Advertisement

ತಾಂಡಾ, ಹಾಡಿಗಳಲ್ಲೇ ನ್ಯಾಯಬೆಲೆ ಅಂಗಡಿ

11:35 AM Oct 04, 2021 | Team Udayavani |

ಬೆಂಗಳೂರು: ರಾಜ್ಯದ ಲಂಬಾಣಿ ತಾಂಡಾ, ಹಾಡಿ, ಗೊಲ್ಲರಹಟ್ಟಿ ಹಾಗೂ ಎಸ್‌ಸಿ, ಎಸ್‌ಟಿ ಕಾಲೋನಿಗಳಲ್ಲಿ ವಾಸಿಸುವವರಿಗೆ ಇನ್ನು ಮುಂದೆ ಅವರ ವಾಸಸ್ಥಳಗಳಲ್ಲೇ ಪಡಿತರ ಸಿಗಲಿದೆ. ಹೀಗಾಗಿ, ತಾಂಡಾ, ಹಾಡಿ, ಹಟ್ಟಿ ಹಾಗೂ ಕಾಲೋನಿಗಳ ನಿವಾಸಿಗಳು ತಿಂಗಳ ಪಡಿತರ ಪಡೆಯಲು ಕಿಲೋಮಿಟರ್‌ಗಟ್ಟಲೇ ನಡೆಯಬೇಕಿಲ್ಲ.

Advertisement

ರಾಜ್ಯದಲ್ಲಿರುವ ಎಲ್ಲಾ ಹಾಡಿ, ತಾಂಡಾಗಳು, ಗೊಲ್ಲರಹಟ್ಟಿಗಳು ಹಾಗೂ ಎಸ್‌ಸಿ, ಎಸ್‌ಟಿ ಕಾಲೋನಿಗಳಲ್ಲಿ ವಾಸವಾಗಿರುವ ಪಡಿತರ ಫ‌ಲಾನುಭವಿಗಳಿಗೆ ಅನುಕೂಲವಾಗುವಂತೆ ಆ ಪ್ರದೇಶಗಳಲ್ಲಿ ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಕನಿಷ್ಠ 100 ಪಡಿತರ ಚೀಟಿಗಳಿಗೆ ಸೀಮಿತಗೊಳಿಸಿ ಹಾಡಿ, ತಾಂಡಾ, ಕಾಲೋನಿಗಳಲ್ಲಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಿ, ವರ್ಷಾಂತ್ಯದೊಳಗಾಗಿ ತೆರೆಯಬೇಕೆಂದು ಸರ್ಕಾರ ಡಿ.ಸಿಗಳಿಗೆ ಗಡುವು ನೀಡಿದೆ.

ಇದನ್ನೂ ಓದಿ:- ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 20,799 ಕೋವಿಡ್ ಪ್ರಕರಣ ಪತ್ತೆ, 26,718 ಮಂದಿ ಗುಣಮುಖ

ಪ್ರತ್ಯೇಕ ಏಕೆ?: ಕಾಯ್ದೆ ಪ್ರಕಾರ ಹೊಸ ನ್ಯಾಯಬೆಲೆ ಅಂಗಡಿ ತೆರೆಯಬೇಕಾದರೆ ನಗರ ಪ್ರದೇಶಗಳಲ್ಲಿ ಒಂದು ಅಂಗಡಿಗೆ ಕನಿಷ್ಠ 800 ಹಾಗೂ ಗ್ರಾಮೀಣ ಭಾಗದಲ್ಲಿ ಕನಿಷ್ಠ 500 ಪಡಿತರ ಚೀಟಿಗಳು ಇರಬೇಕು. ಆದರೆ, ಹಾಡಿ, ತಾಂಡಾ, ಹಟ್ಟಿ, ಕಾಲೋನಿಗಳಲ್ಲಿ ಸಾಮಾನ್ಯವಾಗಿ ಜನಸಂಖ್ಯೆ ಕಡಿಮೆ ಇರುತ್ತದೆ.

Advertisement

ಪಡಿತರ  ಚೀಟಿಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರತ್ಯೇಕ ನ್ಯಾಯಬೆಲೆ ಅಂಗಡಿ ತೆರೆಯಲು ಸಾಧ್ಯವಿರಲಿಲ್ಲ. ಹೀಗಾಗಿ, ಅಲ್ಲಿನ ವಾಸಿಗಳು ಕಿಲೋಮಿಟರ್‌ಗಟ್ಟಲೆ ನಡೆದು ಪಕ್ಕದ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಹೋಗಬೇಕಾಗಿತ್ತು. ಬಹುತೇಕ ಕುಟುಂಬಗಳು ಪಡಿತರದಿಂದ ವಂಚಿತರಾಗುತ್ತಿದ್ದವು. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ರಾಜ್ಯದಲ್ಲಿ ಅಂದಾಜು 1,500ಕ್ಕೂ ಹೆಚ್ಚು ತಾಂಡಾಗಳಿವೆ. ಹೆಚ್ಚಿನವರು ಪಡಿತರಕ್ಕಾಗಿ ನೆರೆಯ ಗ್ರಾಮಗಳಿಗೆ ಹೋಗಬೇಕಾಗಿತ್ತು. ಈಗ ಇಲ್ಲೇ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕೆಂಬ ಸರ್ಕಾರದ ನಿರ್ಧಾರದಿಂದ ಹೆಚ್ಚು ಅನುಕೂಲವಾಗಲಿದೆ.”

ಯು. ಚಂದ್ರ ನಾಯ್ಕ, ಕರ್ನಾಟಕ ತಾಂಡಾ

ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next