Advertisement

ರಣಜಿ  ಸೆಮಿಫೈನಲ್‌: ಮಾಯಾಂಕ್‌ ಅದ್ಭುತ, ಕರ್ನಾಟಕ ಬೃಹತ್‌ ಮೊತ್ತ

11:42 PM Feb 09, 2023 | Team Udayavani |

ಬೆಂಗಳೂರು: ಸೌರಾಷ್ಟ್ರ ವಿರುದ್ಧದ ರಣಜಿ ಸೆಮಿಫೈನಲ್‌ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ ಬೃಹತ್‌ ಮೊತ್ತ ಗಳಿಸಿದೆ.

Advertisement

ಬುಧವಾರ ಸಾಮಾನ್ಯ ಆಟವಾಡಿ 229 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಕರ್ನಾಟಕ, ಗುರುವಾರ  407 ರನ್‌ಗಳಿಗೆ ಆಲೌಟಾಗಿದೆ. ನಾಯಕ ಮಾಯಾಂಕ್‌ ಅಗರ್ವಾಲ್‌ ಅದ್ಭುತ ಆಟವಾಡಿ 249 ರನ್‌ ಗಳಿಸಿದ್ದಾರೆ. ಮಾತ್ರವಲ್ಲ ಭಾರತ ಟೆಸ್ಟ್‌ ತಂಡಕ್ಕೆ ಮರಳುವ ಬಲವಾದ ಸುಳಿವು ನೀಡಿದ್ದಾರೆ.

ಒಂದು ಕಾಲದಲ್ಲಿ ಮಾಯಾಂಕ್‌ ಭಾರತ ತಂಡದ ಆರಂಭಿಕರಾಗಿದ್ದರು. ಇತ್ತೀಚೆಗೆ ಸ್ಥಾನ ಕಳೆದುಕೊಂಡವರು, ತಂಡದಲ್ಲಿನ ಬಲವಾದ ಪೈಪೋಟಿಯಿಂದ ಮರಳಿ ಸ್ಥಾನ ಪಡೆಯಲಾಗದೇ ಒದ್ದಾಡುತ್ತಿದ್ದಾರೆ. ಈಗ ಮತ್ತೆ ಅತ್ಯುತ್ತಮ ಆಟವಾಡುವ ಮೂಲಕ ತಾನಿನ್ನೂ ಪೈಪೋಟಿಯಲ್ಲಿದ್ದೇನೆ ಎಂಬ ಖಚಿತ ಸಂದೇಶ ನೀಡಿದ್ದಾರೆ.

ಕರ್ನಾಟಕದ ಪೂರ್ಣ ಇನಿಂಗ್ಸ್‌ನಲ್ಲಿ ಉತ್ತಮವಾಗಿ ಆಡಿದ್ದು ಮಾಯಾಂಕ್‌ ಮಾತ್ರ. ಅವರನ್ನು ಹೊರತುಪಡಿಸಿದರೆ ಎಸ್‌.ಶರತ್‌ ಅರ್ಧಶತಕ ಬಾರಿಸಿದರು. ಬುಧವಾರ ಅಜೇಯ 110 ರನ್‌ ಗಳಿಸಿದ್ದ ಮಾಯಾಂಕ್‌ ಗುರುವಾರ ಅಮೋಘವಾಗಿ ಬೆಳೆದರು. ಅವರು ಒಟ್ಟು 429 ಎಸೆತಗಳನ್ನು ಎದುರಿಸಿ, 28 ಬೌಂಡರಿ, 6 ಸಿಕ್ಸರ್‌ಗಳನ್ನು ಬಾರಿಸಿದರು. ರಾಜ್ಯದ ಮೊತ್ತ 400 ರನ್‌ಗಳನ್ನು ತಲುಪಲು ಇದೇ ಮುಖ್ಯ ಕಾರಣ. 249 ರನ್‌ಗಳಿಗೆ ಕೊನೆಯವರಾಗಿ ಅವರು ರನೌಟಾದರು. ಅಷ್ಟರಲ್ಲಿ ತಂಡದ ಸ್ಥಿತಿ ಭದ್ರಗೊಂಡಿತ್ತು.

ಇನ್ನು ಶರತ್‌ ಬುಧವಾರ 58 ರನ್‌ ಗಳಿಸಿದ್ದವರು, ಗುರುವಾರ 66 ರನ್‌ಗಳಾಗುವಾಗ ಆಟ ಮುಗಿಸಿದರು. ಉಳಿದಂತೆ ಕೆ.ವಿದ್ವತ್‌ 15 ರನ್‌ ಗಳಿಸಿ ಮಾಯಾಂಕ್‌ಗೆ ನೆರವು ನೀಡಿದರು. ಉಳಿದ ಯಾರೂ ಕೈಹಿಡಿಯಲಿಲ್ಲ. ಉಳಿದೆಲ್ಲ ಆಟಗಾರರ ವೈಫ‌ಲ್ಯದ ನಡುವೆಯೂ ತಂಡ ಬೃಹತ್‌ ಮೊತ್ತ ಗಳಿಸಿದೆ ಎನ್ನುವುದೇ ಸಮಾಧಾನಕರ ಸಂಗತಿ. ಸೌರಾಷ್ಟ್ರ ಪರ ಚೇತನ್‌ ಸಕಾರಿಯ, ಕುಶಾಂಗ್‌ ಪಟೇಲ್‌ ತಲಾ 3 ವಿಕೆಟ್‌ ಪಡೆದರು.

