Advertisement

ರಾಯುಡು ನಿವೃತ್ತಿ ಆಗುತ್ತಿಲ್ಲ ! ನಿವೃತ್ತಿಯ ಟ್ವೀಟ್‌ ಅಳಿಸಿದ ಚೆನ್ನೈ ಕ್ರಿಕೆಟಿಗ

12:28 AM May 15, 2022 | Team Udayavani |

ಮುಂಬಯಿ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ರಮುಖ ಬ್ಯಾಟರ್‌ ಅಂಬಾಟಿ ರಾಯುಡು ಕ್ರಿಕೆಟ್‌ ನಿವೃತ್ತಿಯನ್ನು ಪ್ರಸ್ತಾವಿಸಿ ದಿಢೀರ್‌ ಸುದ್ದಿಯಾಗಿದ್ದಾರೆ.

Advertisement

“ನನ್ನ ಪಾಲಿಗೆ 2022ರ ಐಪಿಎಲ್‌ ಸೀಸನ್‌ ಕೊನೆಯದು’ ಎಂದು ಟ್ವೀಟ್‌ ಮಾಡಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದರು. ಕೂಡಲೇ ಈ ಟ್ವೀಟ್‌ ಡಿಲೀಟ್‌ ಮಾಡಿ ಇನ್ನಷ್ಟು ಅಚ್ಚರಿ ಮೂಡಿಸಿದರು.

“ಇದು ನನ್ನ ಕೊನೆಯ ಐಪಿಎಲ್‌ ಎಂದು ಖುಷಿಯಲ್ಲೇ ಹೇಳುತ್ತಿದ್ದೇನೆ. ಕಳೆದ 13 ವರ್ಷಗಳಿಂದ ಎರಡು ಶ್ರೇಷ್ಠ ತಂಡಗಳೊಂದಿಗೆ ಆಡಿದ್ದು ನನ್ನ ಪಾಲಿನ ಅದ್ಭುತ ಸಂಗತಿ. ಇಂಥದೊಂದು ಅಮೋಘ ಪಯಣಕ್ಕಾಗಿ ಮುಂಬೈ ಮತ್ತು ಚೆನ್ನೈ ತಂಡಗಳೆರಡಕ್ಕೂ ಕೃತಜ್ಞತೆಗಳು’ ಎಂಬ ರೀತಿಯಲ್ಲಿ ರಾಯುಡು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ಕಂಡುಬಂದದ್ದು ಶನಿವಾರ ಅಪರಾಹ್ನ. ಆದರೆ ಒಂದೇ ಗಂಟೆಯಲ್ಲಿ ಇದನ್ನು ಅಳಿಸಿದರು. ಇದಕ್ಕೆ ರಾಯುಡು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ. ಆದರೆ ಚೆನ್ನೈ ಫ್ರಾಂಚೈಸಿಯ ಸಿಎಒ ಕಾಶಿ ವಿಶ್ವನಾಥನ್‌ ಸ್ಪಷ್ಟನೆ ನೀಡಿದ್ದು, ಅಂಬಾಟಿ ರಾಯುಡು ಐಪಿಎಲ್‌ನಿಂದ ನಿವೃತ್ತಿ ಆಗುತ್ತಿಲ್ಲ, ಮುಂದಿನ ಋತುವಿನಲ್ಲೂ ನಮ್ಮ ತಂಡದಲ್ಲೇ ಇರುತ್ತಾರೆ ಎಂದಿದ್ದಾರೆ.

ಹಾಲಿ ಚಾಂಪಿಯನ್‌ ಚೆನ್ನೈ ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿದರೂ ರಾಯುಡು 124ರ ಸ್ಟೈಕ್‌ರೇಟ್‌ನಲ್ಲಿ 271 ರನ್‌ ಪೇರಿಸಿದ್ದಾರೆ. ಆದರೆ ಸದ್ಯ ಮುಂದೋಳಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರಿಂದ ಅವರ ಆಕ್ರಮಣಕಾರಿ ಆಟಕ್ಕೆ ತೊಡಕಾಗುತ್ತಿದೆ ಎಂದು ಕೋಚ್‌ ಸ್ಟೀಫ‌ನ್‌ ಫ್ಲೆಮಿಂಗ್‌ ಹೇಳಿದ್ದಾರೆ.

Advertisement

9ನೇ ಸೀಸನ್‌
ಅಂಬಾಟಿ ರಾಯುಡು ಅವರಿಗೆ ಈಗ 36 ವರ್ಷ. ಐಪಿಎಲ್‌ನಲ್ಲಿ ಇದು 9ನೇ ಸೀಸನ್‌. 187 ಪಂದ್ಯಗಳಿಂದ 4,187 ರನ್‌ ಪೇರಿಸಿದ್ದಾರೆ. ಅಂದರೆ, ಐಪಿಎಲ್‌ನ ಗರಿಷ್ಠ ಸ್ಕೋರರ್‌ಗಳ ಯಾದಿಯಲ್ಲಿ 12ನೇ ಸ್ಥಾನ. ಗೌತಮ್‌ ಗಂಭೀರ್‌ ಅವರಿಗಿಂತ ಸ್ವಲ್ಪ ಹಿಂದಿದ್ದಾರೆ.

ಟೀಮ್‌ ಇಂಡಿಯಾ ಪರ 55 ಏಕದಿನ ಪಂದ್ಯಗಳನ್ನು ಆಡಿದ್ದು, 1,694 ರನ್‌ ಗಳಿಸಿದ್ದಾರೆ.

2019ರ ಏಕದಿನ ವಿಶ್ವಕಪ್‌ ವೇಳೆ ಇವರನ್ನು ಕಡೆಗಣಿಸಿ ರಿಷಭ್‌ ಪಂತ್‌ ಮತ್ತು ವಿಜಯ್‌ ಶಂಕರ್‌ ಅವರನ್ನು ಆಯ್ಕೆ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇವರಿಬ್ಬರೂ ವಿಶ್ವಕಪ್‌ನಲ್ಲಿ ವಿಫ‌ಲರಾಗಿದ್ದರು. ಆಗ ಎಲ್ಲ ಮಾದರಿಯ ಕ್ರಿಕೆಟಿಗೆ ರಾಯುಡು ನಿವೃತ್ತಿ ಘೋಷಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಬಳಿಕ ನಿವೃತ್ತಿ ತೊರೆದು ಆಡಲಿಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next