Advertisement

ರಣಜಿ ಟ್ರೋಫಿ ಸೆಮಿಫೈನಲ್‌: ತಮೋರೆ ಶತಕ; ಮುಂಬಯಿ ಮೇಲುಗೈ; ಉತ್ತರ ಪ್ರದೇಶ ಕುಸಿತ

10:58 PM Jun 15, 2022 | Team Udayavani |

ಬೆಂಗಳೂರು: ಗಾಯಾಳು ಕೀಪರ್‌ ಆದಿತ್ಯ ತಾರೆ ಬದಲು ಆಡಲು ಅವಕಾಶ ಪಡೆದ ಹಾರ್ದಿಕ್‌ ತಮೋರೆ ಅಮೋಘ ಶತಕವೊಂದನ್ನು ಬಾರಿಸಿ ರಣಜಿ ಸೆಮಿಫೈನಲ್‌ನಲ್ಲಿ ಮುಂಬಯಿ ಮೇಲುಗೈಗೆ ಕಾರಣರಾಗಿದ್ದಾರೆ. ಉತ್ತರ ಪ್ರದೇಶ ವಿರುದ್ಧ ದ್ವಿತೀಯ ದಿನದಾಟದಲ್ಲಿ ಮುಂಬಯಿ 393ಕ್ಕೆ ಆಲೌಟ್‌ ಆಗಿದೆ. ಯುಪಿ ಆರಂಭಿಕ ಕುಸಿತಕ್ಕೆ ಸಿಲುಕಿದ್ದು, 2 ವಿಕೆಟಿಗೆ 25 ರನ್‌ ಮಾಡಿದೆ.

Advertisement

ಮೊದಲ ದಿನದಾಟದಲ್ಲಿ ಮುಂಬಯಿ 5 ವಿಕೆಟಿಗೆ 260 ರನ್‌ ಗಳಿಸಿತ್ತು. ಹಾರ್ದಿಕ್‌ ತಮೋರೆ 51 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಬುಧವಾರ ಇದೇ ಬ್ಯಾಟಿಂಗ್‌ ವೈಭವವನ್ನು ಮುಂದುವರಿಸಿ 115 ರನ್‌ ಬಾರಿಸಿದರು.

ಎದುರಿಸಿದ್ದು 233 ಎಸೆತ. ಈ ಜವಾಬ್ದಾರಿಯುತ ಬ್ಯಾಟಿಂಗ್‌ ವೇಳೆ ಅವರು 12 ಬೌಂಡರಿ ಹಾಗೂ ಮುಂಬಯಿ ಸರದಿಯ ಏಕೈಕ ಸಿಕ್ಸರ್‌ ಸಿಡಿಸಿದರು.

ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹಾರ್ದಿಕ್‌ ತಮೋರೆ ಬಾರಿಸಿದ ದ್ವಿತೀಯ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ. ಅವರು ಕೊನೆಯವರಾಗಿ ಪೆವಿಲಿಯನ್‌ ಸೇರಿಕೊಂಡರು. ಇವರೊಂದಿಗೆ 10 ರನ್‌ ಮಾಡಿ ಆಡುತ್ತಿದ್ದ ಶಮ್ಸ್‌ ಮುಲಾನಿ ಅರ್ಧ ಶತಕದ ಕೊಡುಗೆ ಸಲ್ಲಿಸಿದರು. ಎದುರಿಸಿದ್ದು 130 ಎಸೆತ, ಬಾರಿಸಿದ್ದು 5 ಬೌಂಡರಿ. ಈ ಜೋಡಿಯಿಂದ 6ನೇ ವಿಕೆಟಿಗೆ 153 ರನ್‌ ಹರಿದು ಬಂತು. ಮೊದಲ ದಿನದಾಟದಲ್ಲಿ ಆರಂಭಕಾರ ಯಶಸ್ವಿ ಜೈಸ್ವಾಲ್‌ 100 ರನ್‌ ಬಾರಿಸಿದ್ದರು.

4 ವಿಕೆಟ್‌ ಉರುಳಿಸಿದ ನಾಯಕ ಕರಣ್‌ ಶರ್ಮ ಯುಪಿ ಸರದಿಯ ಯಶಸ್ವಿ ಬೌಲರ್‌ ಎನಿಸಿದರು. ಸೌರಭ್‌ ಕುಮಾರ್‌ 3, ಯಶ್‌ ದಯಾಳ್‌ 2 ವಿಕೆಟ್‌ ಕೆಡವಿದರು.

