Advertisement

ರತ್ನಪ್ರಭಾ ಮುಂದುವರಿಕೆ ಹಿಂದಿನ ಗುಟ್ಟೇನು?

06:00 AM Jun 22, 2018 | |

ಬೆಂಗಳೂರು: ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರ ಅಧಿಕಾರ ಅವಧಿ ವಿಸ್ತರಣೆ ಮಾಡಿರುವ ಬಗ್ಗೆ ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Advertisement

ಈಗಾಗಲೇ ನಿವೃತ್ತಿಯಾಗಿ ಒಂದು ಬಾರಿ ಮೂರು ತಿಂಗಳಿಗೆ ಅವಧಿ ವಿಸ್ತರಣೆಯಾಗಿರುವ ರತ್ನಪ್ರಭಾರ ಸೇವಾವಧಿ ಜೂ.30 ಕ್ಕೆ ಮುಕ್ತಾಯವಾಗಲಿದೆ.

ಈ ನಡುವೆ ಅವರ ಸೇವಾವಧಿಯನ್ನು ಮತ್ತೆ ಮೂರು ತಿಂಗಳು ಮುಂದುವರಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಸೆ.30ರವರೆಗೂ ಅವಧಿ ವಿಸ್ತರಣೆಯಾಗಲಿದೆ.

ರತ್ನಪ್ರಭಾ ಅವರ ಮುಂದುವರಿಕೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ಕಾರಣ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ವಿಜಯ ಭಾಸ್ಕರ್‌ ಅಥವಾ ಡಿ.ವಿ. ಪ್ರಸಾದ್‌ರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲು ಲೆಕ್ಕಾಚಾರ ಹಾಕಿದ್ದರು ಎಂದು ತಿಳಿದುಬಂದಿದೆ.

ಹೀಗಾಗಿಯೇ ಮೊದಲಿಗೆ ರತ್ಮಪ್ರಭಾ ಅವರು, ಮತ್ತೆ ಮೂರು ತಿಂಗಳು ಅವಧಿ ವಿಸ್ತರಣೆಗೆ ದಲಿತ ಕಾರ್ಡ್‌ ಬಳಸಿ ಪ್ರಯತ್ನ ಪಟ್ಟಿದ್ದರೂ ಸರ್ಕಾರ ಒಪ್ಪಿರಲಿಲ್ಲ. ದೇವೇಗೌಡರ ಸೂಚನೆ ಹಿನ್ನೆಲೆಯಲ್ಲಿ ಮತ್ತೆ 3 ತಿಂಗಳ ಅವಧಿಗೆ ಸೇವಾವಧಿ ವಿಸ್ತರಣೆ ಮಾಡಲಾಗಿದೆ ಎನ್ನಲಾಗಿದೆ.

Advertisement

ಕ್ರೆಡಿಟ್‌ಗೆ ಪೈಪೋಟಿ: ರತ್ನಪ್ರಭಾ ಅವರನ್ನು ಮುಂದುವರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದ ಬೆನ್ನಲ್ಲೇ ಅವರನ್ನು ಮುಂದುವರಿಸುವ ತೀರ್ಮಾನ ತಮ್ಮಿಂದಲೇ ಆಯಿತು ಎಂಬ ಕ್ರೆಡಿಟ್‌ ಪಡೆಯಲು ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್‌ ಪ್ರತ್ಯೇಕವಾಗಿ ಪ್ರಯತ್ನ ನಡೆಸಿದ್ದಾರೆ ಎಂಬ ಮಾತು ವಿಧಾನಸೌಧದ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ತಾನು ದಲಿತ ಪರವಾಗಿದ್ದೇನೆ ಎನ್ನುವುದನ್ನು ಬಿಂಬಿಸಲು ಕುಮಾರಸ್ವಾಮಿ ಪ್ರಯತ್ನಿಸಿದರೆ,ರತ್ನಪ್ರಭಾ ಅವರನ್ನು ಮುಂದುವರಿಸಲು ನಾನೇ ಕಾರಣ ಎಂದು ಪರಮೇಶ್ವರ್‌ ತಮ್ಮ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಜೆಟ್‌ ಕಾರಣ ಸದ್ಯ ಸಮ್ಮಿಶ್ರ ಸರ್ಕಾರ ರಚನೆಯಾಗಿ ತಿಂಗಳು ಕಳೆದರೂ, ಇನ್ನೂ ಸರ್ಕಾರ ಅಧಿಕೃತವಾಗಿ
ಕಾರ್ಯಾರಂಭ ಮಾಡಿಲ್ಲ ಎನ್ನುವ ಭಾವನೆ ಸಾರ್ವಜ ನಿಕರಲ್ಲಿದೆ. ನೂತನ ಸಚಿವರು ಅಧಿಕಾರ ವಹಿಸಿಕೊಂಡು 15 ದಿನವಾಗುತ್ತ ಬಂದರೂ,ಇನ್ನೂ ಸರಿಯಾಗಿ ಇಲಾಖೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಈ ನಡುವೆ ರಾಜ್ಯ ಸರ್ಕಾರ ಹೊಸ ಬಜೆಟ್‌ ಮಂಡನೆಗೆ ಮುಂದಾಗಿರುವುದು, ಸಾಲ ಮನ್ನಾದಂತಹ ಮಹತ್ವದ ಯೋಜನೆ ಜಾರಿಗೆ ಪ್ರಯತ್ನ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಹೊಸ ಮುಖ್ಯ ಕಾರ್ಯದರ್ಶಿ ನೇಮಕವಾದರೆ, ಕೆಳಗಿನ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊ ಳ್ಳಲು ಸಮಯ ಬೇಕಾಗುತ್ತದೆ. ಅದು ಆಡಳಿತದ ಮೇಲೆ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ದೇವೇಗೌಡರು ಹಾಲಿ ಮುಖ್ಯ ಕಾರ್ಯದರ್ಶಿಯನ್ನೇ ಮುಂದುವರಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ ರತ್ನಪ್ರಭಾ ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಆ ಸಮುದಾಯಕ್ಕೆ ಜೆಡಿಎಸ್‌ ಸರ್ಕಾರ ಆದ್ಯತೆ ನೀಡಿದೆ ಎಂಬ ಸಂದೇಶ ರವಾನೆ ಮಾಡುವುದೂ ಕೂಡ ದೇವೇಗೌಡರ ತೀರ್ಮಾನದ ಹಿಂದಿನ ಲೆಕ್ಕಾಚಾರ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next