Advertisement

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

08:30 AM May 21, 2024 | Team Udayavani |

ಸಿಸಿಬಿ ದಾಳಿ ನೂರಕ್ಕೂ ಅಧಿಕ ಮಂದಿ ಪಾರ್ಟಿಯಲ್ಲಿ ಭಾಗಿ ; 5 ಆರೋಪಿಗಳ ಸೆರೆ ; ಎಂಡಿಎಂಎ ಸಹಿತ ಅಪಾರ ಪ್ರಮಾಣದ ಮಾದಕ ವಸ್ತು ಜಪ್ತಿ

Advertisement

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಹೊರ ವಲಯದಲ್ಲಿ ಮತ್ತೆ ರೇವ್‌ ಪಾರ್ಟಿ ಸುದ್ದು ಮಾಡಿದ್ದು, ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಹೊರವಲಯದಲ್ಲಿರುವ ಫಾರ್ಮ್ ಹೌಸ್‌ನಲ್ಲಿ ತೆಲುಗಿನ ಸಿನಿಮಾ ಮತ್ತು ಕಿರುತೆರೆ ನಟ, ನಟಿಯರು ಸೇರಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದ ರೇವ್‌ ಪಾರ್ಟಿ ಮೇಲೆ ಸೋಮವಾರ ನಸುಕಿನಲ್ಲಿ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಡ್ರಗ್ಸ್‌ ನೆಶೆಯಲ್ಲಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೈದರಾಬಾದ್‌ ಮೂಲದ ವಾಸು, ಅರುಣ್‌, ಸಿದ್ದಿಕಿ, ರಣಧೀರ್‌ ಮತ್ತು ಬಾಬು ಎಂಬವರನ್ನು ಬಂಧಿಸ ಲಾಗಿದೆ. ದಾಳಿ ವೇಳೆ 15.56 ಗ್ರಾಂ ಎಂಡಿಎಂಎ, 6.2 ಗ್ರಾಂ ಕೊಕೇನ್‌, 6 ಗ್ರಾಂ ಹೈಡ್ರೋ ಗಾಂಜಾ, 5 ಮೊಬೈಲ್‌ ಗಳು ಹಾಗೂ 2 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಜಿ.ಆರ್‌.ಫಾರ್ಮ್ ಹೌಸ್‌ ನಲ್ಲಿ ಮಾದಕವಸ್ತು ಬಳಸಿಕೊಂಡು ರೇವ್‌ ಪಾರ್ಟಿ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ನಸುಕಿನ 3.30ರ ಸುಮಾರಿಗೆ ಸಿಸಿಬಿ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಫಾರ್ಮ್ ಹೌಸ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ರೇವ್‌ ಪಾರ್ಟಿ ಆಹ್ವಾನ ಪತ್ರಿಕೆ

ನಟ, ನಟಿಯರು ಸೇರಿ 100ಕ್ಕೂ ಹೆಚ್ಚು ಮಂದಿ ಭಾಗಿ: ಈ ರೇವ್‌ ಪಾರ್ಟಿಯಲ್ಲಿ ಅಂದಾಜು 70 ಪುರು ಷರು ಹಾಗೂ 30 ಮಹಿಳೆಯರು ಸೇರಿ 100ಕ್ಕೂ ಹೆಚ್ಚು ಮಂದಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ಪೈಕಿ ಆಂಧ್ರಪ್ರದೇಶ ಮೂಲದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅಲ್ಲಿನ ಕೆಲ ನಟ, ನಟಿಯರು, ಉದ್ಯಮಿಗಳು, ಮಾಡೆಲ್‌ಗ‌ಳು, ರಾಜಕಾರಣಿಗಳು, ಟೆಕಿಗಳು ಪಾಲ್ಗೊಂಡಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.