Advertisement

ಉತ್ತರ ಪ್ರದೇಶ ಕುಸಿತ
ಉತ್ತರ ಪ್ರದೇಶಕ್ಕೆ ಧವಳ್‌ ಕುಲಕರ್ಣಿ ಮತ್ತು ತುಷಾರ್‌ ದೇಶಪಾಂಡೆ ಸೇರಿಕೊಂಡು ಅವಳಿ ಆಘಾತವಿಕ್ಕಿದ್ದಾರೆ. ಆರಂಭಕಾರ ಸಮರ್ಥ್ ಸಿಂಗ್‌ ಖಾತೆ ತೆರೆಯುವ ಮೊದಲೇ ತಮೋರೆಗೆ ಕ್ಯಾಚಿತ್ತು ಕುಲಕರ್ಣಿಗೆ ವಿಕೆಟ್‌ ಒಪ್ಪಿಸಿದರು. ಪ್ರಿಯಂ ಗರ್ಗ್‌ 3 ರನ್‌ ಮಾಡಿ ದೇಶಪಾಂಡೆ ಎಸೆತದಲ್ಲಿ ಬೌಲ್ಡ್‌ ಆದರು. 4 ರನ್‌ ಆಗುವಷ್ಟರಲ್ಲಿ ಈ 2 ವಿಕೆಟ್‌ ಹಾರಿ ಹೋಗಿತ್ತು. ಮಾಧವ್‌ ಕೌಶಿಕ್‌ 11 ಮತ್ತು ಕರಣ್‌ ಶರ್ಮ 10 ರನ್‌ ಮಾಡಿ ಆಡುತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-393 (ತಮೋರೆ 115, ಜೈಸ್ವಾಲ್‌ 100, ಮುಲಾನಿ 50, ಸಫ‌ìರಾಜ್‌ 40, ಕರನ್‌ ಶರ್ಮ 46ಕ್ಕೆ 4, ಸೌರಭ್‌ ಕುಮಾರ್‌ 107ಕ್ಕೆ 3, ಯಶ್‌ ದಯಾಳ್‌ 51ಕ್ಕೆ 2). ಉತ್ತರ ಪ್ರದೇಶ-2 ವಿಕೆಟಿಗೆ 25 (ಕೌಶಿಕ್‌ ಬ್ಯಾಟಿಂಗ್‌ 11. ಕರಣ್‌ ಶರ್ಮ ಬ್ಯಾಟಿಂಗ್‌ 10, ಕುಲಕರ್ಣಿ 14ಕ್ಕೆ 1, ದೇಶಪಾಂಡೆ 10ಕ್ಕೆ 1).

ತಿವಾರಿ-ಶಬಾಜ್‌ ಹೋರಾಟ ಜಾರಿ
ಬೆಂಗಳೂರು: ಮಧ್ಯ ಪ್ರದೇಶ ವಿರುದ್ಧದ ಇನ್ನೊಂದು ಸೆಮಿಫೈನಲ್‌ನಲ್ಲಿ ಮನೋಜ್‌ ತಿವಾರಿ-ಶಬಾಜ್‌ ಅಹ್ಮದ್‌ ಬಂಗಾಲದ ಹೋರಾಟವನ್ನು ಜಾರಿಯಲ್ಲಿರಿಸಿದ್ದಾರೆ.

ಮಧ್ಯ ಪ್ರದೇಶದ 341 ರನ್ನುಗಳ ಮೊತ್ತಕ್ಕೆ ಜವಾಬು ನೀಡಲಾರಂಭಿಸಿದ ಬಂಗಾಲ 54 ರನ್‌ ಮಾಡುವಷ್ಟರಲ್ಲಿ 5 ವಿಕೆಟ್‌ ಉರುಳಿಸಿಕೊಂಡಿತ್ತು. ಕುಮಾರ ಕಾರ್ತಿಕೇಯ ಮೊದಲ ಓವರ್‌ನಲ್ಲೇ ಅಭಿಷೇಕ್‌ ರಮಣ್‌ ಮತ್ತು ಸುದೀಪ್‌ ಕುಮಾರ್‌ ಗರಾಮಿ ಅವರನ್ನು ಶೂನ್ಯಕ್ಕೆ ಕೆಡವಿ ಬಲವಾದ ಆಘಾತವಿಕ್ಕಿದರು. ಆದರೆ ಪಶ್ಚಿಮ ಬಂಗಾಲದ ಕ್ರೀಡಾ ಸಚಿವ ಮನೋಜ್‌ ತಿವಾರಿ ಹಿಂದಿನ ಪಂದ್ಯಗಳ ಫಾರ್ಮನ್ನೇ ಮುಂದುವರಿಸಿ ಅಜೇಯ 84 ರನ್‌ ಬಾರಿಸಿದರು. ಇವರೊಂದಿಗೆ ಶಬಾಜ್‌ ಅಹ್ಮದ್‌ 72 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮುರಿಯದ 6ನೇ ವಿಕೆಟಿಗೆ 143 ರನ್‌ ಒಟ್ಟುಗೂಡಿದೆ. ಬಂಗಾಲ ಇನ್ನೂ 144 ರನ್ನುಗಳ ಹಿನ್ನಡೆಯಲ್ಲಿದೆ.

ಮಧ್ಯ ಪ್ರದೇಶ ಪರ ಆರಂಭಕಾರ ಹಿಮಾಂಶು ಮಂತ್ರಿ 165 ರನ್‌ (327 ಎಸೆತ, 19 ಬೌಂಡರಿ, 1 ಸಿಕ್ಸರ್‌), ಅಕ್ಷತ್‌ ರಘುವಂಶಿ 63 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌: ಮಧ್ಯ ಪ್ರದೇಶ-341 (ಹಿಮಾಂಶು ಮಂತ್ರಿ 165, ರಘುವಂಶಿ 63, ಪುನೀತ್‌ ದಾಟೆ 33, ಮುಕೇಶ್‌ ಕುಮಾರ್‌ 66ಕ್ಕೆ 4, ಶಬಾಜ್‌ ಅಹ್ಮದ್‌ 86ಕ್ಕೆ 3, ಆಕಾಶ್‌ ದೀಪ್‌ 73ಕ್ಕೆ 2). ಬಂಗಾಲ-5 ವಿಕೆಟಿಗೆ 197 (ತಿವಾರಿ ಬ್ಯಾಟಿಂಗ್‌ 84, ಶಬಾಜ್‌ ಬ್ಯಾಟಿಂಗ್‌ 72, ಎ. ಈಶ್ವರನ್‌ 22, ಕಾರ್ತಿಕೇಯ 43ಕ್ಕೆ 2, ದಾಟೆ 34ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next