ಸೀರೆ ಅನ್ನೋದು ಎಲ್ಲಾ ಹೆಣ್ಣುಮಕ್ಕಳ ಆಸೆ. ಸೀರೆ ಒಂದೇ ಚೆನ್ನಾಗಿದ್ದರೆ ಸಾಲದು, ಅದರ ರವಿಕೆ ಕೂಡಾ ಅಷ್ಟೇ ಚೆನ್ನಾಗಿ, ಸುಂದರವಾಗಿ, ಒಳ್ಳೆ ಫಿಟ್ಟಿಂಗ್ ಅಲ್ಲಿ ಇರಬೇಕು. ಒಂದು ಸೀರೆ ರವಿಕೆ ಸರಿಯಾಗಿಲ್ಲ ಅಂದರೆ ಏನೆಲ್ಲಾ ಪ್ರಸಂಗಗಳು ನಡೆಯಬಹುದು ಅನ್ನೋದನ್ನ ಹೇಳಲು ಚಿತ್ರವೊಂದು ತಯಾರಾಗಿದೆ. ಅದೇ “ರವಿಕೆ ಪ್ರಸಂಗ’. ಇತ್ತೀಚಿಗೆ ಚಿತ್ರತಂಡ ತನ್ನ ಚಿತ್ರದ ಟೀಸರ್ ಬಿಡುಗಡೆಗೊಳಿಸಿತು.
“ದೃಷ್ಟಿ ಮೀಡಿಯಾ’ ಪ್ರೊಡಕ್ಷನ್‌ನಡಿ “ರವಿಕೆ ಪ್ರಸಂಗ’ ತಯಾರಾಗಿದ್ದು, ಚಿತ್ರಕ್ಕೆ ಶಂತನು ಮಹರ್ಷಿ, ನಿರಂಜನ್ ಗೌಡ, ಗಿರೀಶ್ ಎಸ್ ಎಂ, ಶಿವರುದ್ರಯ್ಯ ಎಸ್.ವಿ ಬಂಡವಾಳ ಹೂಡಿದ್ದಾರೆ.ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಇದ್ದು, ಸಂತೋಷ್ ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ಚಿತ್ರದ ನಾಯಕಿ ಗೀತಾ ಭಾರತಿ ಭಟ್ ಮಾತನಾಡಿ, “ಚಿತ್ರದಲ್ಲಿ ಸಾನ್ವಿ ಅನ್ನುವ ಪಾತ್ರ ಮಾಡಿದ್ದೇನೆ. ಚಿತ್ರ ಎಲ್ಲಾ ಹೆಣ್ಣುಮಕ್ಕಳಿಗೂ ಕನೆಕ್ಟ್ ಆಗುತ್ತದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಸೀರೆ ಅಂದರೆ ಬಹಳ ಇಷ್ಟ. ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ ಸರಿಯಾದ ಫಿಟ್ಟಿಂಗ್ ಅಲ್ಲಿ ಬ್ಲೌ ಸ್ ಇರಬೇಕು. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ ಹೀಗೆ ಇರಬೇಕು ಅಂತ ಆಸೆಯಿಂದ ಒಳ್ಳೆ ಟೈಲರ್ ಹತ್ತಿರ ರವಿಕೆ ಕೊಡ್ತೀವಿ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ. ಏನೋ ಒಂದು ಸರಿಯಾಗಿರಲ್ಲ. ಹಾಗೆ ಚಿತ್ರದಲ್ಲಿ ಆ ಸರಿಯಾಗಿ ಆಗದ ರವಿಕೆಯಿಂದ ಸಾನ್ವಿ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದೇ ಚಿತ್ರ. ಹಾಗೆ ಚಿತ್ರದಲ್ಲಿ ಮಂಗಳೂರು ಕನ್ನಡವನ್ನು ಬಳಸಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದರು.
