Advertisement

ಕುಟುಂಬಕ್ಕಿಂತ ಪಡಿತರ ಚೀಟಿ ಹೆಚ್ಚು!

12:52 PM Oct 19, 2019 | Suhan S |

ಬಾಗಲಕೋಟೆ: ಆನೆಗಿಂತ ಅಂಬಾರಿ ಭಾರವೇ ಹೆಚ್ಚು ಎಂಬಂತೆ ಜಿಲ್ಲೆಯ ಒಟ್ಟು ಕುಟುಂಬಕ್ಕಿಂತ ಪಡಿತರ ಚೀಟಿ ಪಡೆದ ಕುಟುಂಬಗಳೇ ಹೆಚ್ಚಿವೆ. ಹೀಗಾಗಿ ಅನರ್ಹ ಬಿಪಿಎಲ್‌ ಪಡಿತರ ಚೀಟಿ ಮರಳಿ ಪಡೆಯುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಾರ್ಯಾಚರಣೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡು ತಿಂಗಳಲ್ಲಿ ಬರೋಬ್ಬರಿ 1,989 ಜನ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಿದ್ದಾರೆ.  ಹೌದು. ಜಿಲ್ಲೆಯ ಒಟ್ಟು ಕುಟುಂಬಗಳ ಸಂಖ್ಯೆಗಿಂತ ಪಡಿತರ ಚೀಟಿದಾರರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಹಲವು ಕಾರಣಗಳಿವೆ ಎನ್ನುತ್ತದೆ ಜಿಲ್ಲಾಡಳಿತ.

Advertisement

3.61 ಲಕ್ಷ ಕುಟುಂಬ: ಜಿಲ್ಲೆಯಲ್ಲಿ ಒಟ್ಟು 3,61,149 ಕುಟುಂಬಗಳಿವೆ. ಆದರೆ, ಒಟ್ಟು ಪಡಿತರ ಚೀಟಿಗಳು 4,17,619 ಇವೆ. 56,470 ಕುಟುಂಬಗಳು ಹೆಚ್ಚುವರಿಯಾಗಿವೆ. ಈ ಕುಟುಂಬಗಳು, ಇಂದಿಗೂ ಅವಿಭಕ್ತ ಕುಟುಂಬಗಳಾಗಿರಬಹುದು. ಇಲ್ಲದೇ ಒಂದು ಮನೆಯಲ್ಲಿ ಬೇರೆ-ಬೇರೆ ರೂಮ್‌ನಲ್ಲಿ ವಾಸವಿರಬಹುದು ಎಂಬುದು ಲೆಕ್ಕಾಚಾರ. ಬಾದಾಮಿ-61,605, ಬಾಗಲಕೋಟೆ-55,836, ಬೀಳಗಿ-30,864, ಹುನಗುಂದ-60,331, ಜಮಖಂಡಿ-90,067 (ರಬಕವಿ-ಬನಹಟ್ಟಿ, ತೇರದಾಳ ಒಳಗೊಂಡು), ಮುಧೋಳ-62,446 ಕುಟುಂಬಗಳಿವೆ. ಅದರಲ್ಲೂ ನಗರ ಪ್ರದೇಶದಲ್ಲಿ ಒಟ್ಟು 1,18,459 ಕುಟಂಬಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ 2,42,690 ಕುಟುಂಬಗಳಿವೆ.

4.18 ಲಕ್ಷ ಪಡಿತರ ಚೀಟಿ: ಜಿಲ್ಲೆಯ ನಗರ ಪ್ರದೇಶದಲ್ಲಿ ಒಟ್ಟು 1,29,759 ಪಡಿತರ ಚೀಟಿ, ಗ್ರಾಮೀಣ ಪ್ರದೇಶದಲ್ಲಿ 2,87,860 ಪಡಿತರ ಚೀಟಿಗಳಿವೆ. ಬಾದಾಮಿ-70,951, ಬಾಗಲಕೋಟೆ-58,349, ಬೀಳಗಿ-35,075, ಹುನಗುಂದ-65,856, ಜಮಖಂಡಿ-1,15,130, ಮುಧೋಳ-72,258 ಪಡಿತರ ಚೀಟಿದಾರ ಕುಟುಂಬಗಳಿವೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 525 ಹಾಗೂ ನಗರ ಪ್ರದೇಶದಲ್ಲಿ 166 ಸೇರಿ ಒಟ್ಟು 691 ಪಡಿತರ ವಿತರಣೆ ಅಂಗಡಿಗಳಿವೆ. ಇನ್ನು ನಗರ ಪ್ರದೇಶದಲ್ಲಿ 8,871 ಹಾಗೂ ಗ್ರಾಮೀಣ ಪ್ರದೇಶದಲ್ಲಿ 28,276 ಸೇರಿ ಒಟ್ಟು 37,147 ಬಿಪಿಎಲ್‌ (ಅಂತ್ಯೋದಯ) ಪಡಿತರ ಚೀಟಿದಾರರಿದ್ದಾರೆ. ಅಲ್ಲದೇ ಬಿಪಿಎಲ್‌ ಕುಟುಂಬಗಳ ಸಂಖ್ಯೆ ಒಟ್ಟು 2,13,408 (ಅಕ್ಷಯ ಸಿಲಿಂಡರ್‌ ಸಹಿತ), 1,36,333 (ಅಕ್ಷಯ ಸಿಲಿಂಡರ್‌ ರಹಿತ) ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿವೆ.

