ಉಡುಪಿ: ಮಾನಸಿಕ ಅಸ್ವಸ್ಥಗೊಂಡು 15 ತಿಂಗಳ ಹಿಂದೆ ಬ್ರಹ್ಮಾವರದ ರಾ.ಹೆ. ಪರಿಸರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ರಾಜಸ್ಥಾನದ ನಿವಾಸಿ ರವಿ ಸಿಂಗ್ (27) ಮೂರು ವರ್ಷಗಳ ಬಳಿಕ ತನ್ನ ಕುಟುಂಬವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಈತನಿಗೆ ನೆರವಾಗಿದ್ದರು. 2 ತಿಂಗಳ ಕಾಲ ಚಿಕಿತ್ಸೆ ನೀಡಿದ ಬಾಳಿಗಾ ಆಸ್ಪತ್ರೆ, 6 ತಿಂಗಳ ಕಾಲ ಪುನರ್ವಸತಿ ಕಲ್ಪಿಸಿದ ಮಣಿಪಾಲ ಕೆಎಂಸಿಯ ಅಂಗಸಂಸ್ಥೆ ಹೊಂಬೆಳಕು ಹಾಗೂ ಕೊನೆಯವರೆಗೂ ಆಶ್ರಯ ನೀಡಿದ ಮಂಜೇಶ್ವರ ದೈಗುಳಿಯ ಶ್ರೀಸಾಯಿ ಸೇವಾಶ್ರಮದ ಡಾ| ಉದಯ ಕುಮಾರ್ ನೆರವಾಗಿದ್ದಾರೆ.
ರವಿ ಸಿಂಗ್ ಮನೆ ಬಿಟ್ಟು 3 ವರ್ಷಗಳಾಗಿದ್ದು, ಮಾನಸಿಕ ಅಸ್ವಸ್ಥತೆಯಿಂದ ಉಪ್ಪೂರು ರಾ.ಹೆ. ಬಳಿ ಅಲೆಯುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಅವರು ಈತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪಾಲಕರ ಪತ್ತೆಗೆ ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಮಂಜೇಶ್ವರದ ದೈಗುಳಿ ಶ್ರೀಸಾಯಿ ಸೇವಾಶ್ರಮದಲ್ಲಿ ನಿತ್ಯ ಯೋಗ, ಧ್ಯಾನ ಹಾಗೂ ಔಷಧಕ್ಕೆ ಸ್ಪಂದಿಸಿದ ಆತ ತನ್ನ ಮನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಅದರಂತೆ ಮುಂಬಯಿಯ ಶ್ರದ್ಧಾ ರಿಹ್ಯಾಬಿಲಿಟೇಶನ್ ಸೆಂಟರ್ ಮೂಲಕ ಆತನ ಹೆತ್ತವರನ್ನು ಪತ್ತೆ ಹಚ್ಚಿ ಮಾಹಿತಿ ನೀಡಲಾಗಿತ್ತು.