Advertisement

ಕಳಕೊಂಡ ಮೊಬೈಲ್‌ ಪತ್ತೆಗೆ ಹೊಸ ವ್ಯವಸ್ಥೆ

05:38 PM Sep 16, 2019 | sudhir |

ಮುಂಬಯಿ: ಅಯ್ಯೋ ಸಾವಿರಾರು ರೂಪಾಯಿ ನೀಡಿ ಮೊಬೈಲ್‌ ಖರೀದಿ ಮಾಡಿದೆ… ಕಳೆದು ಹೋಯಿತಲ್ಲವೆಂದೋ ಅಥವಾ ಯಾರೋ ಕದ್ದರೆಂದೋ ಪರಿತಪಿಸುವ ಕಾಲ ಮರೆಯಾಗುವ ದಿನಗಳು ಹತ್ತಿರಕ್ಕೆ ಬಂದಿವೆ…

Advertisement

ಕೇಂದ್ರ ದೂರ ಸಂಪರ್ಕ ಇಲಾಖೆಯೇ ಮೊಬೈಲ್‌ ಕಳೆದುಕೊಳ್ಳುವವರಿಗೆ ಆಶಾದೀಪವಾಗುವಂಥ ವ್ಯವಸ್ಥೆಯೊಂದನ್ನು ರೂಪಿಸಿದ್ದು, ಈ ಮೂಲಕ ನಿಮ್ಮ ಮೊಬೈಲ್‌ ಅನ್ನು ವಾಪಸ್‌ ಪಡೆಯುವ ಅಥವಾ ಕದ್ದವರು ಅದನ್ನು ಬಳಸಲು ಸಾಧ್ಯವಾಗದೇ ಇರುವಂಥ ಕ್ರಮ ಜರಗಿಸಲು ಸಾಧ್ಯವಾಗಲಿದೆ.

ಕೇಂದ್ರ ದೂರ ಸಂಪರ್ಕ ಇಲಾಖೆ ಸೆಂಟ್ರಲ್‌ ಈಕ್ವಿಪ್‌ಮೆಂಟ್‌ ಐಡೆಂಟಿಟಿ ರಿಜಿಸ್ಟರ್‌ (ಸಿಇಐಆರ್‌) ಎಂಬ ದತ್ತಾಂಶ ಆಧರಿತ ನಿರ್ವಹಣ ವ್ಯವಸ್ಥೆಯೊಂದನ್ನು ರೂಪಿಸಿದೆ. ಪ್ರಾಯೋಗಿಕವಾಗಿ ಇದನ್ನು ಮಹಾರಾಷ್ಟ್ರದಲ್ಲಿ ಜಾರಿ ಮಾಡಲಾಗಿದ್ದು, ಶುಕ್ರವಾರ ಕೇಂದ್ರ ದೂರಸಂಪರ್ಕ ಇಲಾಖೆ ಸಚಿವ ರವಿಶಂಕರ್‌ ಪ್ರಸಾದ್‌ ಚಾಲನೆ ನೀಡಿದ್ದಾರೆ.

ಸಿಇಐಆರ್‌ ಕೆಲಸವೇನು?
ಪ್ರತಿಯೊಂದು ಮೊಬೈಲ್‌ಗ‌ೂ ನಿಖರ ವಾದ ಐಎಂಇಐ (ಇಂಟರ್‌ನ್ಯಾಶನಲ್‌ ಮೊಬೈಲ್‌ ಈಕ್ವಿಪ್‌ಮೆಂಟ್‌ ಐಡೆಂಟಿಟಿ) ಸಂಖ್ಯೆಯಿರು ತ್ತದೆ. ಎರಡು ಸಿಮ್‌ಗಳಿರುವ ಮೊಬೈಲ್‌ಗ‌ಳಲ್ಲಿ ಎರಡು ಐಎಂಇಐ ಸಂಖ್ಯೆಗಳು ಇರುತ್ತವೆ. ಸಿಇಐಆರ್‌ ತನ್ನದೇ ಆದ ಪ್ರತ್ಯೇಕ ಡೇಟಾಬೇಸ್‌ ಹೊಂದಿರಲಿದ್ದು, ಅದು ದೇಶದಲ್ಲಿ ಈವರೆಗೆ ಅಧಿಕೃತವಾಗಿ ಮಾರಾಟವಾಗಿರುವ ಎಲ್ಲ ಮೊಬೈಲ್‌ಗ‌ಳ ಐಎಂಇಐ ಸಂಖ್ಯೆಗಳನ್ನು ಸಂಗ್ರಹಿಸಿಡಲಿದೆ.

