Advertisement

ಟ್ರೋಲ್‌ ಬಗ್ಗೆ ರಶ್ಮಿಕಾ ಬೇಸರ;ಇನ್‌ಸ್ಟಾಗ್ರಾಮ್ ನಲ್ಲಿ ಬಹಿರಂಗ ಪತ್ರ ಬರೆದ ಕೊಡಗಿನ ಹುಡುಗಿ

12:02 PM Nov 10, 2022 | Team Udayavani |

ಸಿನಿಮಾಕ್ಕಿಂತ ಹೆಚ್ಚಾಗಿ ಬೇರೆ ಬೇರೆ ವಿಷಯಗಳಿಗೆ ಸುದ್ದಿಯಾಗುವ, ಆಗಾಗ್ಗೆ ಟ್ರೋಲ್‌ಗ‌ಳಿಗೆ ವಿನಾ ಕಾರಣ ಆಹಾರವಾಗುವ ನಟಿಯರ ಪೈಕಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಅದರಲ್ಲೂ ರಶ್ಮಿಕಾ ಪರಭಾಷೆಯಲ್ಲಿ ಬಿಝಿಯಾದ ಮೇಲಂತೂ, ಏನೇ ಮಾಡಿದ್ರೂ ಬೇಕೋ ಬೇಡವೋ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆಗೋದು ಪಕ್ಕಾ ಎನ್ನುವಂತಾಗಿ ಬಿಟ್ಟಿದೆ. ಆದರೆ ತಮ್ಮ ಬಗ್ಗೆ ಆಗುತ್ತಿರುವ ಟ್ರೋಲ್‌ ಬಗ್ಗೆ ಇಲ್ಲಿಯವರೆಗೆ ಎಲ್ಲೂ ಮಾತನಾಡದ ರಶ್ಮಿಕಾ ಮಂದಣ್ಣ, ಇದೇ ಮೊದಲ ಬಾರಿಗೆ ಟ್ರೋಲ್‌ ವಿಚಾರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Advertisement

ಹೌದು, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಬಗ್ಗೆ ಆಗುತ್ತಿರುವ ಟ್ರೋಲ್‌ ಬಗ್ಗೆ ಸುದೀರ್ಘ‌ವಾಗಿ ಬರೆದುಕೊಂಡಿದ್ದಾರೆ. “ಇತ್ತೀಚಿನ ವರ್ಷಗಳಲ್ಲಿ ನನಗೆ ಕೆಲವು ವಿಚಾರಗಳು ಸಾಕಷ್ಟು ತೊಂದರೆ ನೀಡಿವೆ. ಈ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು’ ಎಂದು ಬರಹ ಆರಂಭಿಸಿರುವ ರಶ್ಮಿಕಾ ಮಂದಣ್ಣ, “ನನ್ನ ವೃತ್ತಿ ಜೀವನ ಶುರುವಾದಾಗಿನಿಂದಲೂ ನನ್ನನ್ನು ದ್ವೇಷಿಸಲಾಗುತ್ತಿದೆ. ಟ್ರೋಲ್‌ ಮತ್ತು ನೆಗೆಟಿವಿಟಿಗೆ ನಾನು ಪಂಜಿಂಗ್‌ ಬ್ಯಾಗ್‌ ರೀತಿ ಆಗಿದ್ದೇನೆ. ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಹಾಗಿದೆ. ಎಲ್ಲರೂ ನನ್ನನ್ನು ಪ್ರೀತಿಸಲೇಬೇಕು ಅಂತೇನಿಲ್ಲ. ನನ್ನ ಬಗ್ಗೆ ಸಹಮತವಿಲ್ಲ ಎಂದ ಮಾತ್ರಕ್ಕೆ ನೀವು ನನ್ನ ಬಗ್ಗೆ ನಕಾರಾತ್ಮಕ ವಿಷಯಗಳನ್ನು ಹಬ್ಬಿಸ ಬಹುದು ಅಂತ ಅರ್ಥವಲ್ಲ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

“ಸಂದರ್ಶನಗಳಲ್ಲಿ ನಾನು ಹೇಳಿದ್ದನ್ನು ನನ್ನ ವಿರುದ್ಧವೇ ತಿರುಗಿಸಲಾಗಿದೆ. ನನಗೆ ಮತ್ತು ನನ್ನ ಸಂಬಂಧಗಳಿಗೆ ಹಾನಿ ಆಗುವಂತಹ ತಪ್ಪು ಕಥೆಗಳನ್ನು ಇಂಟರ್‌ನೆಟ್‌ನಲ್ಲಿ ಹರಿಬಿಡಲಾಗುತ್ತಿದೆ. ಉತ್ತಮ ಟೀಕೆಯನ್ನು ನಾನು ಸ್ವಾಗತಿಸುತ್ತೇನೆ. ಅದರಿಂದ ಬೆಳವಣಿಗೆ ಸಾಧ್ಯ. ಆದರೆ ನಕಾರಾತ್ಮಕ ಮತ್ತು ದ್ವೇಷದಿಂದ ಏನು ಮಾಡಲು ಸಾಧ್ಯ’ ಎಂದು ರಶ್ಮಿಕಾ ಟ್ರೋಲಿಗರನ್ನು ಪ್ರಶ್ನಿಸಿದ್ದಾರೆ.

ಇನ್ನು ರಶ್ಮಿಕಾ ಮನದ ಮಾತು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ರಶ್ಮಿಕಾ ಮಾತಿಗೆ ಅಭಿಮಾನಿಗಳು ಮಾತ್ರವಲ್ಲದೆ ಅನೇಕ ತಾರೆಯರು ಕೂಡ ಬೆಂಬಲ ನೀಡುತ್ತಿದ್ದಾರೆ. ಅಂದ ಹಾಗೆ, ಇಷ್ಟೆಲ್ಲ ಆದರೂ, ರಶ್ಮಿಕಾ ಅವರ ಈ ಬಹಿರಂಗ ಪತ್ರ ಕೂಡ ಈಗ ಟ್ರೋಲ್‌ ಆಗುತ್ತಿದ್ದು, ಮೊದಲ ಬಾರಿಗೆ ರಶ್ಮಿಕಾ ತಮ್ಮ ಬಗ್ಗೆ ಮಾತನಾಡುವವರ ಬಗ್ಗೆ ಮಾತನಾಡುವಷ್ಟು ಬಿಡುವಾಗಿದ್ದಾರಲ್ಲ ಎಂದು ಕಾಲೆಳೆಯುತ್ತಿದ್ದಾರೆ.

“ನಿಮ್ಮೆಲ್ಲರನ್ನೂ ಮನರಂಜಿಸಲು ನಾನು ಸತತ ಪರಿಶ್ರಮ ಪಡುತ್ತಿದ್ದೇನೆ. ಆ ಕೆಲಸದ ಬಗ್ಗೆ ನಾನು ಹೆಚ್ಚು ಯೋಚಿಸುತ್ತೇನೆ. ನಾನು ಮತ್ತು ನೀವು ಇಬ್ಬರೂ ಹೆಮ್ಮೆಪಡುವಂತಹ ಕೆಲಸ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ನಾನು ಹೇಳದಿರುವ ವಿಚಾರಕ್ಕೆ ನನ್ನನ್ನು ಟ್ರೋಲ್‌ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ.”- ರಶ್ಮಿಕಾ ಮಂದಣ್ಣ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next