Advertisement

ಹೊರಗೆ ಬರ್ತ್‌ ಡೇ ಪಾರ್ಟಿ ಫ್ಲೆಕ್ಸ್‌, ಒಳಗೆ ರೇವ್‌ ಪಾರ್ಟಿ!: ಗೋಪಾಲ ರೆಡ್ಡಿ ಎಂಬವರಿಗೆ ಸೇರಿದ್ದು ಎನ್ನ ಲಾದ ಈ ಫೌರ್ಮ್ ಹೌಸ್‌ನಲ್ಲಿ ಹೈದರಾಬಾದ್‌ ಮೂಲದ ವಾಸು ಎಂಬಾತನ ಹುಟ್ಟುಹಬ್ಬದ ಆಚರಣೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಫೌರ್ಮ್ ಹೌಸ್‌ ನಲ್ಲಿ ‘ಸನ್‌ ಸೆಟ್‌ ಟು ಸನ್‌ ರೈಸ್‌ ವಿಕ್ಟರಿ’ ಎಂಬ ರೇವ್‌ ಪಾರ್ಟಿ ಆಯೋಜಿಸಲಾಗಿತ್ತು. ಫಾರ್ಮ್ ಹೌಸ್‌ನ ಹೊರಗೆ ಹ್ಯಾಪಿ ಬರ್ತ್‌ ಡೇ ವಾಸು ಎಂಬ ಫ್ಲೆಕ್ಸ್‌ ಇತ್ತು. ಆದರೆ, ಒಳಗೆ ಮಾದಕವಸ್ತು ಬಳಸಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು. ಭಾನುವಾರ ಸಂಜೆ 6 ಗಂಟೆಗೆ ಆರಂಭಗೊಂಡ ಪಾರ್ಟಿ ಭಾನುವಾರ ಮುಂಜಾನೆ 4 ಗಂಟೆವರೆಗೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ತೆಲಗು ನಟ ಶ್ರೀಕಾಂತ್‌ ಸ್ಪಷ್ಟನೆ: ಬೆಂಗಳೂರು ಪೊಲೀಸರು ದಾಳಿ ನಡೆಸಿದ ರೇವ್‌ ಪಾರ್ಟಿಯಲ್ಲಿ ನಾನು ಇದ್ದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಅದನ್ನು ಸ್ಪಷ್ಟ ಪಡಿಸುತ್ತೇನೆ. ನಾನು ನನ್ನ ಮನೆಯ ಎದುರೇ ನಿಂತಿದ್ದೇನೆ. ಜನರು ಇದನ್ನು ಪರಿಶೀಲಿಸಬಹುದು. ಬೆಂಗಳೂರು ಪೊಲೀಸರು ದಾಳಿ ನಡೆಸಿದ ರೇವ್‌ ಪಾರ್ಟಿಯಲ್ಲಿ ನನ್ನ ಹೆಸರು ಕೇಳಿಬಂದಿದ್ದು, ಅದನ್ನು ಕಂಡು ನನಗೆ ಅಚ್ಚರಿಯಾಯಿತು ಎಂದು ತೆಲಗು ನಟ ಶ್ರೀಕಾಂತ್‌ ತಿಳಿಸಿದ್ದಾರೆ.

ಪ್ರತಿಯೊಬ್ಬರ ರಕ್ತದ ಮಾದರಿ ಸಂಗ್ರಹ: ಪೊಲೀಸರ ದಾಳಿ ವೇಳೆ ಪಾರ್ಟಿಯಲ್ಲಿ ಮಾದಕವಸ್ತು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಫಾರ್ಮ್ ಹೌಸ್‌ಗೆ ಶ್ವಾನದಳ ದಿಂದ ತಪಾಸಣೆ ನಡೆಸಿದಾಗ ಇನ್ನಷ್ಟು ಮಾದಕವಸ್ತು ಪತ್ತೆಯಾಗಿದೆ. ದಾಳಿ ನಡೆಸಿದಾಗ ಕೆಲವರು ಫಾರ್ಮ್ ಹೌಸ್‌ನಿಂದ ಹೊರಗೆ ಬರಲು ಪ್ರಯತ್ನಿಸಿದಾಗ ಪೊಲೀಸರು ಗೇಟ್‌ ಮುಚ್ಚಿಸಿ ಎಲ್ಲರೂ ಅಲ್ಲೇ ಇರುವಂತೆ ನೋಡಿಕೊಂಡಿದ್ದಾರೆ. ವೈದ್ಯರನ್ನು ಪಾರ್ಟಿ ಸ್ಥಳಕ್ಕೆ ಕರೆಸಿಕೊಂಡು ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರ ರಕ್ತದ ಮಾದರಿ ಸಂಗ್ರಹಿಸಿದ್ದಾರೆ.

