ಮುರಳಿ ಅಭಿನಯದ “ರಥಾವರ’ ಚಿತ್ರ ಬಿಡುಗಡೆಯಾಗಿ ಒಂದೂವರೆ ವರ್ಷಗಳಾಗಿವೆ. ಆ ಚಿತ್ರವನ್ನು ನಿರ್ಮಿಸಿದ್ದ ಧರ್ಮಶ್ರೀ ಮಂಜುನಾಥ್, ಆ ನಂತರ “ವೈರ’ ಎಂಬ ಚಿತ್ರವನ್ನು ಶುರು ಮಾಡಿದ್ದರು. ಈಗ “ವಸುದೈವ ಕುಟುಂಬಕಂ’ ಎಂಬ ಚಿತ್ರವನ್ನು ಅವರು ಶುರು ಮಾಡಿದ್ದಾರೆ. ಆರು ಗೌಡ ಮತ್ತು ಸಂಜನಾ ಪ್ರಕಾಶ್ ಅಭಿನಯಿಸಿರುವ ಈ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ.
“ರಥಾವರ’ ಚಿತ್ರದಲ್ಲಾದ ನೋವು ನೆನಪಿಸಿಕೊಂಡರೆ, ಇನ್ನು ಚಿತ್ರರಂಗದ ಸಹವಾಸವೇ ಬೇಡ ಎಂದುಕೊಂಡಿದ್ದರಂತೆ ಮಂಜುನಥ್. ಕೊನೆಗೆ “ವಸುದೈವ ಕುಟುಂಬಕಂ’ನ ಕಥೆ ಇಷ್ಟವಾಗಿ ಅವರು ಚಿತ್ರ ಮಾಡುವುದಕ್ಕೆ ಮುಂದಾಗಿದ್ದಾರೆ. ಇಷ್ಟಕ್ಕೂ “ರಥಾವರ’ ಚಿತ್ರದ ಸಂದರ್ಭದಲ್ಲಿ ಅಂತಹ ನೋವಿನ ಘಟನೆಯಾದರೂ ಏನಾಯಿತು ಎಂಬ ಪ್ರಶ್ನೆ ಬರುವುದು ಸಹಜ. ಆ ಚಿತ್ರ ಯಶಸ್ವಿಯಾಗಿ 50 ದಿನಗಳ ಪ್ರದರ್ಶನವಾಗುವುದರ ಜೊತೆಗೆ ಕಲೆಕ್ಷನ್ ಸಹ ಜೋರಾಗಿದೆ ಎಂಬ ಮಾತಿತ್ತು.
ಹೀಗಿರುವಾಗ ನೋವಿನ ಕಥೆಯೇನು ಎಂದರೆ, ಮಂಜುನಾಥ್ ಈಗಲೇ ಏನು ಹೇಳುವುದಿಲ್ಲ. “ರಥಾವರ’ ಚಿತ್ರವನ್ನು ಮರುಬಿಡುಗಡೆ ಮಾಡಲಿರುವ ಅವರು, ಆ ಸಂದರ್ಭದಲ್ಲಿ ಎಲ್ಲವನ್ನೂ ಹೇಳಿಕೊಳ್ಳುತ್ತಾರಂತೆ. “ಆ ಸಿನಿಮಾದಲ್ಲಾದ ನೋವನ್ನು ನೆನಪಿಸಿಕೊಂಡರೆ, ಇನ್ನು ಮುಂದೆ ಸಿನಿಮಾ ಮಾಡೋದು ಬೇಡ ಅಂತ ನಿರ್ಧರಿಸಿದ್ದೆ. ಈ ಚಿತ್ರದ ನಿರ್ದೇಶಕರ ಸಿನಿಮಾ ಪ್ರೀತಿ ನೋಡಿ ಚಿತ್ರ ಮಾಡುವುದಕ್ಕೆ ಮುಂದಾದೆ. “ರಥಾವರ’ ಚಿತ್ರದ ಸಂದರ್ಭದಲ್ಲಿ ಏನು ನೋವಾಯ್ತು ಅಂತ ಸದ್ಯಕ್ಕೆ ಬೇಡ.
ಆ ಚಿತ್ರವನ್ನು ಮರುಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದೀನಿ. ಆ ಸಂದರ್ಭದಲ್ಲಿ ಹೇಳುತ್ತೀನಿ. ಆ ಚಿತ್ರ ಗೆದ್ದಿದೆ ಎಂದು ಇಡೀ ತಂಡ ಹೇಳಿತು. ಕಥೆ ಕೇಳಿದಾಗಲೇ ಅದು ತೆಲುಗು, ತಮಿಳಿಗೆ ಚೆನ್ನಾಗಿರುತ್ತದೆ ಎಂದು ಅನಿಸಿತ್ತು. ಕೊನೆಗೆ ಸಿನಿಮಾ ಮಾಡಿದೆ. ನೋಡಿದವರು ಚೆನ್ನಾಗಿದೆ ಎಂದರು. ಜನ ಸಹ ಒಪಿದರು. ಅದರ ಹಿಂದೆ ಬೇರೆಯದೇ ನೋವಿದೆ. ಸಿನಿಮಾ ಬಿಡುಗಡೆಯಾದ ದಿನ, ಸಿನಿಮಾ ನೋಡಿ ನನಗೆ ಹೇಗಾಗಿತ್ತು ಎಂದರೆ, ನನ್ನನ್ನು ಬಿಟ್ಟರೆ ಸಾಕಾಗಿತ್ತು.
ಆದರೆ, ಅದನ್ನೆಲ್ಲಾ ಹೇಳಿಕೊಳ್ಳುವುದು ಕಷ್ಟ. “ರಥಾವರ’ ಮರುಬಿಡುಗಡೆಯಾಗುವಾಗ ಹೇಳುತ್ತೀನಿ’ ಎನ್ನುತ್ತಾರೆ ಧರ್ಮಶ್ರೀ ಮಂಜುನಾಥ್. ಅಲ್ಲಿಗೆ ತಾವೇ ಆ ವಿಷಯವನ್ನು ಪ್ರಸ್ಥಾಪ ಮಾಡಿ, ಆ ಬಗ್ಗೆ ಏನೂ ಹೇಳದೆಯೇ ಸುಮ್ಮನಾಗುತ್ತಾರೆ. ಇಷ್ಟಕ್ಕೂ “ರಥಾವರ’ ನಿರ್ಮಾಪಕರ ನೋವೇನು? ಈ ಪ್ರಶ್ನೆಗೆ ಉತ್ತರಕ್ಕಾಗಿ ಚಿತ್ರ ಮರುಬಿಡುಗಡೆಯಾಗುವವರೆಗೂ ಕಾಯಬೇಕೇನೋ?