Advertisement

Ration Card; ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದುಪಡಿಸಿ: ಸಿಎಂ ನಿರ್ದೇಶನ

12:09 AM Jul 09, 2024 | Team Udayavani |

ಬೆಂಗಳೂರು: ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒಗಳ ಸಭೆಯಲ್ಲಿ ನಕಲಿ ಬಿಪಿಎಲ್‌ ಕಾರ್ಡ್‌ ಹಾವಳಿ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು ಅನರ್ಹರ ಕಾರ್ಡ್‌ ರದ್ದುಪಡಿಸಿ ಅರ್ಹರಿಗೆ ಮಾತ್ರ ಸರಕಾರಿ ಯೋಜನೆಗಳ ಫ‌ಲ ದೊರೆಯುವಂತೆ ಎಚ್ಚರಿಕೆ ವಹಿಸಿ ಎಂದು ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿ ಶೇ. 80 ಜನರು ಬಿಪಿಎಲ್‌ ಕಾರ್ಡುಗಳನ್ನು ಹೊಂದಿದ್ದಾರೆ. ಆದರೆ ತಮಿಳುನಾಡಿನಲ್ಲಿ ಶೇ. 40ರಷ್ಟಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ. 5.67 ಇರಬೇಕು. ಆದರೆ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ನೀಡಿದ್ದೇವೆ. ಇದರ ಅರ್ಥವೇನು ಎಂದು ಪ್ರಶ್ನಿಸಿದರು.

ಜನರನ್ನು ಅನಗತ್ಯ ಅಲೆದಾಡಿಸಬೇಡಿ. ಅವರ ದೂರುಗಳನ್ನು ಆಲಿಸಿ, ಅಗತ್ಯ ಪರಿಹಾರ ಒದಗಿಸಬೇಕು. ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ 3,784 ಅರ್ಜಿಗಳು ಇತ್ಯರ್ಥಪಡಿಸಲು ಬಾಕಿಯಿದ್ದು ಸಕಾಲದ ಅವಧಿಯ ಮಿತಿಯಲ್ಲಿಯೇ ಇವೆ. ಇನ್ನು ಮುಂದೆ 30 ದಿನಗಳ ಒಳಗಾಗಿ ವಿಲೇವಾರಿ ಮಾಡಬೇಕು ಎಂದರು.

ದೇಶದಲ್ಲೇ ಅಧಿಕ ಜನರಿಗೆ ಪಿಂಚಣಿ
ರಾಜ್ಯದಲ್ಲಿ 76 ಲಕ್ಷ ಜನರಿಗೆ ಪಿಂಚಣಿ ನೀಡುತ್ತಿದ್ದು, ದೇಶದಲ್ಲೇ ಅಧಿಕವಾಗಿದೆ. ಕೇಂದ್ರ ಸರಕಾರದ ನಿರ್ದೇಶನದಂತೆ ಎನ್‌ಪಿಸಿಐ ಮ್ಯಾಪಿಂಗ್‌ ಮಾಡುವಲ್ಲಿ 2 ಲಕ್ಷ ಪ್ರಕರಣಗಳು ಬಾಕಿಯಿವೆ. ಇದನ್ನು ಆದ್ಯತೆ ಮೇರೆಗೆ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಎಷ್ಟು ಪಿಂಚಣಿ ಅರ್ಜಿಗಳು ಬಾಕಿಯಿವೆ ಎಂಬುವುದನ್ನು ಆಯಾ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕೂಡಲೇ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು.

Advertisement

ಗ್ರಾಮಗಳಲ್ಲಿ ಸಾವು ಸಂಭವಿಸಿದ ತತ್‌ಕ್ಷಣ ಆಯಾ ಪಿಂಚಣಿ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ 92 ಉಪ ನೋಂದಣಿ ಹಾಗೂ 15  ಜಿಲ್ಲಾ ನೋಂದಣಿ ಕಚೇರಿಗಳು ಖಾಸಗಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವುಗಳಿಗೆ ಸ್ವಂತ ಕಟ್ಟಡ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next