ಚಿತ್ರದ ಪ್ರಮುಖ ಪಾತ್ರಧಾರಿ ಪದ್ಮಜಾ ರಾವ್ ಮಾತನಾಡಿ, “ಈ ಚಿತ್ರಕ್ಕೆ ಕರೆ ಬಂದಾಗ ತುಂಬಾ ಟೈಟ್ ಶೆಡ್ನೂಲ್ ಇತ್ತು. 8-9 ದಿನ ಇಲ್ಲಿ ಶೂಟ್ ಮಾಡಬೇಕಿತ್ತು. ಆದರೆ ಮತ್ತೂಂದು ಶೂಟ್ ಕೂಡಾ ಇತ್ತು. ಆದರೆ ನನಗೆ ಈ ಗಂಡ ಹೆಂಡತಿ ಜೋಡಿ ಕಥೆಯನ್ನು 1 ಲೈನ್ ಅಲ್ಲಿ ಹೇಳಿದ್ದು ಇಷ್ಟ ಆಗಿತ್ತು, ಚಿತ್ರ ಸಂಪೂರ್ಣ ಕಂಟೆಂಟ್ ಸಿನಿಮಾ. ಹಾಗಾಗಿ ಇದನ್ನು ಬಿಡದೆ ಇಷ್ಟ ಪಟ್ಟು ಮಾಡಿದ್ದೇನೆ. ಸಂತೋಷ್ ಹಾಗೂ ಪಾವನ ತುಂಬಾ ಚೆನ್ನಾಗಿ ಒಂದು ವಿಷಯವನ್ನು ಎಲ್ಲರಿಗೂ ಕನೆಕ್ಟ್ ಆಗೋ ಥರ ಹೇಳಿದ್ದಾರೆ ಎಂದರು.
ನಿರ್ದೇಶಕ ಸಂತೋಷ್ ಮಾತನಾಡಿ, “ಚಿತ್ರಕಥೆ ಪಾವನ ಅವರದ್ದು. ಚಿತ್ರವನ್ನು ಸಂಪೂರ್ಣವಾಗಿ ದಕ್ಷಿಣ ಕನ್ನಡ, ಸುಳ್ಯ, ಸಂಪಾಜೆ ಆ ಕಡೆಯಲ್ಲೇ ಚಿತ್ರೀಕರಣ ಮಾಡಿದ್ದೇವೆ. ದಕ್ಷಿಣ ಕನ್ನಡದ ಭಾಷಾ ಶೈಲಿಯಲ್ಲಿ ಮೂಡಿಬಂದಿದೆ. ಲೋಕೇಶನ್ ಕೂಡಾ ಅಷ್ಟೇ ಚೆನ್ನಾಗಿ ಬಂದಿದೆ. ಕಲಾವಿದರು ಚಿತ್ರದ ಪ್ರತಿಯೊಂದು ಪಾತ್ರಕ್ಕೂ ಹೇಳಿಮಾಡಿಸಿದ ಹಾಗೆ ಸಿಕ್ಕರು. ಚಿತ್ರದಲ್ಲಿ ಮೂರು ಹಾಡುಗಳಿವೆ. ಚಿತ್ರದ ಕೆಲಸಗಳು ಕೊನೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಟ್ರೇಲರ್ ಮೂಲಕ ಬರುತ್ತೇವೆ. ಶೀಘ್ರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ’ ಎಂದರು.
ಚಿತ್ರದ ತಂತ್ರಜ್ಞರು ಹಾಗೂ ಕಲಾವಿದರು ಚಿತ್ರದಲ್ಲಿನ ತಮ್ಮ ಅನುಭವ ಹಾಗೂ ಪಾತ್ರಗಳ ಕುರಿತ ಮಾಹಿತಿ ಹಂಚಿಕೊಂಡರು.ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣ ಮೂರ್ತಿ ಕವತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಹನುಮಂತೇ ಗೌಡ, ಖುಷಿ ಆಚಾರ್ , ಹನುಮಂತ್ ರಾವ್ ಕೆ ಚಿತ್ರದ ತಾರಾಬಳಗದಲ್ಲಿದ್ದಾರೆ.