Advertisement

ಅಚ್ಚರಿ ಮೂಡಿಸಿದ ರವಿಶಂಕರ್‌, ಜಾಬ್ಡೇಕರ್‌ ನಿರ್ಗಮನ

01:50 AM Jul 08, 2021 | Team Udayavani |

ಹೊಸದಿಲ್ಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆಯ ನಡುವೆಯೇ ಅಚ್ಚರಿಗೀಡು ಮಾಡಿದ ವಿಚಾರವೆಂದರೆ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ಕೇಂದ್ರ ವಾರ್ತಾ ಮತ್ತು ಪ್ರಚಾರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ನಿರ್ಗಮನ. ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ, ಕಾನೂನು ಮತ್ತು ನ್ಯಾಯ ಖಾತೆ ಸಚಿವರಾಗಿದ್ದ ರವಿಶಂಕರ್‌ ಪ್ರಸಾದ್‌, ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌, ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ ಕೇಂದ್ರ ಸರಕಾರ ಜಾರಿಗೊಳಿಸಿದ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಖಡಕ್‌ ಆಗಿ ಹೇಳಿದ್ದರು. ವಾರ್ತಾ ಮತ್ತು ಪ್ರಚಾರ, ಅರಣ್ಯ ಮತ್ತು ಪರಿಸರ, ಹವಾಮಾನ ಬದಲಾವಣೆ, ಸಾರ್ವಜನಿಕ ಉದ್ದಿಮೆ ಮತ್ತು ಭಾರಿ ಕೈಗಾರಿಕೆಗಳ ಸಚಿವರಾಗಿದ್ದ ಪ್ರಕಾಶ್‌ ಜಾಬ್ಡೇಕರ್‌ ನಿರ್ಗಮನ ಅಚ್ಚರಿ ತಂದಿದೆ. ಸಂಪುಟ ಸಭೆಯ ಬಳಿಕ, ಅಲ್ಲಿ ಕೈಗೊಂಡ ನಿರ್ಧಾರಗಳನ್ನು ಅವರೇ ಹೆಚ್ಚಿನ ಸಂದರ್ಭದಲ್ಲಿ ಪ್ರಕಟಿಸಿದ್ದರು. ನಾಲ್ಕು ವರ್ಷಗಳಿಂದ, ಕೇಂದ್ರದ ಅನೇಕ ಮಹತ್ವದ ನಿರ್ಧಾರಗಳು, ಯೋಜನೆಗಳನ್ನು ಪ್ರಕಟಿಸಿದ ಅನುಭವ ಅವರದ್ದು.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಹರ್ಷವರ್ಧನ್‌, ಕೊರೊನಾ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಎಡವಿದರೆಂಬ ಟೀಕೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಹಾಗೂ ಆರೋಗ್ಯ ಇಲಾಖೆಯ ಸಹಾಯಕ ಸಚಿವ ಅಶ್ವನಿ ಚೌಬೆ ರಾಜೀನಾಮೆ ಕೊಡಬೇಕಾಗಿ ಬಂದಿದೆ ಯೆಂದು ಹೇಳಲಾಗಿದೆ.

ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆಯ ಸಚಿವರಾಗಿದ್ದ ತಾವರ್‌ಚಂದ್‌ ಗೆಹಲೋಟ್ ಅವರನ್ನು ಬುಧವಾರದಂದು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ನೇಮಿಸಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಸದಸ್ಯ ಡಿ.ವಿ. ಸದಾನಂದ ಗೌಡ, ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌, ಶಿಕ್ಷಣ ಖಾತೆ ಸಹಾಯಕ ಸಚಿವ (ಸ್ವತಂತ್ರ ಹೊಣೆಗಾರಿಕೆ) ಸಂಜಯ್‌ ಶಾಮರಾವ್‌ ಧೋತ್ರೆ, ಕಾರ್ಮಿಕ ಖಾತೆ ಸಹಾಯ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌, ಪರಿಸರ ಖಾತೆ ಸಹಾಯಕ ಸಚಿವ ಬಾಬುಲಾಲ್‌ ಸುಪ್ರಿಯೊ, ಜಲ ಶಕ್ತಿ ಇಲಾಖೆಯ ಸಹಾಯಕ ಸಚಿವ, ಹೈನುಗಾರಿಕೆ ಹಾಗೂ ಎಂಎಸ್‌ಎಂಇ ಇಲಾಖೆಗಳ ಸಹಾಯಕ ಸಚಿವ ಪ್ರತಾಪ್‌ ಚಂದ್ರ ಸಾರಂಗಿ ಕೂಡ ಪುನಾರಚನೆ ವೇಳೆ ತಮ್ಮ ಸ್ಥಾನಗಳನ್ನು ತ್ಯಜಿಸಿದ್ದಾರೆ.

ಕೊರೊನಾ 2ನೇ ಅಲೆ ಸಂದರ್ಭದಲ್ಲಿ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ವಿರುದ್ಧ ಹಲವಾರು ಟೀಕೆಗಳು ಬಂದಿದ್ದವು. ಇನ್ನು, ಹಾಗೂ ಸಂತೋಷ್‌ ಕುಮಾರ್‌ ಗಂಗ್ವಾರ್‌ ಅವರ ವಿರುದ್ಧ ಲಾಕ್‌ಡೌನ್‌ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಸೂಕ್ತ ಸೌಕರ್ಯ, ಪರ್ಯಾಣ ಉದ್ಯೋಗ ವ್ಯವಸ್ಥೆ ಕೈಗೊಳ್ಳದ ಕಾರಣಕ್ಕೆ ಟೀಕೆಗೊಳಗಾಗಿದ್ದರು. ರಾಜೀನಾಮೆ ನೀಡಿದ ಸಚಿವರ ರಾಜೀನಾಮೆಗಳನ್ನು ಕೇಂದ್ರ ಸರಕಾರದ ಸಲಹೆ ಮೇರೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next