ನಟ ರವಿಚಂದ್ರನ್ ಶೀಘ್ರದಲ್ಲಿಯೇ ಲೀಗಲ್ ಥ್ರಿಲ್ಲರ್ ಶೈಲಿಯ ಸಿನಿಮಾವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಹಿಂದೆ “ಆಕ್ಸಿಡೆಂಟ್’, “ಲಾಸ್ಟ್‌ಬಸ್, “ಅಮೃತ್ ಅಪಾರ್ಟ್‌ಮೆಂಟ್ಸ್’ ನಂತಹ ಸಿನಿಮಾಗಳನ್ನು ನಿರ್ಮಿಸಿರುವ ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ “ಜಿ9 ಕಮ್ಯುನಿಕೇಶನ್ ಮೀಡಿಯ ಅಂಡ್ ಎಂಟರ್ ಟೈನ್ಮೆಂಟ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿದೆ.
ಈಗಾಗಲೇ ಈ ಸಿನಿಮಾದ ಕಥಾಹಂದರವನ್ನು ಕೇಳಿ ಮೆಚ್ಚಿಕೊಂಡಿರುವ ರವಿಚಂದ್ರನ್ ಈ ಸಿನಿಮಾದ ಪಾತ್ರಕ್ಕೆ ಬಣ್ಣ ಹಚ್ಚಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮೊದಲ ಬಾರಿಗೆ ರವಿಚಂದ್ರನ್ ಲೀಗಲ್ -ಥ್ರಿಲ್ಲರ್ ಶೈಲಿಯ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, “ಕೌಟುಂಬಿಕ ಪ್ರೇಕ್ಷಕ ವರ್ಗದ ಜೊತೆಗೆ, ಜಾಗತಿಕ ಮಟ್ಟದಲ್ಲಿನ ಹಲವಾರು ಭಾಷೆಗಳ, ವಿವಿಧ ಬಗೆಯ ಕಥೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಇಂದಿನ ಯುವ ಪೀಳಿಗೆಯೊಂದಿಗೂ, ಈ ಸಿನಿಮಾದ ಮೂಲಕ ತಾವು ಹತ್ತಿರವಾಗುವ ಅವಕಾಶವಿದೆ’ ಎಂಬ ನಿರೀಕ್ಷೆಯ ಮಾತು ರವಿಚಂದ್ರನ್ ಅವರದ್ದು.
ಇನ್ನು ಹೆಸರಿಡದ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಸ್ವತಃ ಗುರುರಾಜ್ ಕುಲಕರ್ಣಿ ಅವರೇ ಕಥೆ ಬರೆದು ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿರುವ ಈ ಸಿನಿಮಾಕ್ಕೆ ಎಂ. ಎಸ್ ರಮೇಶ್ ಸಂಭಾಷಣೆಯಿದೆ. ಚಿತ್ರದ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಿದ್ದು, ಶಿವ ಬಿ. ಕೆ ಕುಮಾರ್ ಛಾಯಾಗ್ರಹಣ, ಬಿ. ಎಸ್ ಕೆಂಪರಾಜು ಸಂಕಲನವಿದೆ.
ಸದ್ಯ ರವಿಚಂದ್ರನ್ ಅವರೊಂದಿಗೆ ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ದೊಡ್ಡ ಕಲಾವಿದರ ಕ್ಯಾನ್ವಾಸ್ ಸಿನಿಮಾದಲ್ಲಿರಲಿದ್ದು, ಚಿತ್ರತಂಡದ ಮೂಲಗಳ ಪ್ರಕಾರ ಇದೇ ಏಪ್ರಿಲ್ ತಿಂಗಳಿನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.