ಬೆಂಗಳೂರು: ಕೋವಿಡ್ ಭೀತಿಯಿಂದ ಸದ್ಯ ದೇಶದಲ್ಲಿ ಎಲ್ಲವೂ ಲಾಕ್ ಡೌನ್ ಆಗಿದೆ. ಈ ಮಧ್ಯೆ ಸರ್ಕಾರದ ಜೊತೆಗೆ ಕೈ ಜೋಡಿಸುತ್ತಿರುವ ಸೆಲೆಬ್ರಿಟಿಗಳು, ತಾರೆಯರು ಹೀಗೆ ಜನಪ್ರಿಯ ವ್ಯಕ್ತಿಗಳು ಕೊರೊನಾ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಮನೆಯಲ್ಲೇ ಇರಿ, ಆರೋಗ್ಯವಾಗಿರಿ ಎಂಬ ಸಂದೇಶವನ್ನು ನೀಡುತ್ತಿದ್ದಾರೆ. ಇದಕ್ಕೆ ತಕ್ಕಂತೆ ಸಂಗೀತಗಾರರು ಹಾಗೂ ಸಾಹಿತಿಗಳು ಸಹ ತಮ್ಮ ವಿಭಿನ್ನ ಶೈಲಿಯಲ್ಲಿ ಹಾಡು ರಚಿಸುವ ಮೂಲಕ ಜನರಿಗೆ ತಿಳಿ ಹೇಳುತ್ತಿದ್ದಾರೆ.
ಇತ್ತೀಚೆಗೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಬರೆದಿದ್ದ ಸಾಹಿತ್ಯಕ್ಕೆ ಎಸ್.ಪಿ ಬಾಲಸುಬ್ರಹ್ಮಣ್ಯ ಧ್ವನಿ ನೀಡುವ ಮೂಲಕ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಆ ನಂತರ ಹಂಸಲೇಖ ಅವರು ಹಾಡೊಂದನ್ನು ರಚಿಸಿ, ಸಂಗೀತ ನೀಡಿದ್ದರು. ಇದೀಗ ಇಂಥದ್ದೇ ಮತ್ತೊಂದು ಪ್ರಯತ್ನಕ್ಕೆ ಕನ್ನಡದ Rapper ಚಂದನ್ ಶೆಟ್ಟಿ ಮುಂದಾಗಿದ್ದಾರೆ.
ತಾವೇ ರಚಿಸಿದ ಹಾಡನ್ನು ಚಂದನ್ ಶೆಟ್ಟಿ ತಮ್ಮದೇ ಶೈಲಿಯಲ್ಲಿ ಸಂಗೀತ ಸಂಯೋಜಿಸಿ ಪತ್ನಿ ನಿವೇದಿತಾ ಗೌಡ ಜೊತೆಗೆ ಸೇರಿಕೊಂಡು ಹಾಡಿದ್ದಾರೆ. ಕೋವಿಡ್, ಕೋವಿಡ್, ಕೋವಿಡ್… ನಿಂಗೆ ಸದ್ಯದಲ್ಲೇ ಮಾಡ್ತೀವಿ ತಿಥಿನಾ ಎಂಬ ಸಾಲುಗಳ ಈ ಗೀತೆಯನ್ನು ಚಂದನ್ ಶೆಟ್ಟಿ ತಮ್ಮ ಇನ್ಸಾಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, Rap ಸಾಂಗ್ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.