Advertisement
ಬುದ್ಧಿ, ತಿಳಿವಳಿಕೆ, ಜ್ಞಾನ, ಪ್ರಜ್ಞೆ, ವೈಚಾರಿಕತೆಗಳು ಮಾನವನಲ್ಲಿರಬೇಕಾದ ಪ್ರಧಾನ ಅಂಶಗಳು.
Related Articles
Advertisement
ವೈಚಾರಿಕತೆ, ಬೌದ್ಧಿಕತೆ, ವಿಚಾರ ವಾದಗಳಿಗೆ ಮೌಲ್ಯ ಬರುವುದು ಅದು ಜೀವನ ಮೌಲ್ಯಗಳಿಂದ ಸಮೃದ್ಧವಾದಾಗ. ಜೀವನ ಮೌಲ್ಯವೆಂದರೆ ಸತ್ಯ, ಅಹಿಂಸೆ, ಶೀಲ, ಸಂಯಮ, ದಯೆ, ಕ್ಷಮೆ, ತನ್ನಂತೆ ಪರರ ಬಗೆಯುವ ರೀತಿ, ಬೌದ್ಧಿಕ ಪ್ರಾಮಾಣಿಕತೆ..ಮತ್ತಿತರ ಮಾನವೀಯ ಗುಣಗಳು. ವೈಚಾರಿಕತೆ ಸಮಾಜವನ್ನು ತಿದ್ದುವ ಮುಖ್ಯವಾದ ಅಸ್ತ್ರವಾಗಿದೆ. ಈ ವೈಚಾರಿಕತೆ ಒಬ್ಬ ವ್ಯಕ್ತಿಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಇಲ್ಲವೇ ಅವನ ವೈಯಕ್ತಿಕ ಬದುಕಿನ ಚಿಂತನೆಗೆ ಎಡೆಮಾಡಿಕೊಡುತ್ತದೆ.
ವೈಚಾರಿಕತೆ ಎಂದರೆ ಪರಂಪರೆಯಿಂದ ಬಂದ ದ್ದನ್ನೆಲ್ಲ ಕಿತ್ತೂಗೆಯಬೇಕು ಎಂದು ಅರ್ಥವಲ್ಲ. ನಮ್ಮ ಅನುಸರಣೆಗಳಲ್ಲಿ ವೈಜ್ಞಾನಿಕ ಸತ್ಯವಿದೆಯೇ ಎಂದು ವಿಮರ್ಶಿಸಿ ನಿರ್ಧರಿಸಬೇಕೆಂದು ಮಾತ್ರ ಇದರ ಅರ್ಥ. ಇದೇ ಸಂದಿಗ್ಧ ಪಾಶ್ಚಾತ್ಯ ದೇಶಗಳಿಗೆ ಪುನರುಜ್ಜೀವನ ಕಾಲಮಾನದಲ್ಲಿ ಉಂಟಾಗಿದ್ದುದನ್ನು ನಾವು ಸ್ಮರಿಸಬಹುದು. ವೈಚಾರಿಕರು ತಾವು ಪ್ರತಿಪಾದಿಸುವ ತಣ್ತೀಗಳನ್ನು ಮತ್ತು ಸತ್ಯಗಳನ್ನು ತನ್ನ ಪರಿಸರದ ಜನರಿಗೆ ತಿಳಿಹೇಳಲು ಬಹಳಷ್ಟು ಸಂಕಷ್ಟಗಳನ್ನು ಎದುರಿಸಿದರು. ಅಂತಹ ಕೆಲವು ಚಿಂತಕರು ಸಂಕಷ್ಟಗಳನ್ನು ಎದುರಿಸಿದ್ದು ಚರಿತ್ರೆಯಿಂದ ತಿಳಿದು ಬರುತ್ತದೆ.
