು” ಎಂದು ಫ್ಲವರ್ ಹೇಳಿದರು.
ಮುಂದಿನ ಐಪಿಎಲ್‌ಗಿಂತ ಮೊದಲು ಮೆಗಾ ಹರಾಜು ನಡೆಯಲಿದೆ. ಅದರಲ್ಲಿ ಆರ್‌ಸಿಬಿ ನಿರ್ದಿಷ್ಟ ರೀತಿಯ ಆಟಗಾರರನ್ನು ಆಯ್ಕೆ ಮಾಡಬೇಕೆಂದು ಫ್ಲವರ್ ಬಯಸಿದ್ದಾರೆ.
ಇತ್ತೀಚೆಗೆ ಟಿ20 ಕ್ರಿಕೆಟ್ ಗೆ ಪವರ್ ಗೇಮ್ ಹೇಗೆ ಪರಿಣಾಮ ಬೀರಿದೆ ಎಂದು ನೋಡಿದ್ದೀರಿ. ಬ್ಯಾಟಿಂಗ್ ವಿಭಾಗದಲ್ಲಿ ನಮಗೆ ಹೆಚ್ಚು ಪವರ್ ಹಿಟ್ಟರ್ ಗಳ ಅಗತ್ಯವಿದೆ ಎಂದು ಆರ್ ಸಿಬಿ ಮುಖ್ಯ ಕೋಚ್ ಹೇಳಿದರು.