ವರದಿ: ಹು.ಬಾ. ವಡ್ಡಟ್ಟಿ
ಮುಂಡರಗಿ: ಪಟ್ಟಣ ವ್ಯಾಪ್ತಿಯ ಬ್ಯಾಲವಾಡಗಿ-ಶಿರೋಳ ವಾರ್ಡ್‌ನ ಜನರು ಸರಕಾರದ ಪಡಿತರಕ್ಕಾಗಿ ನಾಲ್ಕು ಕಿಮೀ ದೂರ ಕ್ರಮಿಸಿ ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ.
ಬ್ಯಾಲವಾಡಗಿಯ 300 ಪಡಿತರ ಚೀಟಿದಾರರು, ಉಸ್ತಾದ್ ಪ್ಲಾಟ್ ಮತ್ತು ಕೆಇಬಿಯ ಹಿಂದುಗಡೆ ಇರುವ ಮನೆಗಳ ಪಡಿತರ ಚೀಟಿದಾರರು ಸೇರಿದಂತೆ ಕನಿಷ್ಠ 500 ಪಡಿತರ ಚೀಟಿದಾರರು ಪಡಿತರಕ್ಕಾಗಿ ಹಳೆಯ ಎಪಿಎಂಸಿಗೆ ಹೊಂದಿಕೊಂಡಂತೆ ಇರುವ ಟಿಎಪಿಎಂಸಿ ಸೊಸೈಟಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳಬೇಕಾಗುತ್ತದೆ.
ಬ್ಯಾಲವಾಡಗಿಯ ಹೊಸ ಪಡಿತರ ಚೀಟಿದಾರರು ಎಸ್.ಎಸ್. ಪಾಟೀಲ ನಗರದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳಬೇಕು. ಅಲ್ಲದೇ ಶಿರೋಳ ವಾರ್ಡ್‌ನ 500ರಷ್ಟು ಇರುವ ಪಡಿತರ ಚೀಟಿದಾರರೂ ಕೃಷಿ ಸಹಕಾರ ಸೊಸೈಟಿ ಮತ್ತು ಎಸ್.ಎಸ್. ಪಾಟೀಲ ನಗರದ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪಡೆದುಕೊಳ್ಳಬೇಕಾಗುತ್ತದೆ. ಬ್ಯಾಲವಾಡಗಿ, ಶಿರೋಳ ಗ್ರಾಮಸ್ಥರು ಪಡಿತರ ಪಡೆದುಕೊಳ್ಳಲು ಟಿಎಪಿಎಂಸಿ ಸೊಸೈಟಿ ಆವರಣದಲ್ಲಿರುವ ನ್ಯಾಯಬೆಲೆ ಅಂಗಡಿ ಇಲ್ಲವೇ ಎಸ್.ಎಸ್. ಪಾಟೀಲ ನಗರದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ತರಬೇಕೆಂದರೆ ನಾಲ್ಕು ಕಿಮೀವರೆಗೆ ಕ್ರಮಿಸಿದ ನಂತರವೇ ಪಡಿತರ ಸಿಗುತ್ತದೆ.
ಟಿಎಪಿಎಂಸಿನ ಸೊಸೈಟಿಯ ನ್ಯಾಯಬೆಲೆ ಅಂಗಡಿ ತಲುಪಲು ಎರಡು ಕಿಮೀ ದೂರ, ಎಸ್.ಎಸ್. ಪಾಟೀಲ ನಗರದ ನ್ಯಾಯಬೆಲೆ ಅಂಗಡಿ ತಲುಪಿ ಪಡಿತರ ತರಲು ನಾಲ್ಕು ಕಿಮೀ ಕ್ರಮಿಸುವ ಅನಿವಾರ್ಯತೆ ಇದೆ. ಅಲ್ಲದೇ ವೃದ್ಧರು, ಮಹಿಳೆಯರು, ಹಿರಿಯ ನಾಗರಿಕರು ನಡೆದುಕೊಂಡು ಇಲ್ಲವೇ ಬಸ್ ಹಿಡಿದು ಸೊಸೈಟಿಗೂ ಮತ್ತು ಎಸ್.ಎಸ್. ಪಾಟೀಲರ ನಗರದ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ತರಬೇಕಾಗುತ್ತದೆ.
ಬ್ಯಾಲವಾಡಗಿ, ಶಿರೋಳ ಗ್ರಾಮದಲ್ಲಿಯೇ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಣೆ ಮಾಡಿದರೆ ಪಡಿತರ ಚೀಟಿದಾರರ ಪ್ರಯಾಸ ಪಡುವುದು ತಪ್ಪುತ್ತದೆ. ಜೊತೆಗೆ ಕೆಲ ಪಡಿತರ ಚೀಟಿದಾರರು ನಾಲ್ಕು ಕಿಮೀ ದೂರದಿಂದ ತರುವ ಪಡಿತರವನ್ನು ಮಾರ್ಗ ಮಧ್ಯದಲ್ಲಿಯೇ ಕಿರಾಣಿ ಅಂಗಡಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಿ ಮನೆ ತಲುಪುತ್ತಾರೆ. ಇದರಿಂದ ಕುಟುಂಬಕ್ಕೆ ತಲುಪಬೇಕಾಗಿರುವ ಪಡಿತರ ಕಾಳ ಸಂತೆಕೋರರ ಪಾಲಾಗುತ್ತಿದೆ. ಕೆಲ ಮಧ್ಯವರ್ತಿಗಳು ಓಣಿಯಲ್ಲಿರುವ 10-15 ಪಡಿತರ ಚೀಟಿ ಕೂಡಿಸಿಕೊಂಡು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಆಹಾರ ಇಲಾಖೆ ಅಧಿಕಾರಗಳು ಈ ಕುರಿತು ಗಮನಹರಿಸಬೇಕಾಗಿದೆ.