ಜತೆಗೆ ಆ ಎಲ್ಲ ಸಂಖ್ಯೆಗಳನ್ನು ಅಂತಾರಾಷ್ಟ್ರೀಯ ಮಟ್ಟದ ಜಿಎಸ್‌ಎಂ ಅಸೋಸಿಯೇಶನ್‌ನ ಸಂಗ್ರಹದಲ್ಲಿರುವ ಐಎಂಇಐ ಸಂಖ್ಯೆಗಳ ಡೇಟಾಬೇಸ್‌ ಜತೆಗೆ ಬೆಸೆಯುತ್ತದೆ. ಇದರ ಆಧಾರದಲ್ಲಿ ಕಳೆದುಹೋದ ಮೊಬೈಲ್‌ ಎಲ್ಲಿ, ಯಾವ ದೇಶದಲ್ಲಿ, ಯಾವ ಪ್ರದೇಶದಲ್ಲಿ ಬಳಕೆಯಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚುವುದು ಸುಲಭವಾಗಲಿದೆ. ಆ ಎಲ್ಲ ಮಾಹಿತಿಗಳನ್ನು ಸಿಇಐಆರ್‌ ದತ್ತಾಂಶವು ತನಿಖಾಧಿಕಾರಿಗಳಿಗೆ ನೀಡಲಿದೆ.

Advertisement

ಐಎಂಇಐ ಬದಲಿಸಿದರೂ ಬಳಕೆ ಅಸಾಧ್ಯ
ಈ ವ್ಯವಸ್ಥೆಯಲ್ಲಿ ಐಎಂಇಐ ಸಂಖ್ಯೆಯನ್ನು ಮಾರ್ಪಾಡು ಮಾಡಿದರೂ ಈ ಮೊಬೈಲ್‌ಗೆ ಹಾಕುವ ಸಿಮ್‌ನಿಂದಾಗಿ ಸಿಕ್ಕಿಬೀಳುತ್ತಾರೆ. ಕಡೇ ಪಕ್ಷ ಅದನ್ನು ಪಡೆಯಲು ಆಗದೇ ಇದ್ದರೂ ಸಂಪೂರ್ಣವಾಗಿ ನಿಷ್ಕ್ರಿಯವನ್ನಂತೂ ಮಾಡಬಹುದಾಗಿದೆ. ವಿಶೇಷವೆಂದರೆ ಈ ವ್ಯವಸ್ಥೆ ಮೂಲಕ ಆ ಮೊಬೈಲ್‌ನಲ್ಲಿ ಸಿಮ್‌ ಇಲ್ಲದೇ ಇದ್ದರೂ ಬ್ಲಾಕ್‌ ಮಾಡಬಹುದಾಗಿದೆ. ಇಎಂಇಐ ಸಂಖ್ಯೆ ತಿರುಚಿದರೆ 3 ವರ್ಷಗಳ ವರೆಗೆ ಜೈಲಿಗೆ ಹಾಕಬಹುದಾಗಿದೆ.

ಪ್ರಕ್ರಿಯೆ ಹೇಗೆ?
1. ಮೊಬೈಲ್‌ ಕಳೆದುಹೋದಲ್ಲಿ ಅಥವಾ ಕಾಣೆಯಾದಲ್ಲಿ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ಕೊಟ್ಟು ಎಫ್ಐಆರ್‌ ಪಡೆಯಿರಿ.

2. ಕೇಂದ್ರ ದೂರ ಸಂಪರ್ಕ ಇಲಾಖೆಯ ಸಹಾಯವಾಣಿ ಸಂಖ್ಯೆ 14422ಕ್ಕೆ ಕರೆ ಮಾಡಿ ಮಾಹಿತಿ ನೀಡಿ.

3. ದೂರ ಸಂಪರ್ಕ ಇಲಾಖೆ ನಿಮ್ಮ ಮೊಬೈಲ್‌ನ ಐಎಂಇಐ ನಂಬರ್‌ ಅನ್ನು ಬ್ಲಾಕ್‌ ಮಾಡುತ್ತದೆ.

4. ನಿಮ್ಮ ಮೊಬೈಲ್‌ ಸಂಪೂರ್ಣವಾಗಿ ನಿಷ್ಕ್ರಿಯವಾಗುತ್ತದೆ, ಯಾವುದೇ ನೆಟ್‌ವರ್ಕ್‌ನಲ್ಲೂ ಕೆಲಸ ಮಾಡಲ್ಲ.

5. ಒಂದು ವೇಳೆ ಕದ್ದವರು ಐಎಂಇಐ ಸಂಖ್ಯೆಯನ್ನು ಮಾರ್ಪಾಡು ಮಾಡಿದರೂ ಬಳಕೆ ಅಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next