Advertisement

ರವಿ ಬೆಳಗೆರೆಗೆ ಮತ್ತೂಂದು ಸಂಕಷ್ಟ

12:18 PM Dec 15, 2017 | Team Udayavani |

ಬೆಂಗಳೂರು: ಈಗಾಗಲೇ ತಮ್ಮ ಸಹೋದ್ಯೋಗಿ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಹೈರಾಣಾಗಿರುವ ಹಾಯ್‌ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಅವರಿಗೆ ಮತ್ತೂಂದು ಸಂಕಷ್ಟ ಎದುರಾಗಿದೆ. ಏಳು ವರ್ಷ ಹಿಂದಿನ ಪ್ರಕರಣವೊಂದು ಈಗ ಮತ್ತೂಮ್ಮೆ ಅವರ ಬೆನ್ನುಬಿದ್ದಿದೆ.

Advertisement

ಏಳು ವರ್ಷದ ಹಿಂದಿನ ಮಾನನಷ್ಠ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ರವಿ ಬೆಳಗೆರೆ ಅವರನ್ನು ಇದೇ ಡಿ.28ರೊಳಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಸಂಜಯ್‌ನಗರ ಠಾಣೆ ಪೊಲೀಸರಿಗೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಗುರುವಾರ ಆದೇಶಿಸಿದೆ. 7 ವರ್ಷದ ಹಿಂದೆ ಹಾಯ್‌ ಬೆಂಗಳೂರು ಪತ್ರಿಕೆಯಲ್ಲಿ ಒರಟ ಚಿತ್ರ ನಾಯಕ ಪ್ರಶಾಂತ್‌ ವಿರುದ್ಧ ಅವಹೇಳನಕಾರಿಯಾಗಿ ಸುದ್ದಿ ಪ್ರಕಟಿಸಲಾಗಿತ್ತು.

ಈ ಸಂಬಂಧ ಪ್ರಶಾಂತ್‌, ರವಿ ಬೆಳಗೆರೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಕೋರ್ಟ್‌ಗೆ ಹಾಜರಾಗುವಂತೆ ಸಾಕಷ್ಟು ಬಾರಿ ಸಮನ್ಸ್‌ ಜಾರಿ ಮಾಡಿದ್ದರೂ ಇಲ್ಲದ ಸಬೂಬು ಹೇಳಿ ಬೆಳಗೆರೆ ಗೈರಾಗುತ್ತಿದ್ದರು. ಇದೀಗ ರವಿ ಬೆಳಗೆರೆ ಬೆಂಗಳೂರಿನಲ್ಲೇ ಇದ್ದು,  ಕೋರ್ಟ್‌ಗೆ ಹಾಜರು ಪಡಿಸುವಂತೆ ಪ್ರಶಾಂತ್‌ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ 8ನೇ ಎಸಿಎಂಎಂ ನ್ಯಾಯಾಲಯ ಈ ಆದೇಶ ನೀಡಿದೆ.

ಸುನೀಲ್‌ ಅಸಮಾಧಾನ: ತಮ್ಮ ಕೊಲೆಗೆ ಸುಪಾರಿ ನೀಡಿದ್ದ ರವಿ ಬೆಳಗೆರೆ ವಿರುದ್ಧ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರ ಕಾರ್ಯವೈಖರಿ ಬಗ್ಗೆ ಪತ್ರಕರ್ತ ಸುನೀಲ್‌ ಹೆಗ್ಗರವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗೆರೆಯ ಪ್ರಭಾವಕ್ಕೆ ಸಿಸಿಬಿ ಪೊಲೀಸರು ಮಣಿದಿರುವ ಅನುಮಾನವಿದೆ.

ಹತ್ಯೆಗೆ ಸುಪಾರಿ ಪಡೆದಿದ್ದ ಶಶಿಧರ್‌ ಆರ್‌.ಮುಂಡೆವಾಡಿಯೇ ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದರು ಎಂದು ಹೇಳಿದ್ದಾನೆ. ನನ್ನ ಹೇಳಿಕೆಯನ್ನು ಕೂಡ ದಾಖಲಿಸಿಕೊಳ್ಳಲಾಗಿದೆ. ಆದಾಗ್ಯೂ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸೂಕ್ತ ಸಾಕ್ಷ್ಯಾಧಾರ ಸಲ್ಲಿಸದ ಕಾರಣ ಆರೋಪಿ ಜಾಮೀನು ಪಡೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಕಾನೂನು ಹೋರಾಟ: “ರವಿ ಬೆಳಗೆರೆಗೆ ನ್ಯಾಯಾಲಯ ಮೂರು ದಿನಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದು, ಶನಿವಾರ ಮತ್ತೂಮ್ಮೆ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಹೀಗಾಗಿ ಬೆಳಗೆರೆಗೆ ನೀಡಿರುವ ಜಾಮೀನು ಪ್ರಶ್ನಿಸಿ ನನ್ನ ವಕೀಲರ ಮೂಲಕ ಕಾನೂನು ಹೋರಾಟ ನಡೆಸುತ್ತೇನೆ.

ರವಿಬೆಳಗೆರೆ ಬಿಡುಗಡೆಯಾದರೆ, ನನ್ನ ಹಾಗೂ ನನ್ನ ಕುಟುಂಬ ಸದಸ್ಯರ ಮೇಲೆ ಯಾವುದೇ ಸಮಯದಲ್ಲಿ ದಾಳಿ ಆಗುವ ಸಾಧ್ಯತೆಯಿದೆ. ನಮಗೇನೇ ಆದರೂ ಅದಕ್ಕೆ ರವಿ ಬೆಳಗೆರೆ, ಅವರ ಕುಟುಂಬ ಸದಸ್ಯರು ಹಾಗೂ ಅವರ ಬೆಂಬಲಿಗರೇ ಕಾರಣ ಎಂದು ಸುನಿಲ್‌ ಹೆಗ್ಗರವಳ್ಳಿ ಹೇಳಿದ್ದಾರೆ.

ಅರಣ್ಯ ಇಲಾಖೆಗೆ ವರ್ಗಾವಣೆ: ರವಿ ಬೆಳಗೆರೆ ಕಚೇರಿಯಲ್ಲಿ ಪತ್ತೆಯಾದ ಜಿಂಕೆ ಚರ್ಮ ಮತ್ತು ಆಮೆ ಚಿಪ್ಪನ್ನು ಸಿಸಿಬಿ ಅಧಿಕಾರಿಗಳು ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಪ್ರಕರಣ ದಾಖಲಿಸುವಂತೆ ತಿಳಿಸಿದ್ದಾರೆ. ಈ ಸಂಬಂಧ ಬುಧವಾರ ಅರಣ್ಯ ಭವನದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು,

“ಕಳೆದ ಶುಕ್ರವಾರ ಹಾಯ್‌ ಬೆಂಗಳೂರು ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡ ಜಿಂಕೆ ಚರ್ಮ ಹಾಗೂ 1.5*1.5 ಉದ್ದಗಲದ ಆಮೆ ಚಿಪ್ಪನ್ನು ಹಸ್ತಾಂತರಿಸಿ ಕ್ರಮಕೈಗೊಳ್ಳಿ,’ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳುವುದಾಗಿ ಉತ್ತರಿಸಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next