ಪುರಾತನ ಸಂಸ್ಕೃತಿಯನ್ನು ಹೊಂದಿರುವ ದೇಶ ಭಾರತ. ಮಧ್ಯಮ ಯುಗದ ಚಿಂತನೆ ಮತ್ತು ಧಾರ್ಮಿಕ ಚಿಂತನೆಗಳು ಇಲ್ಲಿನ ಜನಜೀವನದ ಮೇಲೆ ಹೆಚ್ಚು ಪ್ರಭಾವ ಬೀರಿದುವು. ಅವುಗಳಲ್ಲಿ ಕೆಲವು ವೈಜ್ಞಾನಿಕ ತಳಹದಿಯನ್ನು ಹೊಂದಿದ್ದರೂ ಇನ್ನುಳಿದವು ಆ ಕಾಲದ ಊಹಾಪೋಹಗಳಿಂದ ಸೇರಿಕೊಂಡವು. ಅವುಗಳೆಲ್ಲವನ್ನು ವೈಚಾರಿಕತೆಗೆ ಒಳಪಡಿಸುವ ಕೆಲಸ ಈ ತಲೆಮಾರಿನಲ್ಲಿ ಆಗುತ್ತಿರುವುದು ಪ್ರಗತಿಪರ ಚಿಂತನೆಯೇ ಆಗಿದೆ. ಪುರಾತನ ಪರಂಪರೆಯಿಂದ ಮಾತ್ರಕ್ಕೆ ಅನುಸರಿಸಬೇಕೇ ಎಂದು ಜನರು ಪ್ರಶ್ನಿಸತೊಡಗಿರುವುದು ಇದಕ್ಕೆ ನಿದರ್ಶನ.
ವೈಜ್ಞಾನಿಕ ತಳಹದಿ ಇಲ್ಲದ ಮೂಢ ನಂಬಿಕೆಗಳು ಪ್ರಗತಿಗೆ ಅಡಚಣೆಗಳಾಗಿವೆ. ಯಾವುದೋ ಕಾಲ ಘಟ್ಟದಲ್ಲಿ ಸಕಾರಣವಿಲ್ಲದೆ ಪ್ರಾರಂಭವಾದ ಇಂತಹ ಆಚರಣೆಗಳಿಂದ ಹೊರಬರುವುದು ಇಂದಿನ ಅಗತ್ಯ ವಾಗಿದೆ. ಅವು ನಮ್ಮ ದೈನಂದಿಕ ಬದುಕನ್ನು ಭಾದಿಸು ತ್ತವೆ. ಮಾನಸಿಕ ಕಿರಿಕಿರಿಗಳನ್ನು ಉಂಟು ಮಾಡುತ್ತವೆ.
ನಮ್ಮ ವಿವೇಚನೆಗೆ ನಿಲುಕುವ ನಮ್ಮ ದೈನಂದಿಕ ಬದುಕನ್ನು ಭಾದಿಸುವ ಮೇಲ್ನೋಟಕ್ಕೆ ವೈಜ್ಞಾನಿಕ ತಳಹದಿ ಇಲ್ಲದ ಆಚರಣೆಗಳಿಂದ ದೂರ ವಿರೋಣ. ಇದನ್ನು ಸಾಮೂಹಿಕ ನೆಲೆಯಲ್ಲಿ ಕಾರ್ಯ ರೂಪಕ್ಕೆ ತರಬೇಕಾದರೆ ಬಹಳಷ್ಟು ಕಾಲಾವ ಕಾಶ ಬೇಕಾಗಬಹುದು. ಆದರೆ ವೈಯಕ್ತಿಕ ನೆಲೆಯಲ್ಲಿ ಅನುಸರಿಸುವುದು ನಮ್ಮ ಕೈಯ್ಯಲ್ಲಿದೆ. ಅದನ್ನು ಕಾರ್ಯಗತಗೊಳಿಸುವ ಮೂಲಕ ನಾವು ಪ್ರಜ್ಞಾ ವಂತರಾಗಿ ಕೆಲಸ ಮಾಡಲು ಸಾಧ್ಯ.
-ಡಾ| ಕೊಳ್ಚಪ್ಪೆ ಗೋವಿಂದ ಭಟ್ ಮುಂಬಯಿ