ಮಹಾನಗರ: ನಗರದಲ್ಲಿ ನೀರು ರೇಷನಿಂಗ್ ಶುರುವಾಗಿರುವ ಹಿನ್ನೆಲೆಯಲ್ಲಿ ಎರಡು ದಿನ ಸ್ಥಗಿತಗೊಂಡಿದ್ದ ನೀರು ಪೂರೈಕೆಯು ಶುಕ್ರವಾರ ಬೆಳಗ್ಗೆ 6ರಿಂದ ಆರಂಭಗೊಂಡಿದ್ದು, ಶನಿವಾರವೂ ಮುಂದುವರಿದಿದೆ. ಆದರೆ, ನಗರದ ಕೆಲವು ಭಾಗಗಳಿಗೆ ನೀರು ಪೂರೈಕೆಯಲ್ಲಿ ಸಮಸ್ಯೆ ಸೃಷ್ಟಿಯಾಗಿರುವುದರಿಂದ ಜನರು ಮತ್ತೆ ನೀರಿನ ಸಮಸ್ಯೆ ಎದುರಿಸುವಂತಾಗಿದೆ.
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆ ಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಈ ಮೊದಲು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ನೀರು ರೇಷನಿಂಗ್ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಲಾಗಿದೆ.
ಈ ನಿಟ್ಟಿನಲ್ಲಿ ವೇಳಾಪಟ್ಟಿ ತಯಾರಿಸಿ ನೀರು ಸರಬರಾಜು ಮಾಡಲಾಗಿತ್ತು. ಇದರಂತೆ ಬುಧವಾರ ಬೆಳಗ್ಗೆ 6ರಿಂದ ಶುಕ್ರವಾರ ಬೆಳಗ್ಗೆ 6ರ ವರೆಗೆ ನೀರು ಸ್ಥಗಿತಗೊಳಿಸಲಾಗಿತ್ತು. ಬಳಿಕ ನೀರು ಪೂರೈಕೆ ಆರಂಭಗೊಂಡಿದೆ.
ಮೇ 3ರ ಬೆಳಗ್ಗೆ 6 ಗಂಟೆಯಿಂದ ಮೇ 7ರ ಬೆಳಗ್ಗೆ 6 ಗಂಟೆವರೆಗಿನ 96 ಗಂಟೆ ನೀರು ಸರಬರಾಜು ನಡೆಯಲಿದೆ. ಮೇ 7ರ ಬೆಳಗ್ಗೆ 6ರಿಂದ ಮೇ 9ರ ಬೆಳಗ್ಗೆ 6ರ ತನಕ 48 ಗಂಟೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಮೇ 9ರ ಬೆಳಗ್ಗೆ 6ರಿಂದ ಮೇ 13ರ ಬೆಳಗ್ಗೆ 6ರ ತನಕ 96 ಗಂಟೆ ಕಾಲ ನೀರು ಪೂರೈಕೆ ನಡೆಯಲಿದೆ. ಮೇ 13ರ ಬೆಳಗ್ಗೆ 6ರಿಂದ ಮೇ 15ರ ಬೆಳಗ್ಗೆ 6ರ ತನಕ 48 ಗಂಟೆ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಮೇ 15ರ ಬೆಳಗ್ಗೆ 6ರಿಂದ ಮೇ 19ರ ಬೆಳಗ್ಗೆ 6ರಿಂದ 96 ಗಂಟೆ ನೀರು ಪೂರೈಕೆಯಾಗಲಿದೆ. ಮೇ 19ರ ಬೆಳಗ್ಗೆ 6ರಿಂದ ಮೇ 21ರ ಬೆಳಗ್ಗೆ 6ರ ವರೆಗೆ ನೀರು ಪೂರೈಕೆ ಮತ್ತೆ ಸ್ಥಗಿತಗೊಳ್ಳಲಿದೆ.
ತುಂಬೆ ವೆಂಟೆಡ್ ಡ್ಯಾಂನ ನೀರಿನ ಮಟ್ಟ ಶುಕ್ರವಾರ ಬೆಳಗ್ಗೆ 4.54 ಮೀಟರ್ ಇದ್ದು, ಸಂಜೆ 4 ಗಂಟೆಯ ವೇಳೆಗೆ 4.51 ಮೀಟರ್‌ಗೆ ಇಳಿದಿತ್ತು.
ನೀರು ಬಾರದೆ ಸಂಕಷ್ಟ
ಶುಕ್ರವಾರದಿಂದ ನೀರು ಪೂರೈಕೆ ಆರಂಭಗೊಂಡಿದ್ದರೂ ನಗರದ ಕೆಲವು ಎತ್ತರ ಪ್ರದೇಶಗಳಿಗೆ ನೀರು ಪೂರೈಕೆ ಯಾಗದೆ ಸಮಸ್ಯೆ ಎದುರಾಗಿದೆ. ನೀರು ರೇಷನಿಂಗ್ ಆರಂಭವಾಗುವ ಮುನ್ನವೇ ನೀರಿನ ಸಮಸ್ಯೆ ಎದುರಿಸುತ್ತಿದ್ದ ಕೆಲವು ಭಾಗಗಳ ಜನರು ಇದೀಗ ಮತ್ತೆ ಕಷ್ಟ ಅನುಭವಿಸುವಂತಾಗಿದೆ. ರೇಷನಿಂಗ್ ವ್ಯವಸ್ಥೆ ಶುರುವಾಗುತ್ತಿದ್ದಂತೆ ಬಹಳಷ್ಟು ಕಡೆಗಳಲ್ಲಿ ನೀರಿನ ಸಮಸ್ಯೆ ಜಾಸ್ತಿಯಾಗುತ್ತಿದೆ.