ಮಾದಕವಸ್ತು ಸೇವಿಸಿದರೂ ಕೇಸ್‌: ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರ ರಕ್ತದ ಮಾದರಿ ಸಂಗ್ರಹಿಸಿದ್ದು, ಅದರಲ್ಲಿ ಮಾದಕವಸ್ತು ಸೇವಿಸಿರುವುದು ದೃಢವಾದರೆ, ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ಹೇಳಿದರು.

ನಟ ಹರ್ಷ ಪ್ರತ್ಯಕ್ಷ ಜಿ.ಆರ್‌.ಫಾರ್ಮ್ ಹೌಸ್‌ ಬಳಿ ಸೋಮವಾರ ಬೆಳಗ್ಗೆ ಸ್ಯಾಂಡಲ್‌ವುಡ್‌ ನಟ ಹರ್ಷ ಬಂದಿದ್ದರು. ಸುದ್ದಿಗಾರರು ಪ್ರಶ್ನಿಸಿದಾಗ, ನನಗೂ ಈ ಪಾರ್ಟಿಗೂ ಸಂಬಂಧವಿಲ್ಲ. ಪೊಲೀಸ್‌ ಅಧಿಕಾರಿಯೊಬ್ಬರನ್ನು ನೋಡಲು ಬಂದಿದ್ದೇನೆ ಎಂದು ಸ್ಥಳದಿಂದ ತೆರಳಿದರು.

ಜಿ.ಆರ್‌.ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ದಾಳಿ ನಡೆಸಲಾಗಿದ್ದು, ಅಲ್ಲಿ ಮಾದಕವಸ್ತುಗಳು ಪತ್ತೆಯಾಗಿವೆ. ಈ ಪಾರ್ಟಿಯಲ್ಲಿ 100ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು, ಎಲ್ಲರ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ●ಚಂದ್ರಗುಪ್ತ, ಸಿಸಿಬಿ ಅಧಿಕಾರಿ

ರೇವ್‌ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗಿ? ಸಿಸಿಬಿ ಪೊಲೀಸರು ಫಾರ್ಮ್ ಹೌಸ್‌ ಮೇಲೆ ದಾಳಿ ಮಾಡಿದ ವೇಳೆ ತೆಲುಗು ಸಿನಿಮಾ ನಟಿ ಹೇಮಾ ಭಾಗಿಯಾಗಿದ್ದರು ಎನ್ನಲಾಗಿದೆ. ಅಲ್ಲದೆ, ಪೊಲೀಸರನ್ನು ಕಂಡು ಆಕೆ, ತನ್ನ ಹೆಸರನ್ನು ಬಹಿರಂಗಪಡಿಸದಂತೆ ಪೊಲೀಸರಿಗೆ ಮನವಿ ಮಾಡಿದ್ದರು ಎಂದು ಹೇಳಲಾಗಿದೆ. ಈ ಮಧ್ಯೆ ನಟಿ ಹೇಮಾ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, “ನಾನು ಯಾವುದೇ ಪಾರ್ಟಿಗೆ ಹೋಗಿಲ್ಲ. ನಾನು ಹೈದರಾಬಾದ್‌ನ ನನ್ನ ಫಾರ್ಮ್ ಹೌಸ್‌ನಲ್ಲಿ ಇದ್ದೇನೆ’ ಎಂದು ತಿಳಿಸಿದ್ದಾರೆ. ಆದರೆ, ದಾಳಿ ನಡೆಸಿದಾಗ ಹೇಮಾ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ, ಅದೇ ಫಾರ್ಮ್ ಹೌಸ್‌ನಿಂದ ಈ ವಿಡಿಯೊ ಮಾಡಿ ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