1,989 ಅನರ್ಹರು ಪತ್ತೆ: ಆರ್ಥಿಕವಾಗಿ ಸದೃಢರಾದವರು ಬಿಪಿಎಲ್‌ ಪಡಿತರ ಚೀಟಿದಾರರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುವ ಮೊದಲೇ ಸ್ವಯಂ ಪ್ರೇರಣೆಯಿಂದ ಇಲಾಖೆಗೆ ಹಿಂದಿರುಗಿಸಲು ಇಲಾಖೆ ನೀಡಿದ ಸೂಚನೆಗೆ ಜಿಲ್ಲೆಯಲ್ಲಿ 851 ಕುಟುಂಬದವರು ಸ್ಪಂದಿಸಿ, ತಮ್ಮ ಬಿಪಿಎಲ್‌ ಪಡಿತರ ಚೀಟಿಯನ್ನು ಇಲಾಖೆಗೆ ಹಿಂದಿರುಗಿಸಿದ್ದಾರೆ. ಇಲಾಖೆ ನೀಡಿದ ಸೂಚನೆಯ ಬಳಿಕವೂ ಬಿಪಿಎಲ್‌ ಪಡಿತರ ಚೀಟಿ ಹಿಂದಿರುಗಿಸದೇ ಇರುವವರ ಪತ್ತೆ ಹಚ್ಚುವ ಕಾರ್ಯವನ್ನು ಜಿಲ್ಲಾಡಳಿತ ಮುಂದುವರಿಸಿದ್ದು, ಎರಡು ತಿಂಗಳಲ್ಲಿ ಒಟ್ಟು 1138 ಕುಟುಂಬಗಳನ್ನು ಪತ್ತೆ ಮಾಡಿ, ಅವರ ಬಿಪಿಎಲ್‌ ಪಡಿತರ ಚೀಟಿ ರದ್ದುಪಡಿಸಲಾಗಿದೆ.

851 ಕುಟುಂಬ ಸ್ವಯಂ ಪ್ರೇರಣೆಯಿಂದ ಹಿಂದಿರುಗಿಸಿದ್ದು, 1,138 ಅನರ್ಹ ಬಿಪಿಎಲ್‌ ಕುಟುಂಬಗಳನ್ನು ಇಲಾಖೆ ಪತ್ತೆ ಮಾಡಿದೆ. ಒಟ್ಟು 1,989 ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಅಲ್ಲದೇ ಆರ್ಥಿಕವಾಗಿ ಸದೃಢರಾದವರು, ಕೂಡಲೇ ಬಿಪಿಎಲ್‌ ಚೀಟಿ ಹಿಂದಿರುಗಿಸಲು ಇಲಾಖೆ ಸೂಚನೆ ನೀಡಿದೆ.

Advertisement

ಜಿಲ್ಲೆಯಲ್ಲಿ ಪಡಿತರ ಚೀಟಿಗಳಿಗೂ, ಕುಟುಂಬದ ಸಂಖ್ಯೆಗೂ ವ್ಯತ್ಯಾಸವಿದೆ. ಇದಕ್ಕೆ ಅವಿಭಕ್ತ ಕುಟುಂಬ ಪದ್ಧತಿ ನಮ್ಮಲ್ಲಿ ಜಾರಿಯಲ್ಲಿರುವುದು ಕಾರಣ. ಪ್ರತಿಯೊಂದ ಪಡಿತರ ಚೀಟಿಗೂ ಆಧಾರ್‌ ಲಿಂಕ್‌ ಕಡ್ಡಾಯಗೊಳಿಸಿದ್ದರಿಂದ ಅದು ದುರುಪಯೋಗವಾಗಲು ಅವಕಾಶವಿಲ್ಲ. ಒಂದು ಕುಟುಂಬದಲ್ಲಿ ಎಷ್ಟು ಜನ ಇರುತ್ತಾರೋ ಆ ಆಧಾರದ ಮೇಲೆ ಪಡಿತರ ನೀಡಲಾಗುತ್ತದೆ. ಹೀಗಾಗಿ ಇದು ಕುಟುಂಬಕ್ಕಿಂತ ಹೆಚ್ಚಿನ ಪಡಿತರ ಚೀಟಿ ಇದ್ದರೂ, ಹೊರೆಯಾಗಲು ಸಾಧ್ಯವಿಲ್ಲ. ಅಲ್ಲದೇ ಅನರ್ಹರು ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದರೆ, ಕೂಡಲೇ ಹಿಂದಿರುಗಿಸಲು ಸೂಚಿಸಿದ್ದು, ಸೆಪ್ಟಂಬರ್‌ನಿಂದ ಇಲ್ಲಿಯವರೆಗೆ ಒಟ್ಟು 1,989 ಬಿಪಿಎಲ್‌ ಚೀಟಿ ರದ್ದುಪಡಿಸಲಾಗಿದೆ. – ಶ್ರೀಶೈಲ ಕಂಕಣವಾಡಿ,ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next