ಬೇಕಾಗುವ ಸಾಮಗ್ರಿಗಳು
ಹಾಲು – ಒಂದೂವರೆ ಲೀ.
ಲಿಂಬೆ: ಒಂದು
ಕೇಸರಿ ಎಳೆ
ಸಕ್ಕರೆ: ಅರ್ಧಕಪ್
ನೀರು: 1 ಕಪ್
ಪಿಸ್ತಾ, ಬಾದಾಮಿ, ಗೋಡಂಬಿ: ಸ್ವಲ್ಪ
ಐಸ್ ಕ್ಯೂಬ್:ಒಂದು ಕಪ್
ಜೋಳದಹಿಟ್ಟು: ಕಾಲು ಕಪ್
ಮಾಡುವ ವಿಧಾನ
ಮೊದಲು ಹಾಲನ್ನು ಚೆನ್ನಾಗಿ ಕುದಿಸಬೇಕು. ಹಾಲು ಕುದಿ ಬರಲು ಆರಂಭಿಸಿದಾಗ ಅದನ್ನು ಸಣ್ಣ ಉರಿ ಯಲ್ಲಿ ಪಾತ್ರೆ ಮುಚ್ಚಿಟ್ಟು 7ರಿಂದ 10 ನಿಮಿಷಗಳ ಕಾಲ ಹಾಲು ಅರ್ಧದಷ್ಟಾ ಗುವವರೆಗೆ ಕುದಿಸಿ. ಅನಂತರ ಸ್ವಲ್ಪ ಕೇಸರಿ ಎಳೆಯನ್ನು ಹಾಕಿ ಮತ್ತೆ ಕಲಸಿ. ನಂತರ ಅದಕ್ಕೆ 6 ಟೀ ಸ್ಪೂನ್ ಸಕ್ಕರೆ ಯನ್ನು ಹಾಕಿ ಕಲುಕಿ. ಮತ್ತೆ ಚೆನ್ನಾಗಿ ಕುದಿಸಿ. ಹಾಲು ಕುದಿಸುವಾಗ ತಳ ಹಿಡಿಯದಂತೆ ನೋಡಿಕೊಳ್ಳಿ. ಸಣ್ಣದಾಗಿ ಕತ್ತರಿಸಿದ ಬಾದಾಮಿ, ಪಿಸ್ತಾವನ್ನು ಕುದಿಯುವ ಹಾಲಿಗೆ ಸೇರಿಸಿಕೊಳ್ಳಿ. ಅದನ್ನು ಚೆನ್ನಾಗಿ ಬೆರೆಸಿ ಪಕ್ಕಕ್ಕಿಡಿ.
ಮುಕ್ಕಾಲು ಲೀಟರ್ ಹಾಲನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ. ಅದನ್ನು 2ರಿಂದ 3ನಿಮಿಷಗಳ ಕಾಲ ಕುದಿಸಿ. ಅನಂತರ ಅದಕ್ಕೆ ನಿಂಬೆ ಹುಳಿ ಹಿಂಡಿ ಚೆನ್ನಾಗಿ ಕಲಸಿ. ಇದರಿಂದ ಹಾಲು ಒಡೆಯುತ್ತದೆ. ಒಡೆದ ಹಾಲಿಗೆ ಐಸ್‌ಕ್ಯೂಬ್‌ಗಳನ್ನು ಹಾಕಿ ಅದು ಕರಗಲು ಬಿಡಿ. ಒಂದು ಬೌಲ್ ತೆಗೆದುಕೊಂಡು ಅದರ ಮೇಲೆ ಬಟ್ಟೆಯನ್ನು ಹಾಕಿ. ಬಟ್ಟೆಯ ಮೇಲೆ ಒಡೆದ ಹಾಲನ್ನು ಹಾಕಿ. ಅದರಲ್ಲಿರುವ ನೀರು ಹೋಗುವಂತೆ ಮಾಡಿ. ನೀರಿನಾಂಶ ಚೆನ್ನಾಗಿ ಹೋಗಲು ಅದನ್ನು ಬಟ್ಟೆಯಲ್ಲಿ ಕಟ್ಟಿ 5 ನಿಮಿಷ ಮೇಲೆ ತೂಗು ಹಾಕಿ. ಅನಂತರ ಉಳಿದ ಹೂರಣವನ್ನು ಒಂದು ಮಿಕ್ಸಿಗೆ ಹಾಕಿ ಅದಕ್ಕೆ ಜೋಳದ ಹಿಟ್ಟನ್ನು ಸೇರಿಸಿ ರುಬ್ಬಿಕೊಳ್ಳಿ. ಅದು ಗಂಟಾಗದಂತೆ ಕೈಯಲ್ಲಿ ಪುಡಿ ಮಾಡಿಕೊಳ್ಳಿ. ಅನಂತರ ಅದನ್ನು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ.
ಒಂದು ಪಾತ್ರೆಯಲ್ಲಿ ನೀರು ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ಒಂದು ಕಪ್ ಸಕ್ಕರೆ ಹಾಕಿ. ಸಕ್ಕರೆ ಕರಗಿ ನೀರು ಚೆನ್ನಾಗಿ ಕುದಿಯುವಾಗ ಅದಕ್ಕೆ ಮೊದಲೇ ಮಾಡಿಟ್ಟ ರಸಗುಲ್ಲವನ್ನು ಹಾಕಿ. ಪಾತ್ರೆಯ ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಬೇಯಲು ಬಿಡಿ. ಅನಂತರ ಸ್ವಲ್ಪ ಗುಲಾಬಿ ನೀರನ್ನು ಸೇರಿಸಿ 10 ನಿಮಿಷಗಳ ಕಾಲ ಆರಲು ಬಿಡಿ.
ಮೊದಲೇ ತಯಾರಿಸಿದ ಮಲಾಯಿ/ ಕುದಿಸಿದ ಹಾಲನ್ನು ಬಿಸಿ ಮಾಡಲು ಇಡಿ. ರಸಗುಲ್ಲವನ್ನು ಬಿಸಿಮಾಡುತ್ತಿರುವ ಹಾಲಿಗೆ ಹಾಕಿ. ದೊಡ್ಡ ಉರಿಯಲ್ಲಿ 2 ರಿಂದ 3 ನಿಮಿಷಗಳ ಕಾಲ ಕುದಿಸಿ. ಅನಂತರ ಅದನ್ನು ಒಂದು ಬೌಲ್‌ಗೆ ಹಾಕಿ. 10 ನಿಮಿಷಗಳ ಕಾಲ ಹಾಗೆಯೇ ಆರಲು ಬಿಡಿ. ಅನಂತರ ಅದನ್ನು 2 ಗಂಟೆಗಳ ಕಾಲ ಫ್ರಿಡ್ಜ್ನಲ್ಲಿಡಿ. ಈಗ ರಸ್‌ಮಲಾಯಿ ತಿನ್ನಲು ರೆಡಿ.
- ರಂಜಿನಿ ಮಿತ್ತಡ್ಕ