Advertisement

ಸೌರಾಷ್ಟ್ರ 76ಕ್ಕೆ2: ಕರ್ನಾಟಕದ ಬೃಹತ್‌ ಮೊತ್ತಕ್ಕೆ ಪ್ರತಿಯಾಗಿ ತನ್ನ 1ನೇ ಇನಿಂಗ್ಸ್‌ ಆರಂಭಿಸಿರುವ ಸೌರಾಷ್ಟ್ರ 2 ವಿಕೆಟ್‌ಗಳ ನಷ್ಟಕ್ಕೆ 76 ರನ್‌ ಗಳಿಸಿದೆ. ಅದೂ ಕೂಡ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಸದ್ಯ ತಲಾ 27 ರನ್‌ ಗಳಿಸಿರುವ ಹಾರ್ವಿಕ್‌ ದೇಸಾಯಿ, ಶೆಲ್ಡನ್‌ ಜಾಕ್ಸನ್‌ ಕ್ರೀಸ್‌ನಲ್ಲಿದ್ದಾರೆ. ಸ್ನೆಲ್‌ ಪಟೇಲ್‌, ವಿಶ್ವರಾಜ್‌ ಜಡೇಜ ಬೇಗನೆ ಔಟಾಗಿದ್ದಾರೆ. ಸದ್ಯ ಕ್ರೀಸ್‌ನಲ್ಲಿರುವ ಜಾಕ್ಸನ್‌-ದೇಸಾಯಿ ಮೇಲೆ ಸೌರಾಷ್ಟ್ರ ಭವಿಷ್ಯವಿದೆ.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 1ನೇ ಇನಿಂಗ್ಸ್‌ 407 ಆಲೌಟ್‌ (ಮಾಯಾಂಕ್‌ ಅಗರ್ವಾಲ್‌ 249, ಎಸ್‌.ಶರತ್‌ 66, ಚೇತನ್‌ ಸಕಾರಿಯ 73ಕ್ಕೆ 3, ಕುಶಾಂಗ್‌ ಪಟೇಲ್‌ 109ಕ್ಕೆ 3). ಸೌರಾಷ್ಟ್ರ 1ನೇ ಇನಿಂಗ್ಸ್‌ 76/2.

ಬಂಗಾಳ-ಮ.ಪ್ರ.: ಇನಿಂಗ್ಸ್‌ ಮುನ್ನಡೆಗೆ ಪೈಪೋಟಿ :

ಇಂದೋರ್‌: ಹಾಲಿ ಚಾಂಪಿಯನ್‌ ಮಧ್ಯಪ್ರದೇಶ ಮತ್ತು ಬಂಗಾಳ ನಡುವಿನ ಮತ್ತೂಂದು ಸೆಮಿಫೈನಲ್‌ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆಗಾಗಿ ಪೈಪೋಟಿ ಎದುರಾಗುವ ಸಾಧ್ಯತೆ ಕಂಡುಬಂದಿದೆ. 4ಕ್ಕೆ 307 ರನ್‌ ಮಾಡಿದಲ್ಲಿಂದ ದ್ವಿತೀಯ ದಿನದಾಟ ಮುಂದುವರಿಸಿದ ಬಂಗಾಳ 438ಕ್ಕೆ ಆಲೌಟ್‌ ಆಯಿತು. ಜವಾಬಿತ್ತ ಎಂಪಿ 2 ವಿಕೆಟಿಗೆ 56 ರನ್‌ ಗಳಿಸಿದೆ.

ಒಟ್ಟಾರೆಯಾಗಿ ದ್ವಿತೀಯ ದಿದನಾಟದಲ್ಲಿ ಮಧ್ಯಪ್ರದೇಶವೇ ಮೇಲುಗೈ ಸಾಧಿಸಿತು ಎನ್ನಲಡ್ಡಿಯಿಲ್ಲ. ಅದು ಬಂಗಾಳದ ಉಳಿದ 6 ವಿಕೆಟ್‌ಗಳನ್ನು ಕೇವಲ 131 ರನ್‌ ಅಂತರದಲ್ಲಿ ಉರುಳಿಸಿತು. ಕೀಪರ್‌ ಅಭಿಷೇಕ್‌ ಪೊರೆಲ್‌ (51) ಮತ್ತು ನಾಯಕ ಮನೋಜ್‌ ತಿವಾರಿ (42) 6ನೇ ವಿಕೆಟಿಗೆ 78 ರನ್‌ ಪೇರಿಸಿ ಬಂಗಾಳದ ಮೊತ್ತವನ್ನು 400ರ ಗಡಿ ದಾಟಿಸಿದರು. ಎಂಪಿ ಪರ ಕುಮಾರ ಕಾರ್ತಿಕೇಯ 3, ಗೌರವ್‌ ಯಾದವ್‌ ಮತ್ತು ಅನುಭವ್‌ ಅಗರ್ವಾಲ್‌ ತಲಾ 2 ವಿಕೆಟ್‌ ಕಿತ್ತರು. ಮಧ್ಯಪ್ರದೇಶ ಈಗಾಗಲೇ ಆರಂಭಿಕರಿಬ್ಬರನ್ನೂ ಕಳೆದುಕೊಂಡಿದೆ. ಯಶ್‌ ದುಬೆ (12) ಮತ್ತು ಹಿಮಾಂಶು ಮಂತ್ರಿ (23) ಪೆವಿಲಿಯನ್‌ ಸೇರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next