ವಿಧಾನಪರಿಷತ್: ಮೇಲ್ಮನೆಯಲ್ಲಿ ಲಿಂಗಾನುಪಾತ ಪ್ರತಿಧ್ವನಿ ಕಳೆದ ಒಂದೂವರೆ ದಶಕದಲ್ಲಿ ಹೆಣ್ಣು ಭ್ರೂಣ ಲಿಂಗಪತ್ತೆ ಮಾಡಿದ ಆಸ್ಪತ್ರೆ ಅಥವಾ ವೈದ್ಯರ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ ಕೇವಲ 81. ಇದರರ್ಧ ದಷ್ಟು ಪ್ರಕರಣಗಳಿಗೆ “ದಂಡ ಪ್ರಯೋಗ’ ಹಾಗೂ ಶಿಕ್ಷೆ ಶೂನ್ಯ!
ವಿಧಾನ ಪರಿಷತ್ತಿನ ಕಲಾಪದಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯೆ ಡಾ.ತೇಜಸ್ವಿನಿ ಗೌಡ ಕೇಳಿದ ಪ್ರಶ್ನೆಗೆ ಸ್ವತಃ ಸರ್ಕಾರ ನೀಡಿದ ಉತ್ತರ ಇದು. ಈ ವಿಷಯ ಪ್ರಸ್ತಾಪಿಸಿದ ಡಾ.ತೇಜಸ್ವಿನಿ ಗೌಡ, ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹತ್ತಾರು ಕಾರ್ಯಕ್ರಮಗಳು ಜಾರಿಯಾಗಿದ್ದರೂ, ಲಿಂಗಾನುಪಾತದ ಪ್ರಮಾಣ 2011ರ ಜನಗಣತಿ ಪ್ರಕಾರ ಸಾವಿರ ಗಂಡು ಸಂತತಿಗೆ 948 ಹೆಣ್ಣು ಸಂತತಿ ಇದೆ. ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಕಾನೂನು ಬಾಹಿರವಾಗಿ ನಡೆಯುತ್ತಿದೆ. ಆದರೆ ಕಳೆದ 16 ವರ್ಷಗಳಲ್ಲಿ ಈ ಆರೋಪದಡಿ ದಾಖಲಾದ ಪ್ರಕರಣಗಳ ಸಂಖ್ಯೆ ಕೇವಲ 81 ಇದ್ದು, ಅದರಲ್ಲಿ ದಂಡ ವಿಧಿಸಿದ ಪ್ರಕರಣಗಳು 41. ಶಿಕ್ಷೆ ವಿಧಿಸಿದ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಹಾಗಿದ್ದರೆ, ಸಮಸ್ಯೆಯೇ ಇಲ್ಲವೇ ಎಂದು ಕೇಳಿದರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್ ಸದಸ್ಯ ಬೋಜೇಗೌಡ, ಭ್ರೂಣ ಲಿಂಗಪತ್ತೆ ಹಾಗೂಭ್ರೂಣಹತ್ಯೆ ಪ್ರಕರಣದಲ್ಲಿ ಭಾಗಿಯಾದವರಿಗೆ ಕೇವಲ ದಂಡ ವಿಧಿಸಿದಿರೆ ನಿಯಂತ್ರಣ ಪರಿಣಾಮಕಾರಿಯಾಗದು. ಇಂತಹ ಪ್ರಕರಣ ದಲ್ಲಿ ಭಾಗಿಯಾದ ಸ್ಕ್ಯಾನ್ ಸೆಂಟರ್‌ಗಳನ್ನು ಬಂದ್ ಮಾಡಬೇಕು ಅಥವಾ ವೈದ್ಯರ ಮೇಲೆ ನಿಷೇಧ ವಿಧಿಸಬೇಕು ಎಂದರು.
ರಾಜ್ಯದಲ್ಲಿ 4,772 ಸೆಂಟರ್‌ಗಳು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಪ್ರತಿಕ್ರಿಯಿಸಿ, ರಾಜ್ಯದಲ್ಲಿ 239 ಸರ್ಕಾರಿ ಸೇರಿ 4,772 ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಗಳಿವೆ. ಹೆಣ್ಣು ಭ್ರೂಣ ಲಿಂಗಪತ್ತೆ ಮಾಡುವಂತಹ ವೈದ್ಯರು/ ವೈದ್ಯಕೀಯ ಸಿಬ್ಬಂದಿ ಮೇಲೆ ಗುಪ್ತ ಮಾಹಿತಿ ಸಂಗ್ರಹಿಸಿ, ಭ್ರೂಣ ಲಿಂಗಪತ್ತೆ ತಡೆ ಕಾಯ್ದೆ ಅನ್ವಯ ಪ್ರಕರಣಗಳನ್ನು ದಾಖಲಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.