ಮಣಿಪಾಲ: ಪರ್ಕಳ ಮಾರುಕಟ್ಟೆ ಸಮೀಪ ಕರಾವಳಿಯಲ್ಲಿ ಅಪರೂಪವಾಗಿ ಕಂಡುಬರುವ ಫ್ಲೈಯಿಂಗ್ ಸ್ನೇಕ್ (ಹಾರುವ ಹಾವು) ಪತ್ತೆಯಾಗಿದೆ. ಇಲ್ಲಿನ ಮರದಿಂದ ತಟ್ಟನೆ ಹಾರಿದ ಹಾವು ಎಲ್ಲರ ಗಮನ ಸೆಳೆದಿದೆ.
ಕಪ್ಪು, ಕೆಂಪು, ಬಿಳಿ ಬಣ್ಣದಿಂದ ಕೂಡಿದ ಈ ಹಾವು ಕಂಡು ಸ್ಥಳೀಯರು ಭಯಭೀತರಾಗಿದ್ದರು. ಉರಗ ತಜ್ಞ ಗುರುರಾಜ್ ಸನಿಲ್ ಅವರು ಹಾವಿನ ಬಗ್ಗೆ ಮಾಹಿತಿ ನೀಡಿ ಇದು ಪಶ್ಚಿಮಘಟ್ಟ ಮಲೆನಾಡು ಭಾಗದಲ್ಲಿ ಹೆಚ್ಚು ಕಂಡುಬರುತ್ತದೆ. ಕರಾವಳಿಯಲ್ಲಿ ತೀರ ಅಪರೂಪವಾಗಿದೆ. ಇದರ ರೂಪ ಕಂಡು ಕೆಲವರು ಭಯದಿಂದ ಇದನ್ನು ಸಾಯಿಸಿದ ಘಟನೆಗಳು ನಡೆದಿದೆ. ಇದು ವಿಷ ರಹಿತ ಹಾವು. ಮರದಲ್ಲೆ ಹುಟ್ಟಿ, ಮರದಲ್ಲೆ ಜೀವಿಸಿ, ಮರದಲ್ಲಿರುವ ಕ್ರಿಮಿ, ಕೀಟ, ಪಕ್ಷಿಗಳ ಮೊಟ್ಟೆಗಳನ್ನು ತಿಂದು ಈ ಹಾವು ಜೀವಿಸುತ್ತದೆ. ಇದಕ್ಕೆ ತುಳು ಭಾಷೆಯಲ್ಲಿ ಪುಲ್ಲಿ ಪುತ್ರ ಎಂದು ಕರೆಯಲಾಗುತ್ತದೆ ಎಂದರು.
ಗುರುರಾಜ್ ಅವರ ಸಲಹೆ ಮೇರೆಗೆ ಸ್ಥಳೀಯರಾದ ಹರೀಶ್ ಮಡಿವಾಳ, ಸದಾಶಿವ ಮಡಿವಾಳ. ಶಿವರಾಂ ಪೂಜಾರಿ, ಜಯಂತ್, ಗಣೇಶ್‌ರಾಜ್ ಸರಳೇಬೆಟ್ಟು ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.