ಮುಂಬಯಿ : ಇಂದು ಬುಧವಾರ ಈ ಸಾಲಿನ ಎರಡನೇ ದ್ವೆ„ಮಾಸಿಕ ಹಣಕಾಸು ನೀತಿ ಪರಾಮರ್ಶೆ ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಆದರೆ ಜಿಡಿಪಿ ಅಂದಾಜನ್ನು ಶೇ.7.3ಕ್ಕೆ ಇಳಿಸಿದೆ.
ರಿಪೋ ರೇಟ್ ಮತ್ತು ರಿಸರ್ವ್ ರಿಪೋ ರೇಟ್ ಅನ್ನು ಆರ್‌ಬಿಐ ಅನುಕ್ರಮವಾಗಿ ಶೇ.6.25 ಮತ್ತು ಶೇ.6ರಲ್ಲೇ ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಅಂತೆಯೇ ಸಿಆರ್‌ಆರ್ ಕೂಡ ಶೇ.4ರಲ್ಲೇ ಮುಂದುವರಿದಿದೆ.
ಮಾರುಕಟ್ಟೆ ವಿಶ್ಲೇಷಕರು ಮತ್ತು ಪರಿಣತರ ನಿರೀಕ್ಷೆಗೆ ತಕ್ಕಂತೆ ಬಡ್ಡಿ ದರಗಳು ಯಥಾಸ್ಥಿತಿಯಲ್ಲಿ ಮುಂದುವರಿದಿರುವುದು ಗಮನಾರ್ಹವಾಗಿದೆ. ಆರ್‌ಬಿಐ ಇಂದು ತನ್ನ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡ ಪರಿಣಾವಾಗಿ ಶೇರು ಮಾರುಕಟ್ಟೆಗೆ ನಿರಾಶೆ ಉಂಟಾಗಿದೆ.
ಬ್ಯಾಂಕುಗಳಿಗೆ ಹೆಚ್ಚಿನ ನಗದು ಪೂರೈಕೆಯನ್ನು ಮಾಡುವ ದಿಶೆಯಲ್ಲಿ ಆರ್‌ಬಿಐ ಇದೇ ಜೂನ್ 24ರಿಂದ ಆರಂಭವಾಗುವಂತೆ ಎಸ್‌ಎಲ್‌ಆರ್ – ಶಾಸನಾತ್ಮಕ ನಗದು ಅನುಪಾತವನ್ನು ಶೇ.0.5ರಷ್ಟು ಕಡಿತ ಮಾಡಿದೆ.
ಆರ್‌ಬಿಐ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತನ್ನ ಬಡ್ಡಿ ದರವನ್ನು ಶೇ.0.25ರಷ್ಟು ಕಡಿತ ಮಾಡಿತ್ತು. ಆ ಬಳಿಕ ಈ ವರ್ಷ ಎಪ್ರಿಲ್‌ನಲ್ಲಿ ಅಚ್ಚರಿಯ ಕ್ರಮವಾಗಿ ರಿವರ್ಸ್ ರಿಪೋ ರೇಟ್ ಅನ್ನು ಶೇ.0.25ರಷ್ಟು ಕಡಿತ ಮಾಡಿತ್ತು.