20ಕ್ಕೂ ಅಧಿಕ ಐಷಾರಾಮಿ ಕಾರುಗಳು ಪತ್ತೆ ಫಾರ್ಮ್ ಹೌಸ್‌ ಬಳಿ ಆಡಿ, ಬೆನ್ಜ್, ಬಿಎಂಡ‌ಬ್ಲ್ಯೂ, ವೋಲ್ವೊ ಸೇರಿ 20ಕ್ಕೂ ಅಧಿಕ ಐಷಾರಾಮಿ ಕಾರು ಗಳು ಪತ್ತೆಯಾಗಿವೆ. ಈ ಪಾರ್ಟಿಯ ಆಯೋಜ ಕರು ಆಂಧ್ರಪ್ರದೇಶದಿಂದ ವಿಶೇಷ ವಿಮಾನದಲ್ಲಿ ಸೆಲೆಬ್ರಿಟಿ ಗಳನ್ನು ನಗರಕ್ಕೆ ಕರೆಸಿಕೊಂಡು ಬಳಿಕ ಐಷಾರಾಮಿ ಕಾರುಗಳಲ್ಲಿ ಪಾರ್ಟಿ ಸ್ಥಳಕ್ಕೆ ಕರೆತಂದಿದ್ದರು.

ಕಾರಿನಲ್ಲಿ ಕರ್ನಾಟಕ ಎಂಎಲ್‌ಸಿ ಪಾಸ್‌ ಪತ್ತೆ ದಾಳಿ ಸಂದರ್ಭದಲ್ಲಿ ಕಾರೊಂದರಲ್ಲಿ ರಾಜ್ಯ ವಿಧಾನ ಪರಿಷತ್‌ನ ಶಾಸಕರಿಗೆ ನೀಡುವ ಪಾಸ್‌ ಪತ್ತೆಯಾಗಿದೆ. ಆದರೆ, ಆ ಕಾರು ಯಾವ ಶಾಸಕರಿಗೆ ಸೇರಿದ್ದು ಎಂಬುದು ತಿಳಿದು ಬಂದಿಲ್ಲ. ಅಲ್ಲದೆ, ಆ ಪಾಸ್‌ನಲ್ಲಿ ಯಾವ ಶಾಸಕರ ಹೆಸರು ನೊಂದಾಯಿ ಸಿಲ್ಲ. ಕಾರು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಂಧ್ರ ಶಾಸಕರ ಅವಧಿ ಮೀರಿದ ಪಾಸ್‌ ಪತ್ತೆ ದಾಳಿ ಸಂದರ್ಭದಲ್ಲಿ ಪಾರ್ಟಿ ಸ್ಥಳದಲ್ಲಿ ಪತ್ತೆಯಾದ ಕಾರುಗಳ ಪೈಕಿ ಒಂದು ಕಾರಿನಲ್ಲಿ ಆಂಧ್ರಪ್ರದೇಶ ಶಾಸಕರೊಬ್ಬರ ಪಾಸ್‌ ಪತ್ತೆಯಾಗಿದ್ದು, 2023ರ ಡಿಸೆಂಬರ್‌ಗೆ ಅವಧಿ ಮುಕ್ತಾಯಗೊಂಡಿದೆ. ಅಂದರೆ, ಈ ಪಾರ್ಟಿಯಲ್ಲಿ ರಾಜಕಾರಣಿಗಳು ಹಾಗೂ ಅವರ ಸಂಬಂಧಿಕರು ಅಥವಾ ಸ್ನೇಹಿತರು ಭಾಗಿಯಾಗಿರುವ ಸಾಧ್ಯತೆಯಿದೆ. ಈ ಕಾರು ಸೇರಿ ಎಲ್ಲಾ ಕಾರುಗಳನ್ನು ರಾತ್ರಿ 8 ಗಂಟೆವರೆಗೆ ಪರಿಶೀಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next